

ರಾಯಚೂರು: ಭೂ ಮಂಜೂರಾತಿ ಸಮಿತಿ ರಚಿಸಬೇಕು ಹಾಗೂ ಸರ್ಕಾರಿ, ಅರಣ್ಯ ಭೂಮಿ ಸಾಗುವಳಿದಾರರಿಗೆ ಹಕ್ಕುಪತ್ರ ವಿತರಿಸುವಂತೆ ಒತ್ತಾಯಿಸಿ ಸ್ಥಳೀಯ ತಹಸೀಲ್ ಕಚೇರಿ ಮುಂದೆ ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆಯಿಂದ ಗುರುವಾರ ಪ್ರತಿಭಟನೆ ನಡೆಸಲಾಯಿತು.
ನಂತರ ತಹಸೀಲ್ದಾರ್ ಸುರೇಶ ವರ್ಮಾಗೆ ಮನವಿ ಸಲ್ಲಿಸಿ, ಭೂ ಹೀನರು ಹಲವು ವರ್ಷಗಳಿಂದ ಗೈರಾಣಿ, ಅರಣ್ಯ, ಗೋಮಾಳ ಭೂಮಿಯಲ್ಲಿ ಸಾಗುವಳಿ ಮಾಡುತ್ತಾ ಬಂದಿದ್ದು, ಹಲವಾರು ಬಾರಿ ಮನವಿ ಸಲ್ಲಿಸಿದರೂ ಹಕ್ಕುಪತ್ರ ನೀಡಲಾಗಿಲ್ಲ ಎಂದು ದೂರಿದರು.
ಬಹುತೇಕ ಸಾಗುವಳಿದಾರರು ಅನಕ್ಷರಸ್ಥರಾಗಿದ್ದು, ಕೃಷಿಯ ಮೇಲೆ ಅವಲಂಬಿತರಾಗಿದ್ದಾರೆ. ಹಕ್ಕುಪತ್ರ ದೊರೆಯದಿರುವುದರಿಂದ ಸಹಕಾರಿ ಮತ್ತು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಸಾಲ ದೊರೆಯದ ಕಾರಣ ಖಾಸಗಿಯಾಗಿ ಸಾಲ ಪಡೆದು ಸಂಕಷ್ಟ ಎದುರಿಸುತ್ತಿದ್ದಾರೆ.
ಕೂಡಲೇ ಭೂ ಮಂಜೂರಾತಿ ಸಮಿತಿಯನ್ನು ರಚಿಸಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಸರ್ಕಾರಿ ಭೂಮಿ ಸಾಗುವಳಿ ನಡೆಸುತ್ತಿರುವವರಿಗೆ ಹಕ್ಕುಪತ್ರ ವಿತರಿಸಲು ಕ್ರಮಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಪ್ರತಿಭಟನೆಯಲ್ಲಿ ಸಂಘಟನೆ ಜಿಲ್ಲಾಧ್ಯಕ್ಷ ಜಮಾಲುದ್ದೀನ್, ಕಾರ್ಯದರ್ಶಿ ಮಲ್ಲನಗೌಡ, ಪದಾಕಾರಿಗಳಾದ ನರಸಿಂಹಲು, ದೊಡ್ಡ ಆಂಜಿನೇಯ, ರಂಗಸ್ವಾಮಿ, ದೇವೇಂದ್ರಪ್ಪ, ನರಸಪ್ಪ, ನಾಗರಾಜ, ಕಾಜಪ್ಪ, ಚಂದ್ರಪ್ಪ, ಸುರೇಶ, ನರಸಿಂಹಲು ಪಾಲ್ಗೊಂಡಿದ್ದರು.