

ವಿಜಯಪುರ : ಕಳೆದ ೪೦ ವರ್ಷಗಳಿಂದ ತಳವಾರ ಸಮಾಜವನ್ನು ಎಸ್‌ಟಿಗೆ ಸೇರಿಸಿ, ಜಾತಿ ಪ್ರಮಾಣ ಪತ್ರ ವಿತರಿಸುವಂತೆ ಹೋರಾಟ ಮಾಡಲಾಗುತ್ತಿದೆ ಎಂದು ಮಾಜಿ ಶಾಸಕ ಶರಣಪ್ಪ ಸುಣಗಾರ ಹೇಳಿದರು.
ಎಸ್‌ಟಿಗೆ ಸೇರಿಸಬೇಕು ಎಂದು ನಿರಂತರ ಹೋರಾಟ ನಡೆಯುತ್ತಿದೆ. ರಕ್ತದಾನ ಶಿಬಿರ, ಶಾಸಕರ ಮನೆ ಮುಂದೆ ಧರಣಿ, ಸದನದಲ್ಲಿ ಧ್ವನಿ ಎತ್ತಿರುವುದು, ಪಾದಯಾತ್ರೆ ಮಾಡಿದರೂ ಪ್ರಯೋಜನ ಆಗಿಲ್ಲ. ಸರ್ಕಾರದ ವಿಳಂಬ ಧೋರಣೆಯಿಂದಾಗಿ ಜಾತಿ ಪ್ರಮಾಣ ಪತ್ರ ಸಿಗುತ್ತಿಲ್ಲ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಿಂದಗಿ ಉಪ ಚುನಾವಣೆಯಲ್ಲೂ ಪರಿಶಿಷ್ಟ ಪಂಗಡಕ್ಕೆ ಸೇರಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಶ್ವಾಸನೆ ನೀಡಿದರು. ಅದರಂತೆ ಸಮಾಜದ ಮತದಾರರು ಬಿಜೆಪಿಗೆ ಮತ ಹಾಕಿದ್ದರು. ಆದರೆ ಸಮುದಾಯಕ್ಕೆ ಅನ್ಯಾಯ ಮಾಡಲಾಗಿದೆ ಎಂದರು.
ಪರಿಶಿಷ್ಟ ಪಂಗಡಕ್ಕೆ ಮೀಸಲಾತಿ ಹೆಚ್ಚಳ ಮಾಡಬೇಕು ಎಂದು ಬೆಂಗಳೂರಿನಲ್ಲಿ ವಾಲ್ಮೀಕಿ ಸಮಾಜದ ಶ್ರೀಗಳು ಹೋರಾಟ ಮಾಡುತ್ತಿದ್ದು, ಅದಕ್ಕೆ ನಮ್ಮ ಸಮಾಜದ ಬೆಂಬಲವೂ ಇದೆ. ಮೀಸಲಾತಿ ಹೆಚ್ಚಳದ ಆದೇಶ ಹೊರಡಿಸುವ ವೇಳೆ ತಳವಾರ ಸಮುದಾಯವನ್ನು ಎಸ್‌ಟಿಗೆ ಸೇರಿಸುವುದಾಗಿ ಬಿಜೆಪಿ ನಾಯಕರು ವಿಶ್ವಾಸ ವ್ಯಕ್ತಪಡಿಸಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಈಗಾಗಲೇ ತಳವಾರ ಸಮುದಾಯವನ್ನು ಎಸ್‌ಟಿಗೆ ಸೇರಿಸಬೇಕೆನ್ನುವ ವಿಚಾರ ಅಂತಿಮಘಟ್ಟದಲ್ಲಿ ಇದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ತಳವಾರ ಸಮಾಜದವರಿಗೆ ಎಸ್‌ಟಿ ಜಾತಿ ಪ್ರಮಾಣ ಪತ್ರ ವಿತರಿಸಲಾಗುತ್ತಿದೆ. ಆದರೆ ವಿಜಯಪುರ, ಬಾಗಲಕೋಟೆ ಸೇರಿದಂತೆ ಐದು ಜಿಲ್ಲೆಗಳಲ್ಲಿ ಮಾತ್ರ ಜಾತಿ ಪ್ರಮಾಣ ಪತ್ರ ನೀಡುತ್ತಿಲ್ಲ. ಸರ್ಕಾರ ಈ ಕೂಡಲೇ ತಳವಾರ ಸಮಾಜವನ್ನು ಎಸ್‌ಟಿಗೆ ಸೇರಿಸಿ ಆದೇಶ ಹೊರಡಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ಅಽವೇಶನದಲ್ಲಿ ಸುವರ್ಣ ಸೌಧ ಮುತ್ತಿಗೆ ಹಾಕುವ ನಿರ್ಧಾರ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಮುಖಂಡರಾದ ಪ್ರಕಾಶ ಸೊನ್ನದ, ಸುರೇಶಗೌಡ ಪಾಟೀಲ, ಸಾಹೇಬಗೌಡ ಬಿರಾದಾರ, ಚಂದ್ರಶೇಖರ್ ಅಂಬಿಗೇರ, ಮಲ್ಲಪ್ಪ ತಳವಾರ, ಭರತ್ ಕೋಳಿ, ಮತ್ತಿತರರಿದ್ದರು.