

ಚಿಕ್ಕಮಗಳೂರು: ಪಶ್ಚಿಮ ಬಂಗಾಳದ ತರಬೇತಿ ವೈದ್ಯೆಯನ್ನು ಸಾಮಾಹಿಕ ಅತ್ಯಾಚಾರವೆಸಗಿ ಬರ್ಬರವಾಗಿ ಹತ್ಯೆಗೈದ ಆರೋಪಿಗಳನ್ನು ಶೀಘ್ರವೇ ಬಂಧಿಸಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಚಿಕ್ಕಮಗಳೂರು ವೈದ್ಯಕೀಯ ಸಂಸ್ಥೆ ವೈದ್ಯರು ಶನಿವಾರ ಸೇವೆ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಿ ಬಳಿಕ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಚಿಕ್ಕಮಗಳೂರು ಐಎಂಎ ಅಧ್ಯಕ್ಷ ಚೈತನ್ಯ ಸವೂರ್, ತರಬೇತಿ ವೈದ್ಯೆ ಕರ್ತವ್ಯ ನಿರ್ವಹಿಸುವ ವೇಳೆಯಲ್ಲಿ ಯುವಕರ ಗುಂಪು ಸಾಮೂಹಿಕ ಅತ್ಯಾಚಾರವೆಸಗಿರುವುದು ನಾಗರೀಕ ಸಮಾಜ ತಲೆತಗ್ಗಿಸುವಂತಾಗಿದೆ. ಇಂಥ ಕೃತ್ಯವೆಸಗಿರುವ ಆರೋಪಿಗಳಿಗೆ ಗಲ್ಲುಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು.
ಈ ಪ್ರಕರಣದಿಂದ ದೇಶದ ವೈದ್ಯಕೀಯ ಕ್ಷೇತ್ರದಲ್ಲಿ ಕರ್ತವ್ಯ ನಿರ್ವಹಿಸುವ ಮಹಿಳೆಯರು ತೀವ್ರ ಆತಂಕಕ್ಕೆ ಒಳಗಾಗಿ ರಕ್ಷಣೆ ಇಲ್ಲದೇ ಕರ್ತವ್ಯ ನಿರ್ವಹಿಸುವುದು ಹೇಗೆಂದು ಗಾಬರಿಗೊಂಡಿದ್ದಾರೆ. ಈ ಪ್ರಕರಣವನ್ನು ಸರ್ಕಾರ ಸೂಕ್ಷö್ಮವಾಗಿ ಗಮನಹರಿಸಬೇಕು. ಕಾನೂನು ಸುವ್ಯವಸ್ಥೆಯನ್ನು ಗಟ್ಟಿಗೊಳಿಸುವ ಮೂಲಕ ಮಹಿಳೆಯರಿಗೆ ರಕ್ಷಣೆ ಒದಗಿಸಬೇಕು ಎಂದು ಒತ್ತಾಯಿಸಿದರು.
ಖಾಸಗಿ ವೈದ್ಯಕೀಯ ಸಂಸ್ಥೆ ರಾಜ್ಯಾಧ್ಯಕ್ಷ ಡಾ. ಡಿ.ಎಲ್.ವಿಜಯ್‌ಕುಮಾರ್ ಮಾತನಾಡಿ, ಸ್ನಾತಕೋತ್ತರ ವೈದ್ಯೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ೩೨ರ ಹರೆಯದ ಮಹಿಳೆ ಸೇವೆಯ ಬಳಿಕ ವಿರಾಮಕ್ಕೆ ತೆರಳಿದ್ದ ವೇಳೆಯಲ್ಲಿ ದಿಢೀರನೇ ಬಂದ ವಿಕೃತ ಮನಸ್ಸಿನ ದುಷ್ಕರ್ಮಿಗಳು ಅತ್ಯಾಚಾರವೆಸಗಿ ಹತ್ಯೆ ನಡೆಸಿರುವುದು ದೇಶವೇ ತಲೆ ತಗ್ಗಿಸುವಂತಾಗಿದೆ ಎಂದು ತಿಳಿಸಿದರು.
ಇತ್ತೀಚೆಗೆ ದೆಹಲಿಯಲ್ಲಿ ನಡೆದ ನಿರ್ಭಾಯ ಅತ್ಯಾಚಾರ ಪ್ರಕರಣಕ್ಕಿಂತ ಹೆಚ್ಚಿನ ಮಟ್ಟದಲ್ಲಿ ಪಶ್ಚಿಮ ಬಂಗಾಳದ ಪ್ರಕರಣ ಭೀಕರವಾಗಿ ನಡೆದಿದೆ. ಇದರಿಂದ ವೈದ್ಯಕೀಯ ಲೋಕವೇ ಆತಂಕಕ್ಕೆ ಒಳಗಾಗಿದೆ. ಈ ಬಗ್ಗೆ ವೈದ್ಯ ವೃತ್ತಿಯಲ್ಲಿರುವ ಮಹಿಳೆಯರಿಗೆ ಸೂಕ್ತ ರಕ್ಷಣೆ ಒದಗಿಸಲು ಸರ್ಕಾರ ಕ್ರಮ ಕೈಗೊಳ್ಳಲು ಮುಂದಾಗಬೇಕು ಎಂದು ಹೇಳಿದರು.
ಅತ್ಯಾಚಾರ ಪ್ರಕರಣದಲ್ಲಿ ಆರೋಪಿಗಳು ಎಷ್ಟೇ ಪ್ರಭಾವಿಗಳಾಗಿದ್ದರು ಒತ್ತಡಕ್ಕೆ ಮಣಿಯದೇ ಕೂಡಲೇ ಬಂಧಿಸಿ ಅತ್ಯಂತ ಕಠಿಣ ಶಿಕ್ಷೆ ನೀಡಬೇಕು. ವೈದ್ಯರ ಸಮುದಾಯಕ್ಕೆ ನ್ಯಾಯ ಒದಗಿಸಿಕೊಡುವವರೆಗೂ ಐಎಂಎ ಹೋರಾಟ ಮುಂದುವರೆದು ನೊಂದ ಕುಟುಂಬಕ್ಕೆ ಬೆಂಬಲವಾಗಲಿದೆ ಎಂದರು.
ಡಾ. ಜ್ಯೋತಿ ಕೃಷ್ಣ ಮಾತನಾಡಿ, ವೈದ್ಯ ವೃತ್ತಿಯಲ್ಲಿ ತುರ್ತು ಸಂದರ್ಭ ಎದುರಾದರೆ ಮಹಿಳೆಯರು ಕೂಡಾ ರಾತ್ರಿ ಸಮಯದಲ್ಲಿ ಆಸ್ಪತ್ರೆಗೆ ತೆರಳಬೇಕಾಗುತ್ತದೆ. ಆದರೆ ಇಂಥ ಹೀನಾ ಕೃತ್ಯದಿಂದ ಮಹಿಳಾ ವೈದ್ಯರು ಹಾಗೂ ಸಿಬ್ಬಂದಿ ತಡರಾತ್ರಿವರೆಗೆ ಕರ್ತವ್ಯ ನಿರ್ವಹಿಸುವುದೇ ದೊಡ್ಡ ಆತಂಕವಾಗಿದೆ ಎಂದು ಹೇಳಿದರು.
ಹಗಲು ಅಥವಾ ರಾತ್ರಿ ಪಾಳಯಲ್ಲಿ ಕೆಲಸ ನಿರ್ವಹಿಸುವ ಮಹಿಳಾ ಸಿಬ್ಬಂದಿಗಳ ಮೇಲೆ ಕೆಲವೊಮ್ಮೆ ಏಕಾಏಕಿ ಹಲ್ಲೆಗೆ ಮುಂದಾಗುವ ಸಂಭವವಿರುತ್ತದೆ. ಈ ಬಗ್ಗೆ ಸರ್ಕಾರಗಳು ಭದ್ರತೆ ಒದಗಿಸುವುದು ಅತಿಮುಖ್ಯ. ಅದರಲ್ಲೂ ಮಹಿಳಾ ಸಿಬ್ಬಂದಿಗೆ ಭದ್ರತೆ ಕೊಡುವುದು ಸರ್ಕಾರದ ಮೂಲ ಕರ್ತವ್ಯವಾಗಬೇಕು ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಅಶ್ವಥ್‌ಬಾಬು, ಜಿಲ್ಲಾ ಸರ್ಜನ್ ಮೋಹನ್‌ಕುಮಾರ್, ವೈದ್ಯರಾದ ಡಾ. ಪ್ಯಾಟ್ರಿಕ್, ಡಾ.ಲೋಹಿತ್, ಡಾ. ಶುಭವಿಜಯ್, ಡಾ. ವಿನಯ್ ಮತ್ತಿತರರಿದ್ದರು.