ಪಾಲಕರಿಗೆ ಮೊದಲ ಗುರುಕಾಣಿಕೆ ಸಲ್ಲಿಸಿ

ಸೋಮವಾರಪೇಟೆ ಪತ್ರಿಕಾಭವನದಲ್ಲಿ ನಡೆದ ಕೊಡಗು ಪತ್ರಕರ್ತರ ಸಂಘದ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಾಧಕ ವಿದ್ಯಾರ್ಥಿಗಳನ್ನು ಶಾಸಕ ಡಾ.ಮಂತರ್‌ಗೌಡ ಸನ್ಮಾನಿಸಿದರು. ಹರೀಶ್, ರಾಜೇಶ್‌ನಾಥ್, ಅನಿಲ್, ಮುರುಳಿ ಇತರರು ಇದ್ದರು.
ಸೋಮವಾರಪೇಟೆ ಪತ್ರಿಕಾಭವನದಲ್ಲಿ ನಡೆದ ಕೊಡಗು ಪತ್ರಕರ್ತರ ಸಂಘದ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಾಧಕ ವಿದ್ಯಾರ್ಥಿಗಳನ್ನು ಶಾಸಕ ಡಾ.ಮಂತರ್‌ಗೌಡ ಸನ್ಮಾನಿಸಿದರು. ಹರೀಶ್, ರಾಜೇಶ್‌ನಾಥ್, ಅನಿಲ್, ಮುರುಳಿ ಇತರರು ಇದ್ದರು.
Published on

ಸೋಮವಾರಪೇಟೆ: ವಿದ್ಯಾರ್ಥಿಗಳಿಗೆ ತಂದೆ, ತಾಯಿ ಮೊದಲ ಗುರುವಾಗಿರುವುದರಿಂದ ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡಿ, ಗುರುಕಾಣಿಕೆ ಸಲ್ಲಿಸಬೇಕು ಎಂದು ಶಾಸಕ ಡಾ.ಮಂತರ್‌ಗೌಡ ಹೇಳಿದರು.

ಕೊಡಗು ಪತ್ರಕರ್ತರ ಸಂಘದ ವತಿಯಿಂದ ಪತ್ರಿಕಾ ಭವನದಲ್ಲಿ ಶನಿವಾರ ಸಂಜೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಮಾತನಾಡಿದರು.

ಮಕ್ಕಳ ಯಶಸ್ಸಿಗಾಗಿ ತಂದೆ-ತಾಯಿ ಇಡೀ ಜೀವನವನ್ನೇ ಮುಡಿಪಾಗಿಟ್ಟಿರುತ್ತಾರೆ. ಅವರ ಕನಸ್ಸನ್ನು ಮಕ್ಕಳು ನನಸು ಮಾಡಬೇಕು. ಸಾಧನೆ ಮಾಡಿದ ತಮ್ಮ ಮಕ್ಕಳೊಂದಿಗೆ ಸನ್ಮಾನ ಮಾಡಿಸಿಕೊಳ್ಳುವುದು ಅವರಿಗೆ ಸಂತೃಪ್ತಿ ತಂದುಕೊಡುತ್ತದೆ ಎಂದು ಹೇಳಿದರು.

ಕೊಡಗಿನಲ್ಲಿ ಶೈಕ್ಷಣಿಕ ಕ್ಷೇತ್ರದ ಸಾಧನೆ ಪಟ್ಟಿಯಲ್ಲಿ ಹೆಣ್ಣು ಮಕ್ಕಳೇ ಮೊದಲ ಸ್ಥಾನದಲ್ಲಿದ್ದಾರೆ. ಹೆಣ್ಣು ಮಕ್ಕಳ ಕಲಿಕೆ, ಶಿಸ್ತು, ಸಂಯಮ, ಸಮಯ ಪಾಲನೆ ಎಲ್ಲವನ್ನೂ ಗೌರವಿಸಬೇಕು. ಅವರ ಪಡುವ ಶ್ರಮಕ್ಕೆ ಪ್ರತಿಫಲ ಸಿಕ್ಕಿದೆ. ಸಿಕ್ಕ ಸಮಯವನ್ನು ವ್ಯರ್ಥ ಮಾಡದೆ ನಿರಂತರ ಕಲಿಕೆಯಲ್ಲಿ ತೊಡಗಿಕೊಂಡರೆ ಯಶಸ್ಸು ಸಾಧ್ಯ ಎಂಬುದನ್ನು ಸನ್ಮಾನಿತರಾದ ವಿದ್ಯಾರ್ಥಿನಿಯರನ್ನು ನೋಡಿ ಕಲಿಯಬೇಕು ಎಂದು ಪ್ರಶಂಸಿಸಿದರು.

ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವ ವಿದ್ಯಾರ್ಥಿಗಳು ದಿನಪತ್ರಿಕೆಗಳನ್ನು ಓದುವ ಹವ್ಯಾಸ ಇಟ್ಟುಕೊಳ್ಳಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಬರುವ ಸುದ್ದಿಗಳು ಕೆಲವೊಮ್ಮೆ ತಪ್ಪು ಮಾಹಿತಿಯಿಂದ ಕೂಡಿರುತ್ತವೆ. ಮುದ್ರಣ ಮಾಧ್ಯಮದಲ್ಲಿ ಪ್ರಸಾರವಾಗುವುದು ಸತ್ಯ ಎಂದು ಓದುಗರು ನಂಬಿದ್ದಾರೆ. ಈ ಕಾರಣದಿಂದ ಪತ್ರಕರ್ತರು ನಿಖರ ಸುದ್ದಿಯನ್ನು ಪ್ರಕಟಣೆಗೆ ಕಳುಹಿಸಬೇಕು ಎಂದು ಹೇಳಿದರು.

ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಸಿದ್ದಲಿಂಗಪುರದ ಶ್ರೀ ಮಂಜುನಾಥಸ್ವಾಮಿ ಕ್ಷೇತ್ರದ ಪ್ರಧಾನ ಗುರು ರಾಜೇಶ್‌ನಾಥ್ ಜೀ ಮಾತನಾಡಿ, ದೇಶದ ಪ್ರಜಾಪ್ರಭುತ್ವವನ್ನು ಕಾಯುವ ಜವಾಬ್ದಾರಿ ಪತ್ರಿಕಾರಂಗದ ಮೇಲಿದೆ. ಸಮಾಜದಲ್ಲಿ ಪತ್ರಕರ್ತರ ಮೇಲೆ ಗೌರವವಿದೆ. ಸಮಾಜಮುಖಿ ವರದಿಗಳನ್ನು ಮಾಡುವುದು ಪತ್ರಕರ್ತರ ಕರ್ತವ್ಯವಾಗಬೇಕು ಎಂದು ಹೇಳಿದರು.

ರಾಷ್ಟ್ರೀಯ ಅರ್ಹತಾ ಮತ್ತು ನೀಟ್ ಪರೀಕ್ಷೆಯಲ್ಲಿ ಅಖಿಲ ಭಾರತ ಮಟ್ಟದಲ್ಲಿ 84ನೇ ರ‌್ಯಾಂಕ್ ಹಾಗೂ ರಾಜ್ಯಕ್ಕೆ 7ನೇ ರ‌್ಯಾಂಕ್ ಪಡೆದ ಗ್ರಾಮೀಣ ಪ್ರತಿಭೆ ಚೌಡ್ಲು ಗ್ರಾಮ ನಿವಾಸಿ ಕೆ.ಜಿ.ನಿಧಿ, ಎಸ್ಸೆಸ್ಸೆಲ್ಸಿಯಲ್ಲಿ 625ಕ್ಕೆ 623 ಅಂಕಗಳೊಂದಿಗೆ ಕೊಡಗು ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಪಡೆದ ಚೌಡ್ಲು ವಿಶ್ವಮಾನವ ಕುವೆಂಪು ವಿದ್ಯಾಸಂಸ್ಥೆ ವಿದ್ಯಾರ್ಥಿನಿ ಸಿ.ಎಸ್.ಆದ್ವಿ, ದ್ವಿತೀಯ ಸ್ಥಾನ ಪಡೆದ ಸೋಮವಾರಪೇಟೆ ಸಂತ ಜೋಸೆಫರ ಶಾಲೆಯ ಲಿಸ್ಮ ಡಯಾಸ್, ದ್ವಿತೀಯ ಪಿಯುನಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಶನಿವಾರಸಂತೆ ಸೇಕ್ರೆಡ್ ಹಾರ್ಟ್ ಪಿಯು ಕಾಲೇಜಿನ ಡಿ.ತೇಜಸ್ವಿನಿ, ದ್ವಿತೀಯ ಸ್ಥಾನ ಪಡೆದ ಗರಗಂದೂರು ಮುರಾರ್ಜಿ ದೇಸಾಯಿ ವಸತಿ ಶಾಲೆಯ ಎನ್.ಎಂ ದರ್ಶನ್, ವಾಣಿಜ್ಯ ವಿಭಾಗದಲ್ಲಿ ತಾಲೂಕಿಗೆ ಅತಿ ಹೆಚ್ಚು ಅಂಕ ಗಳಿಸಿದ ಸೋಮವಾರಪೇಟೆ ಸೇಂಟ್ ಜೋಸೆಫ್ ಕಾಲೇಜಿನ ಎಸ್.ಎಂ.ಧನ್ಯಾ, ಶನಿವಾರಸಂತೆ ವಿಘ್ನೇಶ್ವರ ಪಿಯು ಕಾಲೇಜಿನ ಸಿ.ಎಲ್. ಸುಚಿತ್ರಾ, ಕಲಾ ವಿಭಾಗದಲ್ಲಿ ಶನಿವಾರಸಂತೆ ವಿಘ್ನೇಶ್ವರ ಪಿಯು ಕಾಲೇಜಿನ ನಾಸಿಯಾ, ಮಾದಾಪುರದ ಚೆನ್ನಮ್ಮ ಪಿಯು ಕಾಲೇಜಿನ ದಿಲ್‌ಸನ್ ಅವರನ್ನು ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಸಂಘದ ತಾಲೂಕು ಅಧ್ಯಕ್ಷ ಎಚ್.ಆರ್.ಹರೀಶ್, ಜಿಲ್ಲಾಧ್ಯಕ್ಷ ಎಚ್.ಟಿ.ಅನಿಲ್. ಉಪಾಧ್ಯಕ್ಷ ಕವನ್ ಕಾರ್ಯಪ್ಪ, ಮಾಜಿ ಅಧ್ಯಕ್ಷ ಎಸ್.ಎ.ಮುರಳೀಧರ್, ತಾಲೂಕು ಕಾರ್ಯದರ್ಶಿ ಡಿ.ಪಿ.ಲೋಕೇಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net