ಪಶು ವೈದ್ಯರಿಗೆ ಕಾಲಬದ್ಧ ಪದೋನ್ನತಿ ನೀಡಿ

05-12-Shiva-4
ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪಶು ವೈದ್ಯರಿಗೆ ಕಾಲಬದ್ಧ ಪದೋನ್ನತಿ ನೀಡುವಂತೆ ಒತ್ತಾಯಿಸಿ ರಾಯಚೂರಿನ ಅಪರ ಜಿಲ್ಲಾಕಾರಿ ಡಾ.ಕೆ.ಆರ್.ದುರಗೇಶಗೆ ಕರ್ನಾಟಕ ಪಶು ವೈದ್ಯಕೀಯ ಸಂಘದಿಂದ ಮಂಗಳವಾರ ಮನವಿ ಸಲ್ಲಿಸಲಾಯಿತು. ಸಂಘದ ಅಧ್ಯಕ್ಷ ಡಾ.ಯಮನಪ್ಪ ವಾಲ್ಮೀಕಿ, ಗೌರವಾಧ್ಯಕ್ಷ ಡಾ.ರವೀಂದ್ರನಾಥ ಸರಕರ್, ಉಪಾಧ್ಯಕ್ಷ ರಾಜು ಕಾಂಬಳೆ, ಪ್ರಧಾನ ಕಾರ್ಯದರ್ಶಿ ಡಾ.ಬಸವರಾಜ ಮೀರಸ್ಕರ್ ಇದ್ದರು.
Published on

ರಾಯಚೂರು: ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪಶು ವೈದ್ಯರಿಗೆ 2012ರ ಡಿ.31ರಿಂದ ಪೂರ್ವಾನ್ವಯವಾಗುವಂತೆ 6 ಮತ್ತು 13 ವರ್ಷಗಳ ಕಾಲಬದ್ಧ ಪದೋನ್ನತಿ ನೀಡುವಂತೆ ಕರ್ನಾಟಕ ಪಶು ವೈದ್ಯಕೀಯ ಸಂಘ ಒತ್ತಾಯಿಸಿದೆ.
ಸಂಘದ ನಿಯೋಗ ಅಪರ ಜಿಲ್ಲಾಕಾರಿ ಡಾ.ಕೆ.ಆರ್.ದುರಗೇಶಗೆ ಮಂಗಳವಾರ ಮನವಿ ಸಲ್ಲಿಸಿ, ಹಿಂದಿನ ನಿಯಮಗಳ ಪ್ರಕಾರ ಅರ್ಹರಿದ್ದ ಪಶು ವೈದ್ಯರಿಗೆ ಕಾಲಮಿತಿ ವೇತನ ಬಡ್ತಿ ಅಥವಾ ಇಂದಿನ ನಿಯಮಗಳ ಪ್ರಕಾರ ಕಾಲಬದ್ಧ ಪದೋನ್ನತಿ ನೀಡದೆ ವಂಚಿಸಲಾಗಿದೆ ಎಂದು ದೂರಿದರು.
ಪಶು ವೈದ್ಯರಿಗೆ 6 ಮತ್ತು 13 ವರ್ಷಗಳ ಕಾಲಬದ್ಧ ಪದೋನ್ನತಿಯನ್ನು ಕರ್ನಾಟಕ ಆಡಳಿತ ನ್ಯಾಯಮಂಡಳಿ ತೀರ್ಪಿನ್ವಯ 2012ರ ಡಿ.31ರಿಂದಲೇ ಪೂರ್ವಾನ್ವಯವಾಗುವಂತೆ ನೀಡಬೇಕಾಗಿದೆ. ನ್ಯಾಯಾಲಯ, ಮುಖ್ಯಮಂತ್ರಿ, ಪಶು ಸಂಗೋಪನಾ ಇಲಾಖೆ ಸಚಿವರು ಮತ್ತು ಮುಖ್ಯ ಕಾರ್ಯದರ್ಶಿ ಸೂಚನೆ ಹೊರತಾಗಿಯೂ ಬೇಡಿಕೆ ಈಡೇರಿಕೆಯು ಕೇವಲ ಸಭೆ ಮತ್ತು ನಡಾವಳಿಗಳಿಗೆ ಸಿಮೀತವಾಗಿದೆ.
ಜಾನುವಾರು ಘಟಕದ ಕಾಋಣ ನೀಡಿ ಪಶುವೈದ್ಯ ಹುದ್ದೆಗಳನ್ನು ನಿರಂತರವಾಗಿ ಸ್ಥಳಾಂತರಿಸುವುದನ್ನು ನಿಲ್ಲಿಸಬೇಕು. 2022-23ನೇ ಸಾಲಿನ ಆಯವ್ಯಯದಲ್ಲಿ ಘೋಷಣೆಯಾದ 100 ಪಶುವೈದ್ಯ ಸಂಸ್ಥೆಗಳಲ್ಲಿ 20 ಸಂಸ್ಥೆಗಳನ್ನು ಮಾತ್ರ ಕಾರ್ಯಾರಂಭ ಮಾಡಿದ್ದು, ಬಾಕಿ 80 ಸಂಸ್ಥೆಗಳನ್ನು ಮಂಜೂರು ಮಾಡಬೇಕು.
ಪಶು ವೈದ್ಯ ಸಂಸ್ಥೆಗಳಿಗೆ ಅಸಮರ್ಪಕ ಔಷಧ ಪೂರೈಕೆಯಿಂದ ರಾಸುಗಳ ಚಿಕಿತ್ಸೆಗೆ ಔಷ ಕೊರತೆ ಉಂಟಾಗುತ್ತಿದೆ. ಕೂಡಲೇ ಕೇಂದ್ರಗಳಿಗೆ ಔಷಧ ಪೂರೈಕೆ ಮಾಡಬೇಕು. ಹೊಸದಾಗಿ ರಚನೆಯಾದ ತಾಲೂಕು ಕೇಂದ್ರಗಳ್ಲಲಿ ತಾಲೂಕು ಕಚೇರಿ ಆರಂಭಿಸಬೇಕು.
ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಬೇಕು. ಪ್ರಭಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪಶುವೈದ್ಯರಿಗೆ ನಿಯಮಾನುಸಾರ ಪ್ರಭಾರ ಭತ್ಯೆ ನೀಡಬೇಕು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ.
ನಿಯೋಗದಲ್ಲಿ ಸಂಘದ ಅಧ್ಯಕ್ಷ ಡಾ.ಯಮನಪ್ಪ ವಾಲ್ಮೀಕಿ, ಗೌರವಾಧ್ಯಕ್ಷ ಡಾ.ರವೀಂದ್ರನಾಥ ಸರಕರ್, ಉಪಾಧ್ಯಕ್ಷ ರಾಜು ಕಾಂಬಳೆ, ಪ್ರಧಾನ ಕಾರ್ಯದರ್ಶಿ ಡಾ.ಬಸವರಾಜ ಮೀರಸ್ಕರ್, ಖಜಾಂಚಿ, ಡಾ.ಶಶಿಧರ ಸೊಪ್ಪಿನಮಠ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net