

ಅಕ್ಕಿಆಲೂರ: ಚರ್ಮಗಾರಿಕೆ ನಂಬಿ ಜೀವನ ನಡೆಸುತ್ತಿರುವ ಸಮಗಾರ ಸಮಾಜ ಆರ್ಥಿಕವಾಗಿ ಹಿಂದುಳಿದಿದೆ. ಶಾಲಾ ವಿದ್ಯಾರ್ಥಿಗಳಿಗೆ ಶೂ ಮತ್ತು ಸಾಕ್ಸ್ ವಿತರಿಸುವ ಜವಾಬ್ದಾರಿಯನ್ನು ಸರ್ಕಾರ ಸಮಗಾರ ಸಮಾಜಕ್ಕೆ ನೀಡಬೇಕು ಎಂದು ಸಮಗಾರ ಸಮಾಜದ ಅಧ್ಯಕ್ಷ ಜಗದೀಶ ಬೆಟಗೇರಿ ಒತ್ತಾಯಿಸಿದರು.
ಪಟ್ಟಣದ ನಿರೀಕ್ಷಣಾ ಮಂದಿರದಲ್ಲಿ ಆಯೋಜಿಸಿದ್ದ ಚರ್ಮಗಾರಿಕೆಯ ವೃತ್ತಿಯ ಸಮಗಾರ ಸಮಾಜದ ಸಂಘಟನಾತ್ಮಕ ಸಭೆಯಲ್ಲಿ ಅವರು ಮಾತನಾಡಿದರು.
ಪಾದರಕ್ಷೆ ತಯಾರಿಸುವ, ಬೀದಿಬದಿಯಲ್ಲಿ ಕುಳಿತು ಹರಿದ ಚಪ್ಪಲಿಗಳನ್ನು ಹೊಲಿಯುವ ಸಮಗಾರ ಸಮಾಜದವರು ಆರ್ಥಿಕವಾಗಿ ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಸಮಗಾರ ಸಮಾಜದವರಿಗೆ ಪಾದರಕ್ಷೆಯ ಕುರಿತು ಸಮರ್ಪಕ ಮಾಹಿತಿ ಇದೆ. ಸಮಗಾರ ಸಮಾಜದವರಿಗೆ ಆಯಾ ತಾಲೂಕಿನಲ್ಲಿರುವ ಶಾಲೆಗಳಿಗೆ ಶೂ ಮತ್ತು ಸಾಕ್ಸ್ ವಿತರಿಸುವ ಅವಕಾಶ ಕಲ್ಪಿಸಬೇಕು. ಈ ಕುರಿತು ಸಮಾಜ ಕಲ್ಯಾಣ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಮುಖ್ಯಮಂತ್ರಿಗಳು ಗಮನಹರಿಸಬೇಕು ಎಂದು ಹೇಳಿದರು.
ಚರ್ಮ ಕೈಗಾರಿಕೆ ಅಭಿವೃದ್ಧಿ ನಿಗಮದ ಜಿಲ್ಲಾ ಸದಸ್ಯ ಮಾರುತಿ ಹಂಜಗಿ ಮಾತನಾಡಿ, ಪರಿಶಿಷ್ಟ ಸಮಾಜದವರಾದ ಸಮಗಾರರಿಗೆ ಶೂ-ಸಾಕ್ಸ್ ಸರಬರಾಜು ಮಾಡುವ ಕುರಿತು ಸಂಪೂರ್ಣ ಅನುಭವವಿದೆ. ಇದನ್ನು ರಾಜ್ಯದ ಮುಖ್ಯಮಂತ್ರಿಗಳ ಗಮನಕ್ಕೂ ತಂದಿದ್ದೇವೆ. ಅವರಿಂದ ಸಕಾರಾತ್ಮಕ ಪ್ರತಿಕ್ರಿಯೆ ಬಂದಿದೆ. ಚರ್ಮಗಾರಿಕೆ ಕೆಲಸ ಮಾಡುವವರು ತಮ್ಮ ತಾಲೂಕಿನ ಶಾಲೆಗಳಿಗೆ ಶೂ ಮತ್ತು ಸಾಕ್ಸ್ ವಿತರಿಸುವ ಕುರಿತು ಅಧಿಕಾರಿಗಳಿಗೆ, ಜನಪ್ರನಿಧಿಗಳಿಗೆ ಮನವರಿಕೆ ಮಾಡಬೇಕು ಎಂದು ಹೇಳಿದರು.
ಲಕ್ಷ್ಮಣ ಹುಳ್ಳಿಕಾಶಿ, ಶ್ರೀಕಾಂತ ಬಾಬಾನಗರ, ಗಂಗಾಧರ ಸಾತಪತಿ, ಪರಶುರಾಮ ದೆರದಾಳ, ಸಂತೋಷ ದೊಡ್ಡಮನಿ, ಶಿವಪುತ್ರಪ್ಪ ಗಾಮನಗಟ್ಟಿ, ಪರಶುರಾಮ ಬೇಟಗಿರಿ, ಪ್ರಕಾಶ ಗಾಮನಗಟ್ಟಿ, ಯಲ್ಲಪ್ಪ ಹುಳ್ಳಿಕಾಶಿ, ಹರೀಶ ಗಾನಮಗಟ್ಟಿ, ಕಿರಣ ಹಿರೇಮನಿ ಉಪಸ್ಥಿತರಿದ್ದರು.