

ವಿಜಯಪುರ: ಜಿಲ್ಲೆಯಲ್ಲಿನ ಕೈಗಾರಿಕೆಗಳಲ್ಲಿ ಅವಶ್ಯಕವಿರುವ ಹುದ್ದೆಗಳಿಗೆ ಅನುಗುಣವಾಗಿ ಸಂಸ್ಥೆಗಳಲ್ಲಿ ಅರ್ಹ ನಿರುದ್ಯೋಗಿಗಳಿಗೆ ಕೌಶಲ ತರಬೇತಿ ನೀಡಬೇಕು. ತರಬೇತಿ ಪಡೆದ ಯುವಕರಿಗೆ ಕೈಗಾರಿಕೆಗಳಲ್ಲಿ ಉದ್ಯೋಗ ದೊರಕಿಸುವ ಮೂಲಕ ಕರ್ನಾಟಕ ಕೌಶಲ ಅಭಿವೃದ್ಧಿ ನಿಗಮದ ಇಂಡಸ್ಟ್ರೀಯಲ್ ಲಿಂಕೇಜ್ ಸೆಲ್ (ಐಎಲ್‌ಸಿ) ಯೋಜನೆ ಯಶಸ್ವಿಗೊಳಿಸುವಂತೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡ ಜಿಲ್ಲಾ ಕೌಶಲ ಮಿಷನ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದಿಂದ ಐಎಲ್‌ಸಿ ಯೋಜನೆ ಆರಂಭಿಸಿದ್ದು, ಕೈಗಾರಿಕೆಗಳಿಗೆ ಅಗತ್ಯವಿರುವ ಮಾನವ ಸಂಪನ್ಮೂಲವನ್ನು ತಮ್ಮ ಉದ್ಯಮಗಳ ಅವಶ್ಯಕತೆಯಂತೆ ತಮ್ಮ ಸಂಸ್ಥೆಯಲ್ಲಿಯೇ ತರಬೇತಿ ನೀಡಿ, ನಂತರ ತಮ್ಮ ಕೈಗಾರಿಕೆಗಳಲ್ಲಿಯೇ ಉದ್ಯೋಗ ನೀಡುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ ಎಂದರು.
ನಿರುದ್ಯೋಗಿ ಯುವಕ-ಯುವತಿಯರಿಗೆ ಸ್ಥಳೀಯವಾಗಿ ಉದ್ಯೋಗ ದೊರಕಿಸಿ ಅನುಕೂಲ ಕಲ್ಪಿಸಿಕೊಡುವ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೊಳಿಸಿದ್ದು, ಈ ಯೋಜನೆಯನ್ನು ಸಮರ್ಪಕವಾಗಿ ಜಾರಿಗೊಳಿಸಿ ಸ್ಥಳೀಯವಾಗಿ ಉದ್ಯೋಗ ಸೃಷ್ಟಿಗೆ ಕ್ರಮ ವಹಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಡೇ-ನಲ್ಮ್ ಯೋಜನೆಯ ಎಲ್ಲ ಉಪ-ಘಟಕಗಳ ಪ್ರಗತಿ ಪರಿಶೀಲನೆ ನಡೆಸಿದ ಅವರು, ಪಿಎಂ ಸ್ವ-ನಿಧಿಯಡಿ ಬಾಕಿ ಇರುವ ಫಲಾನುಭವಿಗಳ ಅರ್ಜಿಗಳನ್ನು ಪಡೆದು ಸಾಲ ಮಂಜೂರಾತಿ ಹಾಗೂ ವಿತರಣೆಗೆ ವಿಳಂಬವಿಲ್ಲದೇ ತುರ್ತಾಗಿ ಕ್ರಮವಹಿಸುವಂತೆ ಎಲ್ಲ ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳಿಗೆ ಎಚ್ಚರಿಕೆ ನೀಡಿದ ಅವರು, ಸ್ವ-ನಿಧಿ ಸೇ ಸಮೃದ್ಧಿ ಯೋಜನೆಯಡಿ ಎಂಟು ಸಾಮಾಜಿಕ ಭದ್ರತಾ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ಒದಗಿಸಲು ಕ್ರಮ ವಹಿಸುವಂತೆ ಸೂಚಿಸಿದರು.
2024-25 ನೇ ಸಾಲಿನ ಡೇ-ನಲ್ಮ್ ಅಭಿಯಾನದಡಿ 420 ಮಹಿಳಾ ಸ್ವ-ಸಹಾಯ ಸಂಘಗಳ ರಚನೆ, 26 ಒಕ್ಕೂಟ ರಚನೆ, 171 ವೈಯಕ್ತಿಕ ಸ್ವಯಂ ಉದ್ಯೋಗ, 12 ಗುಂಪು ಉದ್ಯೋಗ, 234 ಸ್ವ-ಸಹಾಯ ಸಂಘಗಳಿಗೆ ಬ್ಯಾಂಕ್ ಲಿಂಕೆಜ್ ಗುರಿ ನಿದಿಪಡಿಸಿದ್ದು, ನಿಗದಿತ ಸಮಯದಲ್ಲಿ ಪ್ರಗತಿ ಸಾಧಿಸಬೀಕು. ಅಲ್ಲದೆ, ಡೇ-ನಲ್ಮ್ ಅಭಿಯಾನದಡಿ ದಿ ಅರ್ಬನ್ ಲರ್ನಿಂಗ್ ಇಂಟರ್ನಶಿಪ್ ಪ್ರೊಗ್ರಾಮ್ ಯೋಜನೆಯಡಿ ಜಿಲ್ಲೆಗೆ 58 ಗುರಿ ನಿಗದಿಪಡಿಸಿದ್ದು, ನಿಗದಪಡಿಸಿದಂತೆ ಕಾಲಮಿತಿಯಲ್ಲಿಯೇ ಪ್ರಗತಿ ಸಾಧಿಸುವಂತೆ ಸೂಚಿಸಿದರು.
ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಸಿ.ಬಿ. ಕುಂಬಾರ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೆಶಕ ಬದ್ರುದ್ದಿನ್ ಸೌದಾಗರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಸಂಪತ್‌ಕುಮಾರ ಗುಣಾರಿ, ಎಸ್.ವಿ. ಪಾಟೀಲ, ಜಿಲ್ಲಾ ಸಣ್ಣ ಕೈಗಾರಿಕಾ ಉದ್ಯಮಿದಾರರ ಸಂಘದ ಅಧ್ಯಕ್ಷ ಗಂಗಾಧರ ಸಂಬಣ್ಣಿ, ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಮತ್ತಿತರರಿದ್ದರು.