

ಚಳ್ಳಕೆರೆ: ಸ್ಪರ್ಧಾ ಸಮಾಜದಲ್ಲಿ ಬೆಳೆಯುತ್ತಿರುವ ವಿದ್ಯಾರ್ಥಿಗಳಲ್ಲಿ ವೈಚಾರಿಕ ಚಿಂತನೆ, ವಿಜ್ಞಾನದ ಆಸಕ್ತಿ ಹೆಚ್ಚಾಗಬೇಕು ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.
ಸಾರ್ವಜನಿಕ ಶಿಕ್ಷಣ ಇಲಾಖೆ ನಗರದ ವಾಲ್ಮೀಕಿ ನಗರದಲ್ಲಿನ ಕುವೆಂಪು ಶಾಲೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳ ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮೂಢನಂಬಿಕೆಗಳನ್ನು ವಿರೋಧಿಸುವ ಜತೆಗೆ ಈ ಕುರಿತು ಜನರಲ್ಲಿ ಜಾಗೃತಿ ಮೂಡಿಸಬೇಕು. ವಸ್ತು ವಿಷಯ ಅಧ್ಯಯನ ಮತ್ತು ವೈಜ್ಞಾನಿಕ ಜಾಗೃತಿ ವಿದ್ಯಾರ್ಥಿಗಳಲ್ಲಿ ಬೆಳೆಯಬೇಕು. ಹೊಸ ಆವಿಷ್ಕಾರದಂತೆ ಪ್ರಗತಿಪರ ಚಿಂತನೆ ರೂಢಿಸಿಕೊಳ್ಳಬೇಕು. ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳು ವಿದ್ಯಾರ್ಥಿ ಬದುಕಿನ ಅವಿಭಾಜ್ಯ ಅಂಗ ಆಗಬೇಕು ಎಂದು ಹೇಳಿದರು.
ತಾಲೂಕಿನ 11,800 ಎಕರೆ ಭೂ ಸಂಪತ್ತನ್ನು ವಿಜ್ಞಾನ ಸಂಸ್ಥೆಗಳ ಸ್ಥಾಪನೆಗೆ ನೀಡುವ ಮೂಲಕ ಚಳ್ಳಕೆರೆ ವಿಶ್ವದ ಭೂಪಟದಲ್ಲಿ ದಾಖಲಾಗಿದೆ. ಇಲ್ಲಿನ ಡಿಆರ್‌ಡಿಒ, ಬಾರ್ಕ್ ವಿಜ್ಞಾನ ಸಂಸ್ಥೆಗಳು ದೇಶ ರಕ್ಷಣೆಯ ತಂತ್ರಜ್ಞಾನ ರೂಪಿಸುತ್ತಿವೆ. ಇಂತಹ ವಿಜ್ಞಾನ ಪ್ರಗತಿಪರ ನೆಲೆಯಲ್ಲಿ ವಿದ್ಯಾರ್ಥಿಗಳು ವೈಜ್ಞಾನಿಕ ಅಧ್ಯಯನದಲ್ಲಿ ಸಾಧನೆ ಮಾಡಬೇಕು. ಕಳೆದ ವರ್ಷಕ್ಕಿಂತ ಪ್ರಸ್ತಕ ವರ್ಷದ ಫಲಿತಾಂಶ ರಾಜ್ಯಕ್ಕೆ ಮಾದರಿ ಆಗಬೇಕು ಎಂದು ಹೇಳಿದರು.
ನಿವೃತ್ತ ಪ್ರಾಚಾರ್ಯ ಡಾ.ಸಿ.ಶಿವಲಿಂಗಪ್ಪ ಮಾತನಾಡಿ, ತಾಲೂಕಿನ ಶೈಕ್ಷಣಿಕ ಅಭಿವೃದ್ಧಿಗೆ ಶಾಸಕರ ಕೊಡುಗೆ ಅಪಾರ. ಇಂಜಿನಿಯರಿಂಗ್ ಕಾಲೇಜು ಸೇರಿ ವಸತಿಯುತ ಶಿಕ್ಷಣ ಸಂಸ್ಥೆಗಳ ಸ್ಥಾಪನೆಯಲ್ಲಿ ದಾಖಲೆ ಮಾಡಿದ್ದಾರೆ. ಸರ್ಕಾರಿ ಶಾಲಾ-ಕಾಲೇಜುಗಳ ಮೂಲ ಸೌಕರ್ಯಗಳ ಕೊರತೆ ಗುರುತಿಸಿಕೊಂಡು ಇನ್ನಷ್ಟು ಶಾಲೆಗಳ ಬಲವರ್ಧನೆಗೆ ನೆರವು ನೀಡಬೇಕು ಎಂದು ಮನವಿ ಮಾಡಿದರು.
ಮುಂಗಾರು ಮಳೆ ಸಂಪೂರ್ಣ ಕೊರತೆಯಿಂದ ಬೆಳೆ ನಷ್ಟವಾಗಿದೆ. ಬೆಳೆ ಪರಿಹಾರ ಮತ್ತು ಬೆಳೆ ವಿಮೆ ರೈತರಿಗೆ ಕೊಡಿಸುವಲ್ಲಿ ಶಾಸಕರು ಸರ್ಕಾರದ ಹಂತದಲ್ಲಿ ಪ್ರಯತ್ನ ಮಾಡಬೇಕು ಎಂದು ಹೇಳಿದರು.
ಬಿಇಒ ಕೆ.ಎಸ್.ಸುರೇಶ್ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಜಗತ್ತಿನ ಸೃಷ್ಟಿ, ವಿಸ್ಮಯ ತಿಳಿದುಕೊಳ್ಳುವ ಆಸಕ್ತಿ ಇರಬೇಕು. ವಿಜ್ಞಾನದ ಜಾಗೃತಿ ಮತ್ತು ಅಮೂರ್ತ ವಿಷಯಗಳ ಪರಿಕಲ್ಪನೆಗಳ ಬಗ್ಗೆ ತಿಳಿದುಕೊಳ್ಳಬೇಕು. ಮೌಢ್ಯ ಆಚರಣೆಗಳ ವಿರುದ್ಧ ತರ್ಕಬದ್ಧ ಆಲೋಚನೆ ಮತ್ತು ಪ್ರಶ್ನಿಸುವ ಗುಣ ಬೆಳೆಸಿಕೊಳ್ಳಬೇಕು ಎಂದರು.
ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಜೆ.ರಾಘವೇಂದ್ರ, ಪೌರಾಯುಕ್ತ ಸಿ. ಚಂದ್ರಪ್ಪ, ಪ್ರೌಢಶಾಲಾ ಮುಖ್ಯಶಿಕ್ಷಕರ ಸಂಘದ ತಾಲೂಕಾಧ್ಯಕ್ಷ ಡಿ.ಟಿ.ಶ್ರೀನಿವಾಸನ್, ಸಹ ಶಿಕ್ಷಕರ ಸಂಘದ ತಾಲೂಕಾಧ್ಯಕ್ಷ ಬಿ.ರಾಜಕುಮಾರ್, ಕಾರ್ಯದರ್ಶಿ ಬಿ.ಎಸ್.ಪಾಲಯ್ಯ, ಮುಖ್ಯಶಿಕ್ಷಕ ಎನ್.ತಿಪ್ಪೇಸ್ವಾಮಿ, ಮಾರುತಿ ಭಂಡಾರಿ, ಗಿರೀಶ್‌ಬಾಬು, ಸಿ.ಎಂ. ಶಿವಕುಮಾರ್, ಬಿ. ವೃಂದಾ, ರಂಗನಾಥ, ಬಸವರಾಜ್, ಶಿವರಾಜ್ ಇತರರಿದ್ದರು.