ಓದಿಗೆ ಕೊಡುವಷ್ಟು ಪ್ರಾಮುಖ್ಯತೆ ಕ್ರೀಡೆಗೂ ನೀಡಿ: ಡಿ.ಎಸ್.ಅರುಣ್

sports event
ನೆಹರು ಕ್ರೀಡಾಂಗಣದಲ್ಲಿ ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಬೆಂಗಳೂರು ಗ್ರಾಮಾಂತರ ವಿಭಾಗಮಟ್ಟದ ದಸರಾ ಕ್ರೀಡಾಕೂಟ ಉದ್ಘಾಟಿಸಿದರು. ಮಂಜುನಾಥಸ್ವಾಮಿ, ನಾಗರಾಜ್, ಬಾಳಪ್ಪ ಮಾನೆ, ಕೇಶವನ್, ಶ್ರೀಕಾಂತ್ ಇದ್ದರು.
Published on

ಶಿವಮೊಗ್ಗ: ಓದಿಗೆ ಕೊಡುವಷ್ಟು ಪ್ರಾಮುಖ್ಯತೆಯನ್ನು ಕ್ರೀಡೆಗೂ ನೀಡಬೇಕು. ಪ್ರಸ್ತುತ ಕ್ರೀಡಾಕ್ಷೇತ್ರದಲ್ಲಿ ಸಾಕಷ್ಟು ಅವಕಾಶಗಳಿದ್ದು ಆಸಕ್ತರು ಅದರ ಸದ್ಬಳಕೆ ಮಾಡಿಕೊಳ್ಳಬೇಕೆಂದು ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಹೇಳಿದರು.

ನೆಹರು ಕ್ರೀಡಾಂಗಣದಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ವಿವಿಧ ಕ್ರೀಡಾ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಪ್ರಸಕ್ತ ಸಾಲಿನ ಬೆಂಗಳೂರು ಗ್ರಾಮಾಂತರ ವಿಭಾಗಮಟ್ಟದ ದಸರಾ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದ ಅವರು, ಕಳೆದ ಐದು ವರ್ಷಗಳಲ್ಲಿ ದೇಶದ ಕ್ರೀಡಾಕ್ಷೇತ್ರದಲ್ಲಿ ಉತ್ತಮ ಬೆಳೆವಣಿಗೆಯಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯಿಂದ ಖೇಲೋ ಇಂಡಿಯಾ ಪರಿಕಲ್ಪನೆಯಡಿ ಮುಂದಿನ ಒಲಿಂಪಿಕ್ ಕ್ರೀಡೆಗೆ ಈಗಲೇ ಕ್ರೀಡಾಪಟುಗಳನ್ನು ಸಿದ್ಧಪಡಿಸಲಾಗುತ್ತಿದೆ ಎಂದರು.
ಸರ್ಕಾರದ ದೂರದೃಷ್ಟಿಯಿಂದ ಕ್ರೀಡಾಕ್ಷೇತ್ರದಲ್ಲಿ ಉತ್ತಮ ಬೆಳೆವಣಗೆತಯಾಗುತ್ತಿದ್ದು ಪ್ರತಿಭಾವಂತ ಕ್ರೀಡಾಪಟುಗಳು ಹೊರಹೊಮ್ಮುತ್ತಿದ್ದಾರೆ. ನಮ್ಮ ಕ್ರೀಡಾಪಟುಗಳು ಏಷ್ಯನ್ ಕ್ರೀಡೆಗಳಲ್ಲಿ ಒಳ್ಳೆಯ ಸಾಧನೆ ಮಾಡುತ್ತಿದ್ದಾರೆ. ಇಂದಿಗೆ 23 ಚಿನ್ನ ಸೇರಿ ಒಟ್ಟಾರೆ 88 ಪದಕ ಪಡೆದಿರುವುದು ಹೆಮ್ಮೆಯ ವಿಷಯ ಎಂದರು.
ಎನ್‌ಇಪಿ(ರಾಷ್ಟ್ರೀಯ ಶಿಕ್ಷಣ ನೀತಿ) ಅಡಿಯಲ್ಲಿ ಓದಿನ ಜತೆಗೆ ನಮಗೆ ಕ್ರೀಡೆ, ಕಲೆ, ಸಾಹಿತ್ಯ ಹೀಗೆ ಆಸಕ್ತಿ ಇರುವಂತಹ ವಿಷಯವನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶ ಇದೆ. ವಿದ್ಯಾರ್ಥಿಗಳು ತಮ್ಮದೇ ಆದ ದೂರದೃಷ್ಟಿ, ಗುರಿ ಹೊಂದಬೇಕು. ಸೋಲನ್ನು ಸವಾಲಾಗಿ ಸ್ವೀಕರಿಸಿ ಮುಂದೆ ಬರಬೇಕು. ಶಿವಮೊಗ್ಗದಲ್ಲೂ ಕ್ರೀಡಾ ವಲಯ ಸಾಕಷ್ಟು ಬೆಳೆವಣೆ ಕಾಣುತ್ತಿದ್ದು ಕ್ರಿಕೆಟ್ ಮೈದಾನ, ಸಾಕಷ್ಟು ಒಳಾಂಗಣ ಕ್ರೀಡಾಂಗಣಗಳು ಹೀಗೆ ಅಭಿವೃದ್ಧಿಯಾಗುತ್ತಿದೆ. ಒಳ್ಳೆಯ ಅವಕಾಶ ಮತ್ತು ವೇದಿಕೆಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದು ಕ್ರೀಡಾಪಟುಗಳಿಗೆ ಕರೆ ನೀಡಿದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿ, ಬೆಂಗಳೂರು ಗ್ರಾಮಾಂತರ ವಿಭಾಗಮಟ್ಟದ ದಸರಾ ಕ್ರೀಡಾಕೂಟವನ್ನು ಶಿವಮೊಗ್ಗದಲ್ಲಿ ಏರ್ಪಡಿಸಿದ್ದು ಪ್ರತಿ ವಿಭಾಗಮಟ್ಟಕ್ಕೂ ವಿವಿಧ ಕ್ರೀಡೆಗಳನ್ನು ನೀಡಲಾಗಿದೆ. ಈ ವಿಭಾಗಕ್ಕೆ ಟೆನ್ನಿಸ್, ಜುಡೋ, ಯೋಗ, ವಾಲಿಬಾಲ್ ಮತ್ತು ಷಟಲ್ ಬ್ಯಾಡ್ಮಿಂಟನ್ ಒಟ್ಟು 5 ಕ್ರೀಡೆಗಳನ್ನು ನೀಡಲಾಗಿದೆ. ಸುಮಾರು 650 ಕ್ರೀಡಾಪಟುಗಳು ನೋಂದಣಿಯಾಗಿದ್ದಾರೆ. ಇಲ್ಲಿ ಆಯ್ಕೆಯಾದವರು ಮೈಸೂರಿನಲ್ಲಿ ನಡೆಯುವ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವರು ಎಂದರು.
ತರಬೇತುದಾರರಾದ ನಾಗರಾಜ್, ಬಾಳಪ್ಪ ಮಾನೆ, ಕೇಶವನ್ ಮತ್ತು ಶ್ರೀಕಾಂತ್ ಅವರನ್ನು ಸನ್ಮಾನಿಸಲಾಯಿತು. ತರಬೇತುದಾರ ಜಮಾಲ್ ಅಹಮದ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net