ಕ್ಷುಲ್ಲಕ ರಾಜಕಾರಣ ಬಿಟ್ಟು ಸಮಸ್ಯೆಗಳಿಗೆ ಸ್ಪಂದಿಸಿ; ಸರಿತಾ ಪೂಣಚ್ಚ ಒತ್ತಾಯ

SARITHA POONACHA
Published on

ಮಡಿಕೇರಿ:ವನ್ಯಜೀವಿಗಳ ದಾಳಿ, ಪ್ರಾಕೃತಿಕ ವಿಕೋಪದಿಂದಾದ ನಷ್ಟ ಸೇರಿದಂತೆ ಅನೇಕ ಸಮಸ್ಯೆಗಳನ್ನು ಕೊಡಗಿನ ಜನ ಎದುರಿಸುತ್ತಿದ್ದಾರೆ. ಸಮಸ್ಯೆಗಳಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸಬೇಕಾದ ಆಡಳಿತ ಪಕ್ಷ ಬಿಜೆಪಿಯ ಪ್ರತಿನಿಧಿಗಳು ಕ್ಷುಲ್ಲಕ ರಾಜಕಾರಣದಲ್ಲಿ ಕಾಲಹರಣ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ಸದಸ್ಯೆ ಹಾಗೂ ಕೊಡಗು ಕಾಂಗ್ರೆಸ್ ವಕ್ತಾರೆ ಕೇಚಮಾಡ ಸರಿತಾ ಪೂಣಚ್ಚ ಆರೋಪಿಸಿದ್ದಾರೆ.


ಬಿಜೆಪಿ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ ಎಲ್ಲೆಡೆ ಕೇಳಿ ಬಂದಿದೆ. ಆದರೆ ಕಮಿಷನ್ ಪಡೆದಿದ್ದಕ್ಕೆ ದಾಖಲೆ ಕೊಡಿ ಎಂದು ಕೆಲವರು ಕೇಳುತ್ತಿದ್ದು, ಇದು ಹಾಸ್ಯಾಸ್ಪದ ಸವಾಲಾಗಿದೆ ಎಂದು ಟೀಕಿಸಿದ್ದಾರೆ.


ಸರ್ಕಾರದ ದುರಾಡಳಿತದಿಂದ ಕರ್ನಾಟಕ ರಾಜ್ಯ ಮುಜುಗರಕ್ಕೊಳಗಾಗುತ್ತಿದೆ. ಬಿಜೆಪಿ ನೇತೃತ್ವದ ಸರ್ಕಾರ ದೇಶ ಮತ್ತು ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ನಂತರ ಜನರು ಅನೇಕ ಸಂಕಷ್ಟ ಎದುರಿಸಿದ್ದಾರೆ. ಅಭಿವೃದ್ಧಿಯ ಹೆಸರಿನಲ್ಲಿ ಸಾರ್ವಜನಿಕರ ತೆರಿಗೆ ಹಣ ದುರುಪಯೋಗವಾಗುತ್ತಿದೆ. ಜಾತಿ, ಧರ್ಮದ ಹೆಸರಿನಲ್ಲಿ ಅಶಾಂತಿಯ ವಾತಾವರಣ ಸೃಷ್ಟಿಯಾಗುತ್ತಿದೆ. ಇಡಿ, ಎನ್‌ಐಎ ತನಿಖಾ ಸಂಸ್ಥೆಗಳಲ್ಲಿ ಹಸ್ತಕ್ಷೇಪ ಮಾಡಲಾಗುತ್ತಿದೆ. ಸರ್ಕಾರಿ ಸಂಸ್ಥೆಗಳನ್ನು ಖಾಸಗೀಕರಣ ಮಾಡುವ ಹುನ್ನಾರ ನಡೆಯುತ್ತಿದೆ ಎಂದು ಆರೋಪಿಸಿದರು.


ಪ್ರಜ್ಞಾವಂತರು ಬಿಜೆಪಿ ದುರಾಡಳಿತದ ವಿರುದ್ಧ ಜಾಗೃತರಾಗುತ್ತಿದ್ದಾರೆ ಎನ್ನುವುದಕ್ಕೆ ರಾಷ್ಟ್ರೀಯ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆಯಲ್ಲಿ ಸೇರುತ್ತಿರುವ ಜನಸ್ತೋಮವೇ ಸಾಕ್ಷಿಯಾಗಿದೆ. ಕಾರ್ಯಕರ್ತರು ಕೂಡ ಅತಿ ಹುಮ್ಮಸ್ಸಿನಿಂದ ಪಕ್ಷ ಸಂಘಟನೆಯಲ್ಲಿ ತೊಡಗಿದ್ದು, ಇನ್ನು ಮುಂದೆ ಬಿಜೆಪಿಯ ಕುತಂತ್ರ ರಾಜಕಾರಣ ನಡೆಯುವುದಿಲ್ಲವೆಂದು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net