ನಟ ದರ್ಶನ್, ಸಹಚರರಿಗೆ ಕಠಿಣ ಶಿಕ್ಷೆ ನೀಡಿ

1465469880_darshans-jaggu-dada-movie-pictures - Copy
Published on


ತಿ.ನರಸೀಪುರ: ನಟ ದರ್ಶನ್ ಹಾಗೂ ಆತನ ಸಹಚರರಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಆಗ್ರಹಿಸಿ ಆಗ್ರಹಿಸಿ ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾದ ಆಶ್ರಯದಲ್ಲಿ ಶನಿವಾರ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.


ಮುಖಂಡ ತೊಟ್ಟವಾಡಿ ಮಹದೇವಸ್ವಾಮಿ ಮಾತನಾಡಿ, ನಟ ದರ್ಶನ್ ಹಾಗೂ ಆತನ ಆಪ್ತೆ ಪವಿತ್ರಾ ಗೌಡ ಸೇರಿ 15 ಜನರು ಸೇರಿಕೊಂಡು ರೇಣುಕಸ್ವಾಮಿಯನ್ನು ಹತ್ಯೆ ಮಾಡಿದ್ದಾರೆ. ಸಿನಿಮಾ ಶೈಲಿಯಲ್ಲಿ ಅಪಹರಿಸಿ, ಮಾರಣಾಂತಿಕವಾಗಿ ಥಳಿಸಿದ್ದಾರೆ. ಸಾಲದು ಎನ್ನುವಂತೆ ಮೃತ ದೇಹವನ್ನು ರಾಜ ಕಾಲುವೆಗೆ ಎಸೆದು ಅಮಾನವೀಯತೆ ಮೆರೆದಿದ್ದಾರೆ. ಇದು ನಾಗರಿಕ ಸಮಾಜವೇ ತಲೆತಗ್ಗಿಸುವ ವಿಚಾರವಾಗಿದ್ದು, ಅರೋಪಿಗಳಿಗೆ ಯಾವುದೇ ಕಾರಣಕ್ಕೂ ಜಾಮೀನು ನೀಡಬಾರದು ಎಂದು ಆಗ್ರಹಿಸಿದರು.


ರೇಣುಕಸ್ವಾಮಿ ಅವರ ತಂದೆ-ತಾಯಿಗೆ ವಯಸ್ಸಾಗಿದ್ದು, ಆತನ ಪತ್ನಿ ಗರ್ಭಿಣಿಯಾಗಿದ್ದಾರೆ. ರೇಣುಕಸ್ವಾಮಿ ಅವರಿಂದಲೇ ಮನೆ ನಡೆಯುತ್ತಿತ್ತು. ಈಗ ಅವರ ಹತ್ಯೆಯಿಂದ ಆ ಮನೆಗೆ ದಿಕ್ಕೆ ತೋಚದಂತಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ಅವರ ಕುಟುಂಬಕ್ಕೆ 50 ಲಕ್ಷ ರೂ. ನೆರವು ನೀಡಬೇಕು. ಆತನ ಪತ್ನಿಗೆ ಸರ್ಕಾರಿ ಉದ್ಯೋಗ ನೀಡಬೇಕು ಎಂದು ಒತ್ತಾಯಿಸಿದರು.


ಆರೋಪಿಗಳು ಪ್ರಭಾವಿಗಳಾಗಿದ್ದು, ಪೊಲೀಸರು ನಿಷ್ಪಕ್ಷಪಾತವಾಗಿ ತನಿಖೆ ನೆಡಸಬೇಕು. ಕಾನೂನು ಕುಣಿಕೆಯಿಂದ ತಪ್ಪಿಸಿಕೊಳ್ಳದಂತೆ ನೋಡಿಕೊಳ್ಳಬೇಕು. ಹಲವು ಕ್ರಿಮಿನಲ್ ಪ್ರಕರಣದಲ್ಲಿ ಭಾಗಿಯಾಗಿರುವ ದರ್ಶನ್ ವಿರುದ್ಧ ರೌಡಿಶೀಟ್ ತೆರೆಯಬೇಕು ಎಂದು ಒತ್ತಾಯಿಸಿದರು.


ತಹಸೀಲ್ದಾರ್ ಟಿ.ಜೆ.ಸುರೇಶ್ ಆಚಾರ್ ಅವರಿಗೆ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಬಸವ ಬಳಗದ ಅಧ್ಯಕ್ಷ ಪರಮೇಶ್ ಪಾಟೀಲ್, ಜೆಡಿಎಸ್ ಪಕ್ಷದ ತಾಲೂಕು ಅಧ್ಯಕ್ಷ ಸಿ.ಬಿ.ಹುಂಡಿ ಚಿನ್ನಸ್ವಾಮಿ, ಪುರಸಭಾ ಸದಸ್ಯ ಎಸ್ .ಕೆ .ಕಿರಣ್, ಎನ್. ಲೋಕೇಶ್, ಕೈಯಂಬಳ್ಳಿ ಅಶೋಕ್, ಸಿದ್ದಲಿಂಗ ಸ್ವಾಮಿ, ಹೆಳವರ ಹುಂಡಿ ಮೂರ್ತಿ, ಡೇರಿ ಅಧ್ಯಕ್ಷರಾದ ಡಿ.ಎಲ್.ಮಹದೇವಪ್ಪ, ಮಹದೇವಸ್ವಾಮಿ, ಕೆ.ಮಲ್ಲು, ಫ್ಯಾನ್ಸಿ ಮೋಹನ್, ಶ್ರೀಕಂಠ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net