ಭರತ್ ಬೊಮ್ಮಾಯಿಗೆ ಟಿಕೆಟ್ ನೀಡಲು ಆಗ್ರಹ

JOSHI HOUSE
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಶಿಗ್ಗಾಂವ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆಯಲ್ಲಿ ಸ್ಪರ್ಧಿಸಲು ಸಂಸದ ಬಸವರಾಜ ಬೊಮ್ಮಾಯಿ ಪುತ್ರ ಭರತ್ ಅವರಿಗೆ ಟಿಕೆಟ್ ನೀಡಬೇಕೆಂದು ಪಕ್ಷದ ಕಾರ್ಯಕರ್ತರು ಹಾಗೂ ಬೆಂಬಲಿಗರು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರನ್ನು ಆಗ್ರಹಿಸಿದರು.

ಹುಬ್ಬಳ್ಳಿಯಲ್ಲಿರುವ ಜೋಶಿ ಅವರ ನಿವಾಸಕ್ಕೆ ಶುಕ್ರವಾರ ಬೆಳಗ್ಗೆ ಆಗಮಿಸಿದ್ದ ನೂರಕ್ಕೂ ಹೆಚ್ಚು ಕಾರ್ಯಕರ್ತರು, ಬೆಂಬಲಿಗರು ಈ ಕುರಿತು ಮನವಿ ಮಾಡಿದರು.

ಉಪ ಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ ತಯಾರಿ ಜೋರಾಗಿ ನಡೆದಿದೆ. ನಮ್ಮಲ್ಲಿ ಅಭ್ಯರ್ಥಿ ಯಾರೆಂಬುದು ನಿರ್ಧಾರವಾಗಿಲ್ಲ. ಆದರೂ ಶ್ರೀಕಾಂತ ದುಂಡಿಗೌಡ್ರ ಹಾಗೂ ಶಿವಾನಂದ ಮ್ಯಾಗೇರಿ ತಾವೇ ಅಭ್ಯರ್ಥಿಯೆಂದು ಬಿಂಬಿಸಿಕೊಂಡು ಕ್ಷೇತ್ರದಲ್ಲಿ ಓಡಾಡುತ್ತಿದ್ದಾರೆ. ಇದರಿಂದ ಕಾರ್ಯಕರ್ತರಲ್ಲಿ ಗೊಂದಲ ಉಂಟಾಗಿದೆ ಎಂದು ದೂರಿದರು.

ಶಿಗ್ಗಾಂವ ವಿಧಾನಸಭಾ ಕ್ಷೇತ್ರ ಧಾರವಾಡ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುತ್ತದೆ. ಇತ್ತೀಚಿನ ಲೋಕಸಭಾ ಚುನಾವಣೆಯಲ್ಲಿ ತಮ್ಮ ಪರವಾಗಿ ಕೆಲಸ ಮಾಡಿದ್ದೇವು. ಭರತ್ ಬೊಮ್ಮಾಯಿ ಅವರಿಗೆ ಟಿಕೆಟ್ ನೀಡಬೇಕೆಂದು ಆಗ್ರಹಿಸಿದರು.

‘ಶಿಗ್ಗಾಂವ ಉಪ ಚುನಾವಣೆಗೆ ಸ್ಪರ್ಧಿಸುವ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ರಾಜ್ಯದಿಂದ ಕೇಂದ್ರಕ್ಕೆ ಹೋಗುತ್ತದೆ. ಪಕ್ಷದ ಕೇಂದ್ರ ಚುನಾವಣೆ ಸಮಿತಿ ಯಾರಿಗೆ ಟಿಕೆಟ್ ನೀಡಬೇಕು ಎಂಬುದನ್ನು ನಿರ್ಧರಿಸುತ್ತದೆ. ಇಂಥವರಿಗೆ ಟಿಕೆಟ್ ಎಂದು ನಾವು ಯಾರಿಗೂ ಆಶ್ವಾಸನೆ ಕೊಟ್ಟಿಲ್ಲ. ನಿಮ್ಮ ಮಗನನ್ನೇ ಉಪ ಚುನಾವಣೆಯಲ್ಲಿ ನಿಲ್ಲಿಸಿ ಎಂದು ನಾನೇ ಸ್ವತಃ ಬಸವರಾಜ ಬೊಮ್ಮಾಯಿ ಅವರಿಗೆ ಹೇಳಿದ್ದೇನೆ ’ ಎಂದು ಜೋಶಿ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net