

ಇಳಕಲ್ಲ(ಗ್ರಾ) : ದುಶ್ಚಟಗಳಿಂದ ನಾವು ಮುಕ್ತಗೊಂಡರೆ ಸಮಾಜ ನಮ್ಮನ್ನು ಗೌರವಿಸುತ್ತದೆ. ಸುಂದರ ನೆಮ್ಮದಿಯ ಬದುಕಿಗೆ ಪ್ರತಿಯೊಬ್ಬರೂ ಸಾರಾಯಿ, ಗುಟಕಾ, ಧೂಮಪಾನ, ಇಸ್ಪೀಟು, ಜುಜಾಟ ತ್ಯಜಿಸಬೇಕು ಎಂದು ಕನಕಗಿರಿ-ಕಂದಗಲ್ಲ ಸುವರ್ಣ ಗಿರಿ ಸಂಸ್ಥಾನಮಠದ ಡಾ.ಚನ್ನಮಲ್ಲ ಸ್ವಾಮಿಗಳು ಹೇಳಿದರು.
ಕಂದಗಲ್ಲ ಗ್ರಾಮದಲ್ಲಿ ‘ದುಶ್ಚಟಗಳ ಭೀಕ್ಷೆ ಸದ್ಗುರುಗಳ ದೀಕ್ಷೆ’ ಅಭಿಯಾನದೊಂದಿಗೆ ಸೋಮವಾರ ಬೆಳಗಿನ ಜಾವ ಪಾದಯಾತ್ರೆ ಮಾಡುವಾಗ ಅವರು ಮಾತನಾಡಿದರು.
ಸಂಸ್ಕಾರ ಕೊರತೆಯಿಂದಾಗಿ ತರುಣರು ದುಶ್ಚಟಗಳಿಗೆ ಬಲಿಯಾಗಿ ಅಮೂಲ್ಯವಾದ ಬದುಕನ್ನು ಹಾಳು ಮಾಡಿಕೊಳ್ಳುತ್ತಿರುವುದು ವಿಷಾದನೀಯ. ಚಟಗಳು ನಮ್ಮ ಬದುಕನ್ನು ಹಾಳು ಮಾಡುತ್ತವೆ.
ಕೊನೆಗೆ ಸಮಾಜದಲ್ಲಿಯೂ ತಿರಸ್ಕರಿಸಲ್ಪಡುತ್ತಾರೆ. ಇದನ್ನು ಅರಿತು ಪ್ರತಿಯೊಬ್ಬರೂ ದುಶ್ಚಟಗಳಿಂದ ದೂರವಿದ್ದು ವ್ಯಸನಮುಕ್ತ ಬದುಕನ್ನು ರೂಪಿಸಿಕೊಳ್ಳಬೇಕು ಎಂದರು.
ಗಡಿಗೌಡಗಾಂವದ ಹಾವಲಿಂಗೇಶ್ವರ ಸಂಸ್ಥಾನ ಹಿರೇಮಠದ ಡಾ.ಶಾಂತವೀರ ಶಿವಾಚಾರ್ಯರು ಮಾತನಾಡಿ, ಕನಕಗಿರಿ ಕಂದಗಲ್ಲ ಸುವರ್ಣ ಗಿರಿ ಮಠದ ಡಾ.ಚನ್ನಮಲ ಸ್ವಾಮಿಗಳು ಗ್ರಾಮದ ಭಕ್ತರ ಇಚ್ಛೆಯಂತೆ ಶ್ರಾವಣ ಮಾಸದ ನಿಮಿತ್ತ ಕಲಬುರ್ಗಿ ಶರಣಬಸವೇಶ್ವರ ಜೀವನ ದರ್ಶನ ಪುರಾಣ ಪ್ರವಚನವನ್ನು ರುದ್ರಸ್ವಾಮಿ ಮಠದಲ್ಲಿ ಏರ್ಪಡಿಸಿದ್ದು ಸ್ಮರಣೀಯ.
ಪ್ರತಿದಿನ ಸಂಜೆ 7 ರಿಂದ 9 ವರೆಗೆ ನಡೆಯುವ ಪ್ರವಚನ ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರಾವಣದ ಮಹತ್ವ ಅರಿಯಬೇಕು ಎಂದರು.
ದುಡಿದು ಮನೆಗೆ ಆಸರೆಯಾಗಿ ನಿಲ್ಲಬೇಕಾದ ಯುವಕರು ಧೂಮಪಾನ, ಮದ್ಯಪಾನ, ಗುಟಖಾ, ಜೂಜು, ಮೋಜಿಗೆ ಮರುಳಾಗುವುದನ್ನು ತಪ್ಪಿಸಲು ಚಟಗಳನ್ನು ತಮ್ಮ ಜೋಳಿಗೆಗೆ ಹಾಕುವಂತೆ ಶ್ರೀಗಳು ಜನಜಾಗೃತಿ ಮೂಡಿಸುತ್ತಿರುವುದು ಶ್ಲಾಘನಿಯ ಎಂದರು.
ಡಾ.ಚನ್ನಮಲ್ಲ ಶ್ರೀಗಳು, ಡಾ.ಶಾಂತವೀರ ಶ್ರೀಗಳು ಕಂದಗಲ್ಲ ಗ್ರಾಮದಲ್ಲಿ ಸೋಮವಾರ ಬೆಳಗ್ಗೆ ಭಕ್ತರೊಂದಿಗೆ ಜೋಳಿಗೆ ಹಿಡಿದು ಗ್ರಾಮದ ಪ್ರತಿಯೊಂದು ವಾರ್ಡ್‌ನಲ್ಲಿ ಪಾದಯಾತ್ರೆ ಕೈಗೊಂಡರು.
ಪ್ರತಿಯೊಬ್ಬ ಚಟಗಾರರ ದುಶ್ಚಟಗಳನ್ನು ಶ್ರೀಗಳು ತಮ್ಮ ಜೋಳಿಗೆಗೆ ಹಾಕಿಸಿಕೊಂಡು ರುದ್ರಾಕ್ಷಿ ಧಾರಣೆ ಮಾಡಿಸಿದರು. ಪಾದಯಾತ್ರೆಯಲ್ಲಿ ಗ್ರಾಮದ ಹಿರಿಯರು, ಯುವಕರು, ವಿದ್ಯಾರ್ಥಿಗಳು, ಮಹಿಳೆಯರು ಪಾಲ್ಗೊಂಡಿದ್ದರು.