

ಬೆಳಗಾವಿ: ವಿದ್ಯಾರ್ಥಿಗಳು ದುಶ್ಚಟಗಳಿಂದ ದೂರವಿದ್ದು ಆರೋಗ್ಯದೆಡೆಗೆ ಹೆಚ್ಚಿನ ಗಮನ ಹರಿಸಬೇಕು ಎಂದು ಕೆಎಲ್ಇ ಬಿ.ಎಂ.ಕಂಕಣವಾಡಿ ಆಯುರ್ವೇದ ಮಹಾವಿದ್ಯಾಲಯದ ಶರೀರ ರಚನಾಶಾಸ ವಿಭಾಗದ ಮುಖ್ಯಸ್ಥ ಡಾ.ಮಹಾಂತೇಶ ರಾಮಣ್ಣನವರ ಹೇಳಿದರು.
ಜಾಧವ ನಗರದಲ್ಲಿ 26ನೇ ಕರ್ನಾಟಕ ಬಟಾಲಿಯನ್ ವತಿಯಿಂದ ಹಮ್ಮಿಕೊಂಡಿರುವ ಹತ್ತು ದಿನಗಳ ವಾರ್ಷಿಕ ಎನ್ಸಿಸಿ ಶಿಬಿರದಲ್ಲಿ ಎನ್ಸಿಸಿ ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರಸ್ತುತ ಸಾಮಾಜಿಕ ವಾತಾವರಣದಲ್ಲಿ ಆರೋಗ್ಯಕ್ಕೆ ನಾವು ಹೆಚ್ಚಿನ ಆದ್ಯತೆ ನೀಡುತ್ತಿಲ್ಲ. ನಮ್ಮ ಜೀವನ ಶೈಲಿಯು ಬದಲಾಗಿದೆ. ಬಹಳಷ್ಟು ಜನ ಕುರುಕುಲು ಆಹಾರ, ಅತಿಯಾದ ಧೂಮಪಾನ, ಮಧ್ಯಪಾನ, ತಂಬಾಕು, ಗುಟುಕಾ ಸೇವೆಯಂತಹ ಚಟಗಳಿಂದ ಸುಂದರ ಬದುಕನ್ನು ಹರೆಯ ವಯಸ್ಸಿನಲ್ಲಿ ಕಳೆದುಕೊಳ್ಳುತ್ತಿದ್ದಾರೆ. ನಮ್ಮ ದೇಹದ ಹೃದಯ, ಲಿವರ್, ಕಿಡ್ನಿ, ಹೊಟ್ಟೆ, ಕಣ್ಣು, ಚರ್ಮ, ಲಂಗ್ಸ್, ಮಿದುಳು ಬಗ್ಗೆ ಅರಿವು ಇರಲೇಬೇಕು ಎಂದರು.
ರಕ್ತದಾನವೂ ಅತ್ಯಂತ ಮಹತ್ವವಾಗಿದ್ದು, 18 ವರ್ಷದ ನಂತರ ಮಾಡಲು ನಾವು ಸಮರ್ಥರಾಗುತ್ತೇವೆ. ಉತ್ತಮ ಆರೋಗ್ಯ ಹೊಂದಿದವರು ಪ್ರತಿ ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು. ಅದು ಹೃದಯ ಸಂಬಂಧಿ ಕಾಯಿಲೆ ದೂರ ಮಾಡುತ್ತದೆ. ನಿಯಮಿತ ರಕ್ತದಾನ ಆರೋಗ್ಯ ಸದೃಢಗೊಳಿಸುತ್ತದೆ ಎಂದು ಹೇಳಿದರು.
ಶಿಬಿರದ ಕಮಾಂಡೆಂಟ್ ಕರ್ನಲ್ ಸುನೀಲ್ ದಾಗರ, ಲೆಫ್ಟನೆಂಟ್ ಕರ್ನಲ್ ಸಿದ್ಧಾರ್ಥ ರೆಡೂ, ಸುಬೇದಾರ ಮೇಜರ್ ಕಲ್ಲಪ್ಪ ಪಾಟೀಲ, ಜೆಸಿಒ ಗಣಪತ್ರಾವ್ ಪವಾರ, ಎನ್ಸಿಸಿ ಅಧಿಕಾರಿ ಮೇಜರ್ ಮಹೇಶ ಗುರನಗೌಡರ, ಲೆಫ್ಟನೆಂಟ್ ಎಸ್.ಎಸ್.ಚೌಗಲೆ, ಸಿದ್ದಣ್ಣ ನಾಯಕ, ಚೀಫ್ ಆಫೀಸರ್ ಎ.ಎಸ್.ಪಾಟೀಲ, ಎಸ್.ಎಸ್. ನಿಡಗುಂದಿ ಇತರರಿದ್ದರು.