ಹಠ ಬಿಟ್ಟು ದೇವರ ಸೇವೆಗೆ ಮುಂದಾಗಿ

14blrp1
Published on

ಬೇಲೂರು: ದೇವರ ಸೇವೆ ಹೆಮ್ಮೆ ಪಡುವ ಕೆಲಸವಾಗಿದ್ದು, ಅಡ್ಡೆಗಾರರು ತಮ್ಮ ಹಠ ಬಿಟ್ಟು ದೇಗುಲದ ಉತ್ಸವಗಳ ಅಡ್ಡೆ ಹೊರಲು ಮುಂದಾಗಬೇಕು ಎಂದು ಜಿಲ್ಲಾಧಿಕಾರಿ ಸತ್ಯಭಾಮಾ ಸಲಹೆ ನೀಡಿದರು.


ಶನಿವಾರ ಪಟ್ಟಣದ ದೇಗುಲಕ್ಕೆ ಆಗಮಿಸಿದ ಸಂದರ್ಭ, ಶ್ರೀ ಚನ್ನಕೇಶವಸ್ವಾಮಿ ದಾಸೋಹ ಭನದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಅಡ್ಡೆಗಾರರ ಅಹವಾಲು ಆಲಿಸಿದರು.


ಅಡ್ಡೆಗಾರರ ಸಂಘದ ಅಧ್ಯಕ್ಷ ಶೈಲೇಶ್ ಮಾತನಾಡಿ, ತಹಸೀಲ್ದಾರ್ ಎಂ.ಮಮತಾ ಅವರು ರಾಜಕೀಯ ಪ್ರಭಾವಕ್ಕೆ ಒಳಗಾಗಿ ಅಡ್ಡೆಗಾರರಿಗೆ ತೊಂದರೆ ಕೊಡುತ್ತಿದ್ದಾರೆ. ವಿನಾಕಾರಣ ನೋಟಿಸ್ ನೀಡಿದ್ದಾರೆ. ದೇಗುಲ ವ್ಯವಸ್ಥಾಪನಾ ಸಮಿತಿ ಅವರು ಏನೂ ಕೆಲಸ ಮಾಡುತ್ತಿಲ್ಲ. ನಮ್ಮ ಸಮಸ್ಯೆ ಆಲಿಸುತ್ತಿಲ್ಲ. ಹಾಗಾಗಿ ದೇಗುಲ ವ್ಯವಸ್ಥಾಪನಾ ಸಮಿತಿ ರದ್ದು ಪಡಿಸಬೇಕೆಂದು ಆಗ್ರಹಿಸಿದರು.


ಅಡ್ಡೆಗಾರ ವೆಂಕಟೇಶ್ ಮಾತನಾಡಿ, ಅಡ್ಡೆಗಾರರು ದೇಗುಲದ ಕಾರ್ಮಿಕರಲ್ಲ. ನಾವು ಗೌರವಧನ ಪಡೆದು ವಂಶ ಪಾರಂಪರ್ಯವಾಗಿ ಈ ಕೆಲಸ ಮಾಡುತ್ತಿದ್ದೇವೆ. ಆದರೆ ತಹಸೀಲ್ದಾರ್ ಅವರು ನಮ್ಮ ಗೌರವಕ್ಕೆ ಅಪಮಾನ ಮಾಡಿದ್ದಾರೆ ಎಂದು ಆರೋಪಿಸಿದರು.


ಜಿಲ್ಲಾಧಿಕಾರಿ ಪ್ರತಿಕ್ರಿಯಿಸಿ, ಪ್ರತಿಯೊಬ್ಬರೂ ತಮ್ಮ ಹಕ್ಕುಗಳನ್ನು ಪ್ರತಿಪಾದಿಸುವ ಜತೆಗೆ ತಮ್ಮ ಜವಾಬ್ದಾರಿ ಮತ್ತು ಕರ್ತವ್ಯ ಪಾಲಿಸಿದರೆ ಯಾವುದೇ ಸಮಸ್ಯೆ ಉದ್ಭವಿಸುವುದಿಲ್ಲ. ಅಡ್ಡೆಗಾರರು ದೇವಸ್ಥಾನದಲ್ಲಿ ಗೌರವದ ಕೆಲಸ ಮಾಡುತ್ತಿದ್ದು, ಅವರು ಅದನ್ನು ಮುಂದುವರಿಸಿಕೊಂಡು ಹೋಗಬೇಕು ಎಂದರು.
ಕಳೆದ ಬಾರಿ ನಾನು ದೇಗುಲಕ್ಕೆ ಬಂದ ಸಂದರ್ಭದಲ್ಲಿ ದೇಗುಲದಲ್ಲಿ ಅಶುಚಿತ್ವ ಕಾಣುತ್ತಿತ್ತು, ಈಗ ಅದನ್ನು ಸರಿಪಡಿಸಿ ಕೊಂಡಿರುವುದು ಸಂತೋಷದ ವಿಷಯ. ಸಿಡಿಲು ಬಡಿದು ಹಾಳಾಗಿದ್ದ ಗೋಪುರದ ದುರಸ್ತಿಗೆ ಪುರಾತತ್ವ ಇಲಾಖೆಯಿಂದ ಟೆಂಡರ್ ಕರೆಯಲಾಗಿದೆ. ಶೌಚಗೃಹಕ್ಕೆ ಟ್ಯಾಂಕ್ ನಿರ್ಮಿಸಲು ಸಹ ಟೆಂಡರ್ ಕರೆಯಲಾಗಿದೆ. ಬಯಲುರಂಗ ಮಂಟಪ ದುರಸ್ತಿಗೆ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.


ತಹಸೀಲ್ದಾರ್ ಎಂ.ಮಮತಾ, ಮುಜರಾಯಿ ತಹಸೀಲ್ದಾರ್ ಲತಾ, ಚನ್ನಕೇಶವಸ್ವಾಮಿ ದೇಗುಲ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ನಾರಾಯಣಸ್ವಾಮಿ, ಅರ್ಚಕರಾದ ಶ್ರೀನಿವಾಸ ಭಟ್ಟರ್, ದೇಗುಲದ ಇಒ ಯೋಗೇಶ್, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ರವಿಶಂಕರ್, ವಿಜಯಲಕ್ಷ್ಮೀ, ಪ್ರಮೋದ್, ಅಡ್ಡೆಗಾರರಾದ ಚಂದ್ರು, ಗೋಪಾಲ, ದೇವರಾಜು, ಜಗದೀಶ್ ಇತರರು ಇದ್ದರು.


ತಹಸೀಲ್ದಾರ್ ಪರ ಕ್ಷಮೆಯಾಚಿಸಿದ ಡಿಸಿ: ಅಡ್ಡೆಗಾರರ ವಿವಾದವನ್ನು ಜಿಲ್ಲಾಧಿಕಾರಿ ಬಗ್ಗೆಹರಿಸುವ ಸಂದರ್ಭದಲ್ಲಿ ಅಡ್ಡೆಗಾರರಾದ ಶೈಲೇಶ್ ಮತ್ತು ವೆಂಕಟೇಶ್ ಸೇರಿದಂತೆ ಇತರರು ತಹಸೀಲ್ದಾರ್ ಎಂ.ಮಮತಾ ಅವರಿಂದ ಕ್ಷಮೆ ಕೇಳಿಸುವಂತೆ ಪಟ್ಟು ಹಿಡಿದರು. ಈ ಸಂದರ್ಭ ಜಿಲ್ಲಾಧಿಕಾರಿ ಸತ್ಯಭಾಮಾ ತಪ್ಪು ಆಗಬಾರದಿತ್ತು, ಆದರೆ ಆಗಿದೆ. ಧಾರ್ಮಿಕ ದತ್ತಿ ಆಯುಕ್ತರ ಸೂಚನೆಯಂತೆ ತಹಸೀಲ್ದಾರ್ ನಡೆದುಕೊಂಡಿದ್ದಾರೆ. ಇದನ್ನು ಮಂದುವರಿಸಬೇಡಿ, ತಹಸೀಲ್ದಾರ್ ಹಾಗೂ ಎಲ್ಲರ ಪರವಾಗಿ ನಾನೇ ಕ್ಷಮೆ ಕೇಳುತ್ತೇನೆ ಎಂದು ಜಿಲ್ಲಾಧಿಕಾರಿ ಕ್ಷಮೆಯಾಚಿಸಿದರು. ಇದನ್ನು ಒಪ್ಪಂದ ಅಡ್ಡೆಗಾರರು ತಹಸೀಲ್ದಾರ್ ಅವರಿಂದಲೇ ಕ್ಷಮೆ ಕೇಳಿಸುವಂತೆ ಒತ್ತಾಯಿಸಿದರು. ಈ ಸಂದರ್ಭದಲ್ಲಿ ನೆರೆದಿದ್ದ ಅಡ್ಡೆಗಾರರ ಹಿರಿಯ ಸದಸ್ಯರು ಮತ್ತು ಸಾರ್ವಜನಿಕರ ಒತ್ತಾಯದ ಮೇರೆಗೆ ಅಡ್ಡೆಗಾರರು ಶಾಂತರಾಗಿ ಅಡ್ಡೆ ಹೊರುವುದನ್ನು ಮುಂದುವರಿಸಿಕೊಂಡು ಹೋಗುವುದು ಸಮ್ಮತಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net