ಥರ್ಮಲ್ ಸ್ಕ್ರೀನಿಂಗ್ ಉಪಕರಣ ಹೆಚ್ಚು ನೀಡಿ

2
Published on

ಮೈಸೂರು: ಜೂನ್ 25ರಿಂದ ಆರಂಭಗೊಳ್ಳುವ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಕೇಂದ್ರಗಳಿಗೆ ಒಂದು ಥರ್ಮಲ್ ಸ್ಕ್ರೀನಿಂಗ್ ಉಪಕರಣ ನೀಡುವುದರಿಂದ ಎಲ್ಲ ವಿದ್ಯಾರ್ಥಿಗಳನ್ನು ತಪಾಸಣೆಗೆ ಒಳಪಡಿಸುವುದು ಕಷ್ಟ. ಹಾಗಾಗಿ ಹೆಚ್ಚಿನ ಥರ್ಮಲ್ ಸ್ಕ್ರೀನಿಂಗ್ ಉಪಕರಣ ನೀಡಬೇಕು ಎನ್ನುವ ಒತ್ತಾಯ ಶಿಕ್ಷಣ ಇಲಾಖೆ ಅಧಿಕಾರಿಗಳಿಂದ ಕೇಳಿಬಂತು.

ತಾಲೂಕು ಪಂಚಾಯಿತಿ ಅಧ್ಯಕ್ಷೆ ಕಾಳಮ್ಮ ಕೆಂಪರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಿದ್ದ ಕರ್ನಾಟಕ ಅಭಿವೃದ್ಧಿ ಯೋಜನೆ (ಕೆಡಿಪಿ) ಮಾಸಿಕ ಸಭೆಯಲ್ಲಿ ಶಿಕ್ಷಣ ಇಲಾಖೆ ಅಧಿಕಾರಿಗಳು ಪರೀಕ್ಷೆ ಸಿದ್ಧತೆ, ಕೊವಿಡ್-19 ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳ ಬಗ್ಗೆ ವಿವರಿಸಿದರು.

ತಾಲೂಕಿನಲ್ಲಿ 87 ಪ್ರೌಢಶಾಲೆಗಳಿದ್ದು, 16 ಕೇಂದ್ರಗಳಲ್ಲಿ 4,363 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಇದಕ್ಕೆ ಬೇಕಾದ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಪರೀಕ್ಷೆ ಹಾಲ್‌ನಲ್ಲಿ ಕೋವಿಡ್-19 ತಡೆಗಟ್ಟುವ ಮಾರ್ಗಸೂಚಿಗಳನ್ನು ಅನುಸರಿಸಲಾಗುತ್ತಿದೆ. ಎಲ್ಲ ವಿದ್ಯಾರ್ಥಿಗಳಿಗೂ ಮಾಸ್ಕ್ ವಿತರಿಸಲು ಕ್ರಮ ಕೈಗೊಳ್ಳಲಾಗಿದ್ದು, ಮಾಸ್ಕ್‌ಗಳ ಕೊರತೆಯಾಗದಂತೆ ಈಗಾಗಲೇ ದಾಸ್ತಾನು ಮಾಡಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣ ವಿವರಿಸಿದರು.

ಆದರೆ, ಪ್ರತಿ ಶಾಲೆಗೆ ಒಂದೊಂದು ಥರ್ಮಲ್ ಸ್ಕ್ರೀನಿಂಗ್ ಉಪಕರಣ ನೀಡಲಾಗಿದೆ. ಪರೀಕ್ಷೆ ದಿನದಂದು ಬರುವ ಅಷ್ಟು ವಿದ್ಯಾರ್ಥಿಗಳನ್ನು ಒಂದೇ ಸ್ಕ್ರೀನಿಂಗ್ ಉಪಕರಣದಿಂದ ತಪಾಸಣೆ ಮಾಡಲು ಸಾಕಷ್ಟು ಸಮಯ ಹಿಡಿಯುತ್ತದೆ. ಇದರಿಂದ ವಿದ್ಯಾರ್ಥಿಗಳಿಗೆ ಸಮಯ ಮೀರಿದರೆ ಆತಂಕ, ದುಗುಡವಾಗಿ ತೊಂದರೆಯಾಗುತ್ತದೆ ಎಂದರು.

ವಿದ್ಯಾರ್ಥಿಗಳು ಹೆಚ್ಚಾಗಿರುವ ಕೇಂದ್ರಗಳಲ್ಲಿ ಇನ್ನಷ್ಟು ಸಮಯ ಹಿಡಿಯುವುದರಿಂದ ವಿದ್ಯಾರ್ಥಿಗಳು ಸಾಕಷ್ಟು ಮುಂಚಿತವಾಗಿಯೇ ಪರೀಕ್ಷಾ ಕೇಂದ್ರಕ್ಕೆ ಆಗಮಿಸಬೇಕು. ಪರೀಕ್ಷೆ ನಿಗದಿತ ಸಮಯಕ್ಕೆ ಆರಂಭಗೊಳ್ಳುವುದರಿಂದ ಸಂಪೂರ್ಣ ತಪಾಸಣೆ ಕಷ್ಟವಾಗುತ್ತದೆ ಎಂದು ಬಿಇಒ ಉದಯಕುಮಾರ್ ವಿವರಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದಕಾರ್ಯ ನಿರ್ವಹಣಾಧಿಕಾರಿ ಸಿ.ಆರ್.ಕೃಷ್ಣಕುಮಾರ್, ತಾಲೂಕಿನ ಪ್ರತಿ ಶಾಲೆಗೆ ತಾಲೂಕು ಪಂಚಾತಿಯಿಂದಲೂ ಒಂದೊಂದು ಥರ್ಮಲ್ ಸ್ಕ್ರೀನಿಂಗ್ ಉಪಕರಣ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಮನರೇಗಾಗೆ ವೆಬ್‌ಸೈಟ್ ಸಮಸ್ಯೆ: ಕರೊನಾ ವೈರಸ್, ಲಾಕ್‌ಡೌನ್‌ನಿಂದ ನಗರ, ಪಟ್ಟಣ ವಾಸಿಗಳು ಹಳ್ಳಿಗಳ ಕಡೆ ಮುಖ ಮಾಡಿದ್ದಾರೆ. ಪಟ್ಟಣದಲ್ಲಿ ಉದ್ಯೋಗ ಬಿಟ್ಟು ತಮ್ಮ ಹಳ್ಳಿಗಳಲ್ಲಿಯೇ ಕೆಲಸ ಮಾಡಲು ಮುಂದಾಗುತ್ತಿದ್ದು, ಇದಕ್ಕಾಗಿ ಕೇಂದ್ರ ಸರ್ಕಾರದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ಮನರೇಗಾ)ಗೆ ಬೇಡಿಕೆ ಹೆಚ್ಚಾಗುತ್ತಿದೆ. ಆದರೆ ವೆಬ್‌ಸೈಟ್ ಸಮಸ್ಯೆಯಿಂದ ನೋಂದಣಿ ಕಾರ್ಯ ವಿಳಂಬವಾಗುತ್ತಿದೆ ಎಂದು ತಾಲೂಕು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ವೀರಣ್ಣ ಸಭೆಗೆ ಮಾಹಿತಿ ನೀಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಇಒ ಕೃಷ್ಣಕುಮಾರ್, ತಾಲೂಕಿನಲ್ಲಿ ಈಗ 10 ಸಾವಿರಕ್ಕೂ ಹೆಚ್ಚಿನ ಜಾಬ್‌ಕಾರ್ಡ್‌ಗಳು ಇದ್ದು, ಈಗ ಮತ್ತೆ 1,325 ಜನರು ಜಾಬ್‌ಕಾರ್ಡ್‌ಗಾಗಿ ಅರ್ಜಿ ಸಲ್ಲಿಸಿದ್ದಾರೆ. ಆದರೆ, ವೆಬ್‌ಸೈಟ್ ಸಮಸ್ಯೆ ಎಲ್ಲೆಡೆ ಇದ್ದು, ಶೀಘ್ರದಲ್ಲಿ ವೆಬ್‌ಸೈಟ್ ಸಮಸ್ಯೆ ಬಗೆಹರಿಸಲು ರಾಜ್ಯಮಟ್ಟದಲ್ಲಿಯೇ ಪ್ರಯತ್ನ ನಡೆಯುತ್ತಿದೆ. ಒಂದೆರಡು ದಿನಗಳಲ್ಲಿ ಸಮಸ್ಯೆ ನಿವಾರಣೆಯಾಗಲಿದೆ ಎಂದು ತಿಳಿಸಿದರು.

ತೋಟಗಾರಿಕೆ ಇಲಾಖೆಗೆ ಮನರೇಗಾ ಯೋಜನೆಯಡಿ ಸಸಿ ಬೆಳೆಸಲು, ಹಳೇ ಮರಗಳ ಪುನರ್‌ಜೀವನಕ್ಕೆ ನೀಡುತ್ತಿರುವ ಅನುದಾನ ಸೇರಿದಂತೆ ಇಲಾಖೆ ಯೋಜನೆಗೆ ಬಗ್ಗೆ ಇಲಾಖೆ ಉಪ ನಿರ್ದೇಶಕಿ ಮಮತಾ ಮಾಹಿತಿ ನೀಡಿದರು.

ಲಾಕ್‌ಡೌನ್ ಸಮಯದಲ್ಲಿ ನಗರ, ತಾಲೂಕಿನಲ್ಲಿ ಸಿಲುಕಿರುವ ಹೊರ ರಾಜ್ಯದ ಜನರಿಗೆ ಆಧಾರ್‌ಕಾರ್ಡ್ ಆಧಾರದ ಮೇಲೆ ಎರಡು ತಿಂಗಳಿಗೆ ಆಗುವ ಪಡಿತರವನ್ನು ಒಂದೇ ಬಾರಿ ವಿತರಿಸುತ್ತಿದ್ದೇವೆ. 40 ಕೆಜಿ ಅಕ್ಕಿ, ಕಡಲೆಕಾಳು, ತೊಗರಿ ಬೇಳೆ ನೀಡಲಾಗುವುದು ಎಂದು ಆಹಾರ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.

ಸಧ್ಯಕ್ಕೆ ಎಲ್ಲೆಡೆ ಸಮಸ್ಯೆಯಾಗಿರುವ ಕರೊನಾ ವೈರಸ್ ನಿಯಂತ್ರಣಕ್ಕೆ ಸಿಬ್ಬಂದಿ ಸಂಪೂರ್ಣ ತೊಡಗಿಸಿಕೊಂಡಿದ್ದಾರೆ. ಹಾಗಾಗಿ ಇತರ ಯೋಜನೆಗಳ ಅನುಷ್ಠಾನ ಮತ್ತು ಸಾಧನೆ ಇಳಿಮುಖವಾಗಿದೆ. ಕರೊನಾ ಮುಕ್ತಗೊಂಡ ಬಳಿಕ ಮುಂದಿನ ದಿನಗಳಲ್ಲಿ ಗುರಿ ಸಾಧಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಾಲೂಕು ವೈದ್ಯಾಧಿಕಾರಿ ಡಾ.ಮಹದೇವ ಪ್ರಸಾದ್ ತಿಳಿಸಿದರು.

ತಾಲೂಕು ಪಂಚಾಯಿತಿ ಎನ್.ಬಿ.ಮಂಜು, ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಶಂಕರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net