

ಹುಬ್ಬಳ್ಳಿ : ಅನುದಾನ ರಹಿತ ಖಾಸಗಿ ಶಾಲೆಗಳ ಕಟ್ಟಡ ಮತ್ತು ಆಸ್ತಿ ತೆರಿಗೆಗೆ ವಿನಾಯಿತಿ ನೀಡುವಂತೆ ಆಗ್ರಹಿಸಿ ಧಾರವಾಡ ಜಿಲ್ಲಾ ಅನುದಾನ ರಹಿತ ಖಾಸಗಿ ಆಡಳಿತ ಮಂಡಳಿಗಳ ವತಿಯಿಂದ ಮಹಾಪೌರ ಜ್ಯೋತಿ ಪಾಟೀಲ ಹಾಗೂ ಉಪ ಮಹಾಪೌರ ಸಂತೋಷ ಚವ್ಹಾಣ ಅವರಿಗೆ ಬುಧವಾರ ಮನವಿ ಸಲ್ಲಿಸಲಾಯಿತು.
ಈಗಾಗಲೇ ಬೆಂಗಳೂರಿನ ಶಿಕ್ಷಣ ಸಂಸ್ಥೆಗಳ ಕಟ್ಟಡಗಳಿಗೆ 2023ರಿಂದ ತೆರಿಗೆ ವಿನಾಯಿತಿ ನೀಡಿ, ನಾಮಿನಲ್ ಸೇವಾ ಶುಲ್ಕ ನಿಗದಿಪಡಿಸಲಾಗಿದೆ ಎಂದು ಆಡಳಿತ ಮಂಡಳಿ ಪದಾಧಿಕಾರಿಗಳು ತಿಳಿಸಿದರು.
ಅದೇ ರೀತಿ ಹುಬ್ಬಳ್ಳಿ -ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯ ಅನುದಾನ ರಹಿತ ಶಾಲೆ, ಕಾಲೇಜು ಹಾಗೂ ಐ.ಟಿ.ಐ ಕಟ್ಟಡಗಳ ಸ್ವತ್ತುಗಳಿಗೆ ತೆರಿಗೆ ವಿನಾಯಿತಿ ನೀಡಿ, ಸೇವಾ ಶುಲ್ಕ ನಿಗದಿಪಡಿಸುವಂತೆ ಕೋರಿದರು.
ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮಹಾಪೌರರಿಗೆ ಮತ್ತು ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು. ನೂತನ ಮಹಾಪೌರ ಹಾಗೂ ಉಪ ಮಹಾಪೌರರನ್ನು ಸನ್ಮಾನಿಸಲಾಯಿತು.
ಮಂಡಳಿ ಅಧ್ಯಕ್ಷ ಜಯಪ್ರಕಾಶ ಟೆಂಗಿನಕಾಯಿ, ಕಾರ್ಯದರ್ಶಿ ಪ್ರೊ. ಎಸ್.ಕೆ. ಆದಪ್ಪನವರ, ಪದಾಧಿಕಾರಿಗಳಾದ ಎಂ.ಕೆ. ಬಾಬಜಿ, ವಿಶ್ವನಾಥ ರಾನಡೆ, ಸಿದ್ದು ಗೌಡ, ಪರಶುರಾಮ ಊಟವಾಲೆ ಹಾಗೂ ಇತರರು ಇದ್ದರು.