

ಜಮಖಂಡಿ: ಮಕ್ಕಳಿಗೆ ಉತ್ತಮ ಶಿಕ್ಷಣ, ಸಂಸ್ಕಾರ ನೀಡಬೇಕು ಎಂದು ಬೆಳಗಾವಿ ಬಿಮ್ಸ್ ಆಡಳಿತಾಧಿಕಾರಿ ಡಾ. ಸಿದ್ದು ಹುಲ್ಲೋಳಿ ಹೇಳಿದರು.
ನಗರದ ಕಡಪಟ್ಟಿ ಕ್ರಾಸ್‌ನಲ್ಲಿನ ಪಾರ್ಶ್ವನಾಥ ದಿಗಂಬರ ಜೈನ ಮಂದಿರದಲ್ಲಿ ಜೈನ ಅಲ್ಪಸಂಖ್ಯಾತರ ನೌಕರರ ಕ್ಷೇಮಾಭಿವೃದ್ಧಿ ಟ್ರಸ್ಟ್ ಕಮಿಟಿ, ತಾಲೂಕು ಸಮಸ್ತ ಜೈನ ಸಮಾಜದ ಆಶ್ರಯದಲ್ಲಿ ಭಾನುವಾರ ಆಯೋಜಿಸಿದ್ದ 9ನೇ ಜೈನ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಾಧನೆಗೆ ಸತತ ಪರಿಶ್ರಮ ಅವಶ್ಯ. ಎಸ್‌ಎಸ್‌ಎಲ್‌ಸಿ, ಪಿಯುಸಿ ನಂತರ ಏನು ಮಾಡಬೇಕು ಎಂಬುದನ್ನು ಮೊದಲೇ ನಿರ್ಧಾರ ತೆಗೆದುಕೊಳ್ಳಬೇಕು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಶ್ರೇಷ್ಠ ಸನ್ಮಾನವಾಗಿದೆ. ಮಕ್ಕಳು ಉತ್ತಮ ಅಂಕಗಳನ್ನು ಗಳಿಸುವಲ್ಲಿ ಪರಿಶ್ರಮ ಮೈಗೂಡಿಸಿಕೊಳ್ಳಬೇಕು ಎಂದರು.
ಸಮಾಜದ ಮುಖಂಡ ಆರ್.ಪಿ. ನ್ಯಾಮಗೌಡ ಮಾತನಾಡಿ, ಶಿಕ್ಷಣದಲ್ಲಿ ವಾಮಮಾರ್ಗ ಹುಡುಕಬಾರದು. ಶಿಕ್ಷಣದಿಂದ ಅಭಿವೃದ್ಧಿ ಹೊಂದಲು ಸಾಧ್ಯ. ಶೈಕ್ಷಣಿಕವಾಗಿ ಮಕ್ಕಳು ಸಾಧನೆ ಮಾಡಿದರೆ ಗ್ರಾಮ, ಸಮಾಜ, ಕುಟುಂಬದ ಹೆಸರು ಇಮ್ಮಡಿಯಾಗುತ್ತದೆ ಎಂದರು.
ಸಮಾಜದ ಮುಖಂಡ ದೇವಲ ದೇಸಾಯಿ, ಸುಶೀಲಕುಮಾರ ಬೆಳಗಲಿ, ಬಾಹುಬಲಿ ಉಪಾಧ್ಯ, ಧನ್ಯಕುಮಾರ ಕುಸನಾಳ ಮಾತನಾಡಿದರು.
ಎಸ್‌ಎಸ್‌ಎಲ್‌ಸಿ, ಪಿಯುಸಿ ಪರೀಕ್ಷೆಯಲ್ಲಿ ಶೇ.90ಕ್ಕಿಂತ ಅಧಿಕ ಅಂಕ ಪಡೆದ ಸಮಾಜದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಬನಪ್ಪ ಪರಮಗೊಂಡ, ವಿಮಲಚಂದ ಓಸ್ವಾಲ್, ಮಹಾವೀರ ಕೋರಿ, ಚಗನಲಾಲ್ ಓಸ್ವಾಲ್, ಸಾಗರ ಆಲಗೂರ, ಎ.ಬಿ. ಖೋತ, ಭೂಪಾಲ ನೇಮಣ್ಣವರ ಇದ್ದರು.
ನೇಮಿನಾಥ ರೇಗೌಡರ ಸ್ವಾಗತಿಸಿದರು. ಬಸವರಾಜ ಆಲಗೂರ ವರದಿ ವಾಚನ ಮಾಡಿದರು. ಅಣ್ಣಾಸಾಹೇಬ ಪಡನಾಡ ನಿರೂಪಿಸಿದರು.