

ಹುಳಿಯಾರು : ಸಂತೆ ಸ್ಥಳದಲ್ಲಿ ಮೂಲ ಸೌಕರ್ಯಗಳ ಕೊರತೆ ವಿರೋಧಿಸಿ ರೈತ ಸಂಘ ಗುರುವಾರದಿಂದ ಅಹೋರಾತ್ರಿ ಧರಣಿ ನಡೆಸುವುದಾಗಿ ಎಚ್ಚರಿಕೆ ನೀಡಿದ ಹಿನ್ನೆಲೆಯಲ್ಲಿ ಬಸವೇಶ್ವರನಗರ ಕಲ್ಯಾಣ ಮಂಟಪದಲ್ಲಿ ಅಧಿಕಾರಿಗಳು ಹಾಗೂ ವಿವಿಧ ಸಂಘ-&ಸಂಸ್ಥೆಗಳ ಮುಖಂಡರ ಜತೆ ತುರ್ತು ಸಭೆ ನಡೆಯಿತು.
ಸಂಘದ ರಾಜ್ಯಾಧ್ಯಕ್ಷ ಹೊಸಹಳ್ಳಿ ಚಂದ್ರಣ್ಣ ಮಾತನಾಡಿ, ಹಾಲಿ ನಡೆಯುತ್ತಿರುವ ಸಂತೆ ಸ್ಥಳದಲ್ಲಿ ಮೂಲ ಸೌಕರ್ಯಗಳ ಕೊರತೆಯಿದೆ. ಮೂರ್ನಾಲ್ಕು ದಶಕಗಳಿಂದ ಸಂಗ್ರಹಿಸಿರುವ ಸುಂಕದ ಬಗ್ಗೆ ಲೆಕ್ಕ ಇಲ್ಲ. ಈ ಕೂಡಲೇ ಸಂತೆಯ ಸ್ಥಳ ಬದಲಾಯಿಸಿ. ಇಲ್ಲದಿದ್ದರೆ ಮೂಲ ಸೌಕರ್ಯ ಕಲ್ಪಿಸದೆ ಸುಂಕ ವಸೂಲಿ ಮಾಡಲು ಬಿಡುವುದಿಲ್ಲ ಎಂದರು.
ಸಂಘದ ಅಧ್ಯಕ್ಷ ಕೆಂಕೆರೆ ಬಸವರಾಜು ಮಾತನಾಡಿ, ಕಿಷ್ಕಿಂದೆಯಂತಿರುವ ಸಂತೆಯ ಜಾಗದಲ್ಲಿ ವಾಹನಗಳು ಓಡಾಡಲು ಜಾಗವಿಲ್ಲ. ಮೂಲ ಸೌಕರ್ಯಗಳಿಲ್ಲದೆ ರಸ್ತೆಯಲ್ಲಿ ನಡೆಯುತ್ತಿರುವ ಸಂತೆಯ ಜಾಗವನ್ನು ಈ ಕೂಡಲೇ ಎಪಿಎಂಸಿಗೆ ಸ್ಥಳಾಂತರ ಮಾಡಬೇಕು ಎಂದು ಆಗ್ರಹಿಸಿದರು.
ಕರವೇ ತಾಲೂಕು ಅಧ್ಯಕ್ಷ ಬೇಕರಿ ಪ್ರಕಾಶ್ ಮಾತನಾಡಿ, ಸುಂಕ ವಸೂಲಿ ಮಾಡಿದ ಮೇಲೆ ಸೌಕರ್ಯ ಕಲ್ಪಿಸುವುದು ಪಪಂ ಕರ್ತವ್ಯ. ಆದರೆ ಪಂಚಾಯಿತಿ ತಮ್ಮ ಕರ್ತವ್ಯ ಮರೆತಿರುವುದರಿಂದ ರೈತರು ನೀರು, ನೆರಳು, ಶೌಚಗೃಹದ ವ್ಯವಸ್ಥೆ ಕಲ್ಪಿಸಿವಂತೆ ಧರಣಿ ಕೂರುವಂತಾಗಿದೆ. ಇನ್ನಾದರೂ ಅನ್ನದಾತನಿಗೆ ಅವಮಾನಿಸದೆ ಸೌಕರ್ಯ ಕಲ್ಪಿಸಿಕೊಡಿ ಎಂದರು.
ಎಪಿಎಂಸಿ ಉಪ ನಿರ್ದೇಶಕ ಡಾ.ಬಿ.ರಾಜಣ್ಣ ಮಾತನಾಡಿ, ರೈತರ ಕೃಷಿ ಉತ್ಪನ್ನಗಳ ಮಾರಾಟದ ಉದ್ದೇಶದಿಂದ ಈಗಾಗಲೇ ಎಪಿಎಂಸಿಯಲ್ಲಿ ಮಳಿಗೆಗಳನ್ನು ಹಂಚಿಕೆ ಮಾಡಲಾಗಿದೆ. ಆದರೆ ಎಪಿಎಂಸಿಯಲ್ಲಿ ಸಂತೆ ನಡೆಸಲು ಸಾಕಷ್ಟು ಜಾಗವಿಲ್ಲ ಜತೆಗೆ ಕಾನೂನಿನಡಿ ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದರು.
ಇದರಿಂದ ಆಕ್ರೋಶಗೊಂಡ ರೈತರು ನಾವು ಈಗಾಗಲೇ ಎಪಿಎಂಸಿ ನೋಡಿ ಬಂದಿದ್ದೇವೆ. ಸಂತೆ ಮಾಡಲು ಸಾಕಷ್ಟು ಅವಕಾಶವಿದೆ. ಅಲ್ಲದೆ ಗುಬ್ಬಿ, ಚಿಕ್ಕನಾಯಕನಹಳ್ಳಿ ಸೇರಿ ಹಲವು ಕಡೆ ಎಪಿಎಂಸಿಯಲ್ಲೇ ಸಂತೆಗೆ ಅವಕಾಶ ಕಲ್ಪಿಸಿದ್ದಾರೆ. ರೈತರಿಗೆ ಅನುಕೂಲ ಮಾಡುವ ಮನೋಭಾವ ಇದ್ದರೆ ಎಲ್ಲವೂ ಸಾಧ್ಯ. ಸಂತೆ ಸ್ಥಳವನ್ನು ಕೂಡಲೇ ಬದಲಿಸಿ ಸೂಕ್ತ ಸೌಕರ್ಯ ಕಲ್ಪಿಸಿ. ಅಲ್ಲಿಯವರೆಗೂ ನಾವು ಸುಂಕ ಕಟ್ಟುವುದಿಲ್ಲ. ನಮ್ಮ ಬೇಡಿಕೆ ಈಡೇರುವವರೆಗೂ ಗುರುವಾರದಿಂದ ಪಪಂ ಮುಂದೆ ಅಹೋರಾತ್ರಿ ಧರಣಿ ನಡೆಸುತ್ತೆವೆ ಎಂದು ಸಭೆಯಿಂದ ಹೊರ ನಡೆದರು.
ಸದಸ್ಯರಾದ ಸೈಯದ್ ಜಹೀರ್ ಸಾಬ್, ಅಬೂಬಕರ್ ಸಿದ್ದಿಕ್, ಮಹಮ್ಮದ್ ಜುಬೇರ್, ಮಂಜನಾಯ್ಕ್, ವೆಂಕಟೇಶ್, ಪಪಂ ಮಾಜಿ ಸದಸ್ಯ ರಾಘವೇಂದ್ರ, ಕರವೇ ಜಿಲ್ಲಾ ಉಪಾಧ್ಯಕ್ಷ ಚನ್ನಬಸವಯ್ಯ, ಹೋಬಳಿ ಅಧ್ಯಕ್ಷ ಗೌಡಿ, ಕಾಮನಬಿಲ್ಲು ಫೌಂಡೇಷನ್ ಅಧ್ಯಕ್ಷ ಚನ್ನಕೇಶವ, ಇಮ್ರಾಜ್, ರೈತ ಸಂಘದ ತಾಲೂಕು ಅಧ್ಯಕ್ಷ ಕರಿಯಪ್ಪ, ನೀರಾ ಈರಣ್ಣ, ಪ್ರಶಾಂತ್, ಜಗದೀಶ್, ಲಕ್ಷಿ$್ಮ, ಪುಷ್ಪಾವತಿ, ಬಸವೇಶ್ವರ ನಗರದ ಶಂಕರೇಶ್, ಮಿಲ್ ಶಿವಣ್ಣ ಇತರರು ಇದ್ದರು.
ಕಸವಿಲೆವಾರಿ ಸಮಸ್ಯೆ ಬಗೆಹರಿಸಿ
ಹುಳಿಯಾರು: ವಾರದ ಸಂತೆ ಸ್ಥಳಾಂತರ ಸಭೆ ನಂತರ ಪಟ್ಟಣದಲ್ಲಿ ತಲೆದೂರಿರುವ ಕಸ ವಿಲೇವಾರಿ ಸಮಸ್ಯೆಯ ಬಗ್ಗೆ ಸಂಘ ಸಂಸ್ಥೆಯ ಮುಖಂಡರು ಹಾಗೂ ಪಪಂ ಸದಸ್ಯರು ಅಧಿಕಾರಿಗಳ ವಿರುದ್ಧ ವಾಗ್ದಾಳಿ ನಡೆಸಿದರು.
ಕರವೇ ಅಧ್ಯಕ್ಷ ಬೇಕರಿ ಪ್ರಕಾಶ್ ಮಾತನಾಡಿ, ಕಸ ವಿಲೆವಾರಿ ಸಮಸ್ಯೆ ಬಗೆಹರಿಸದೆ ರ್ನಿಲಸಿರುವುದರಿಂದ ಬೀದಿಯಲ್ಲಿ ಕಸದ ರಾಶಿ ಹೆಚ್ಚುತಿದ್ದು, ದುರ್ನಾತ ಸೇವಿಸಿ ಓಡಾಡುವ ಸ್ಥಿತಿ ನಿರ್ಮಾಣವಾಗಿದೆ. ಜತೆಗೆ ಸೊಳ್ಳೆ, ನೊಣಗಳ ಕಾಟವೂ ಹೆಚ್ಚಾಗಿದೆ. ನಾಲ್ಕೆ$ದು ವರ್ಷಗಳಿಂದ ಅಲ್ಲಿ ಮಾಡುತ್ತೇವೆ, ಇಲ್ಲಿ ಮಾಡುತ್ತೇವೆ ಎಂದು ಸಬೂಬು ಹೇಳಿಕೊಂಡು ಓಡಾಡಿದರ ಫಲ ಇಂದು ಕಸದ ಊರಾಗಿ ಮಾರ್ಪಟ್ಟಿದೆ. ಕೂಡಲೇ ಕಸದ ಸಮಸ್ಯೆ ಬಗೆಹರಿಸದಿದ್ದರೆ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು. ಕರವೇ ಮೆಡಿಕಲ್ ಚನ್ನಬಸವಯ್ಯ, ಪಪಂ ಸದಸ್ಯ ಸಿದ್ದಿಕ್ ಮಾತನಾಡಿದರು.