

ಮುದ್ದೇಬಿಹಾಳ: ಕಾಂಗ್ರೆಸ್ ಪಕ್ಷದ ಹಿರಿಯ ಶಾಸಕ ತನ್ವೀರ್ ಸೇಠ್ ಅವರಿಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸಿ ಅಹಿಂದ ಮತ್ತು ಮುಸ್ಲಿಂ ಯುವ ಸಂಘಟನೆಯ ಪದಾಧಿಕಾರಿಗಳು ಸೋಮವಾರ ಸ್ಥಳೀಯ ಕಿಲ್ಲಾದಲ್ಲಿರುವ ಟಿಪ್ಪು ಸುಲ್ತಾನ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಕರ್ನಾಟಕ ಮುಸ್ಲಿಂ ಕೌನ್ಸಿಲ್‌ನ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಎಂ. ರಿಸಾಲ್ದಾರ್ ಮಾತನಾಡಿ, ಕಳೆದ ಚುನಾವಣೆಯಲ್ಲಿ ಮುಸ್ಲಿಂ ಮುಖಂಡರೆಲ್ಲರೂ ಒಂದಾಗಿ ಕಾಂಗ್ರೆಸ್ ಬೆಂಬಲಿಸಿದ್ದೇವೆ. ಇದರಿಂದಾಗಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಸಾಧ್ಯವಾಗಿದೆ. ಮುಸ್ಲಿಂ ಸಮುದಾಯದ ಮೊದಲನೇ ಹಂತದ ಹಿರಿಯ ಶಾಸಕರಿಗೆ ಸಚಿವ ಸ್ಥಾನ ಕೊಡಬೇಕಾಗಿತ್ತು. ಆದರೆ ಎರಡನೇ ಹಂತದ ನಾಯಕರಿಗೆ ಸಚಿವ ಸ್ಥಾನ ಕೊಡಲಾಗಿದೆ. ಬೇರೆ ಸಮುದಾಯದ ವಿಷಯ ಬಂದಾಗ ಜಿ. ಪರಮೇಶ್ವರ, ಪ್ರಿಯಾಂಕ ಖರ್ಗೆ, ಡಿ.ಕೆ. ಶಿವಕುಮಾರ ಅವರಿಗೆ ಸಚಿವ ಸ್ಥಾನ ನೀಡಲಾಗಿದೆ. ಆದರೆ ಮುಸ್ಲಿಂ ಸಮುದಾಯದ ವಿಷಯ ಬಂದಾಗ ಪ್ರಥಮ ಹಂತದ ನಾಯಕರನ್ನು ಕೈ ಬಿಟ್ಟು ಎರಡನೇ ಹಂತದ ನಾಯಕರಿಗೆ ಪ್ರಾಮುಖ್ಯತೆ ಕೊಡಲಾಗಿದೆ. ಇದನ್ನು ತೀವ್ರವಾಗಿ ಖಂಡಿಸುತ್ತೇವೆ ಎಂದರು.
ಲೋಕಸಭೆಯ ಚುನಾವಣೆಗೂ ಪೂರ್ವದಲ್ಲಿ ತನ್ವೀರ್ ಸೇಠ್ ಅವರನ್ನು ಸಚಿವರನ್ನಾಗಿ ಮಾಡಬೇಕು ಎಂದು ಒತ್ತಾಯಿಸಲಾಯಿತು.
ಅಹಿಂದ, ಸಂಗೊಳ್ಳಿ ರಾಯಣ್ಣ ಯುವ ಬ್ರಿಗೇಡ್ ಅಧ್ಯಕ್ಷ ನ್ಯಾಯವಾದಿ ಪಿ.ಬಿ. ಮಾತಿನ, ಮುಸ್ಲಿಂ ಯುವ ಸಂಘಟನೆಗಳ ಪ್ರಮುಖರಾದ ಯೂಸುಫ್ ಸಾತಿಹಾಳ, ಫಾರೂಕ್ ದೇಸಾಯಿ, ಮಹೆಬೂಬ್ ಗೋಲಂದಾಜ್, ಮುಲ್ಲಾ, ಪಠಾಣ್, ಮಕಾನದಾರ ಮತ್ತಿತರರು ಪ್ರತಿಭಟನೆಯಲ್ಲಿದ್ದರು.