

ಮುಂಡರಗಿ: ಉದ್ಯೋಗ ಖಾತ್ರಿ ಯೋಜನೆಯಡಿ ಹೆಸರೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ವೈಯಕ್ತಿಕ ಕಾಮಗಾರಿಯಲ್ಲಿ ರೈತ ಫಲಾನುಭವಿಗಳು ಮಾಡಿಕೊಂಡಿರುವ ದನದ ದೊಡ್ಡಿ, ಬಚ್ಚಲುಗುಂಡಿ, ಕುರಿ ದೊಡ್ಡಿ ಹಾಗೂ ಕೋಳಿದೊಡ್ಡಿ, ಎರೆಹುಳ ಘಟಕ ಮೊದಲಾದ ಕೆಲಸಗಳ ಸಾಮಗ್ರಿಗಳ ಮೊತ್ತವನ್ನು ಸರ್ಕಾರ 5 ವರ್ಷ ಕಳೆದರೂ ಬಿಡುಗಡೆ ಮಾಡಿಲ್ಲ. ಇದರಿಂದ ಅವರೆಲ್ಲ ತೊಂದರೆ ಅನುಭವಿಸುವಂತಾಗಿದೆ. ಸರ್ಕಾರ ಈ ಬಗ್ಗೆ ಗಮನ ಹರಿಸಿ ಸಾಮಗ್ರಿಗಳ ಮೊತ್ತದ ಬಾಕಿ ಹಣವನ್ನು ಬಿಡುಗಡೆ ಮಾಡಬೇಕು ಎಂದು ಹೆಸರೂರು ಗ್ರಾ.ಪಂ. ಉಪಾಧ್ಯಕ್ಷೆ ಪದ್ಮಾವತಿ ನಾಯಕ ಒತ್ತಾಯಿಸಿದರು.
ಪಟ್ಟಣದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಮಗ್ರಿಗಳ ಮೊತ್ತ ಬಾರದ ಕಾರಣ ಫಲಾನುಭವಿಗಳು ಗ್ರಾ.ಪಂ.ಸದಸ್ಯರನ್ನು ಕೇಳುತ್ತಿದ್ದಾರೆ. ಅದರ ಕೂಲಿ ಮೊತ್ತ ನೀಡಲಾಗಿದೆ. ಆದರೆ, ಸಾಮಗ್ರಿಗಳ ಮೊತ್ತ ಮಾತ್ರ ಬಾಕಿ ಇದೆ.
ಹೆಸರೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ಸುಮಾರು 40 ಲಕ್ಷ ರೂ. ಸಾಮಗ್ರಿಗಳ ಮೊತ್ತ ಬಾಕಿ ಇದ್ದು, ಸರ್ಕಾರ ತಕ್ಷಣ ಹಣ ಬಿಡುಗಡೆಗೊಳಿಸಬೇಕು. ಈ ಬಗ್ಗೆ ಅಧಿಕಾರಿಗಳನ್ನು ಕೇಳಿದರೂ ಪ್ರಯೋಜನವಾಗುತ್ತಿಲ್ಲ.
ಬೇರೆ ಜಿಲ್ಲೆಗಳಲ್ಲಿ 2 ತಿಂಗಳಲ್ಲಿ ಈಗಾಗಲೇ ಸಾಮಗ್ರಿಗಳ ಮೊತ್ತವನ್ನು ಜಮೆ ಮಾಡಲಾಗಿದೆ. ಆದರೆ, ಗದಗ ಜಿಲ್ಲೆಯಲ್ಲಿ ಐದು ತಿಂಗಳು ಕಳೆದರೂ ಸಾಮಾಗ್ರಿಗಳ ಮೊತ್ತವನ್ನು ಬಾಕಿ ಉಳಿಸಿಕೊಳ್ಳಲಾಗಿದೆ ಎಂದು ದೂರಿದರು.