

ದೊಡ್ಡಬಳ್ಳಾಪುರ: ರಾಜ್ಯ ಸರ್ಕಾರದ ರ್ನಿಲಕ್ಷದಿಂದಾಗಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಲ್ತುಳಿತಕ್ಕೆ ಒಳಗಾಗಿ
11 ಜನ ಅಮಾಯಕ ಯುವಕರು ಜೀವಬಿಟ್ಟಿದ್ದಾರೆ. ಇದು ಕೊಲೆಗಡುಕ ಸರ್ಕಾರ, ಸಿಎಂ ಸಿದ್ದರಾಮಯ್ಯನವರೇ ಇದಕ್ಕೆ ನೇರ ಹೊಣೆ. ಈ ಕೂಡಲೇ ರಾಜೀನಾಮೆ ನೀಡಿ ರಾಜ್ಯದ ಜನತೆಗೆ ಕ್ಷಮೆ ಕೇಳಬೇಕು ಎಂದು ಶಾಸಕರೂ ಆದ ಬಿಜೆಪಿ ಯುವ ಟಕದ ರಾಜ್ಯಾಧ್ಯಕ್ಷ ಧೀರಜ್ ಮುನಿರಾಜು ಆಗ್ರಹಿಸಿದರು.
ನಗರದ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಯಾವುದೇ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳದೆ ಆರ್ಸಿಬಿ ಅಭಿಮಾನಿಗಳಿಗೆ ಸೂತಕದ ವಾತಾವರಣ ಸೃಷ್ಟಿಸಿದೆ. ವಿಧಾನಸೌಧ ಆವರಣದಲ್ಲಿ ಆರ್ಸಿಬಿ ತಂಡಕ್ಕೆ ಸನ್ಮಾನ ಮಾಡುವುದು ಬೇಡ ಎಂದು ಇದಕ್ಕೂ ಮುನ್ನ ಗುಪ್ತಚರ ಇಲಾಖೆ, ಗೃಹ ಇಲಾಖೆ ಸೇರಿ ಎಲ್ಲ ಮೂಲಗಳೂ ಎಚ್ಚರಿಸಿವೆ. ಅದೆಲ್ಲವನ್ನೂ ಕಡೆಗಣಿಸಿ ರಾಜಕೀಯ ದುರುದ್ದೇಶದಿಂದ ಕಾರ್ಯಕ್ರಮ ಆಯೋಜಿಸಿ 11 ಅಮಾಯಕರ ಜೀವ ತೆಗೆದಿದ್ದಾರೆ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು. ಆರ್ಸಿಬಿ ತಂಡವನ್ನು ಅಭಿನಂದಿಸಲು ಕಾರ್ಯಕ್ರಮ ಆಯೋಜಿಸಿದೆ. ಆದರೆ, ಇದು ರಾಜ್ಯದ ಕಾರ್ಯಕ್ರಮವಾ ಅಥವಾ ಪಕ್ಷದ ಕಾರ್ಯಕ್ರಮವಾ ?.... ಇದನ್ನು ರಾಜಕೀಯ ಲಾಭಕ್ಕಾಗಿ ಆಯೋಜನೆ ಮಾಡಲಾಗಿದೆ. ಈ ಕಾರ್ಯಕ್ರಮಕ್ಕೆ ರಾಜ್ಯದ ವಿರೋಧ ಪಕ್ಷದ ನಾಯಕರಿಗಾಗಲಿ ಅಥವಾ ಶಾಸಕರಿಗಾಗಲಿ ಆಹ್ವಾನ ನೀಡಿಲ್ಲ. ಕಾಂಗ್ರೆಸ್ ಮುಖಂಡರು, ಅವರ ಮಕ್ಕಳು, ಮೊಮ್ಮಕ್ಕಳು ಮಾತ್ರ ವೇದಿಕೆಯಲ್ಲಿದ್ದರು ಎಂದು ದೂರಿದರು. ಬೆಂಗಳೂರಿನಲ್ಲಿ ಕಾಲ್ತುಳಿಕ್ಕೆ ಒಳಗಾಗಿ ಜೀವಬಿಟ್ಟವರ ಕುಟುಂಬಕ್ಕೆ ಸರ್ಕಾರ ತಲಾ 10 ಲಕ್ಷ ರೂಪಾಯಿ ಪರಿಹಾರ ಘೋಷಿಸಿದೆ, ಯುವಕರ ಸಾವಿಗೆ ಈ ಹಣ ನ್ಯಾಯವಲ್ಲ. ಕನಿಷ್ಠ 1 ಕೋಟಿ ರೂಪಾಯಿ ಪರಿಹಾರದ ಜತೆಗೆ ಮೃತರ ಕುಟುಂಬಸ್ಥರಲ್ಲಿ ಒಬ್ಬರಿಗೆ ಸರ್ಕಾರಿ ನೌಕರಿ ನೀಡಬೇಕು ಎಂದು ಒತ್ತಾಯಿಸಿದರು.
ಹಿಂದುಪರ ಕಾರ್ಯಕರ್ತರಿಗೆ ಕಿರುಕುಳ
ಇಡೀ ವಿಶ್ವದಲ್ಲೇ ಜಾತ್ಯತಿತ ಸಂಸತಿ ಎಂದರೇ ಅದು ಸನಾತನ ಧರ್ಮ. ಇದರ ವಿರುದ್ಧ ದಬ್ಬಾಳಿಕೆ ಮಾಡುವುದನ್ನು ಕಾಂಗ್ರೆಸ್ ಬಿಡಬೇಕು. ಹಿಂದೂಪರ ಹೋರಾಟಗಾರನ್ನು ಟಾರ್ಗೆಟ್ ಮಾಡಿ ರಾಜ್ಯ ಸರ್ಕಾರ ಕಿರುಕುಳ ನೀಡುತ್ತಿದೆ. ಬಿಜೆಪಿ ಕಾರ್ಯಕರ್ತರ ಪರ ನಾವಿದ್ದೇವೆ ಎಂದು ಸರ್ಕಾರಕ್ಕೆ ಧೀರಜ್ ಮುನಿರಾಜು ಎಚ್ಚರಿಕೆ ನೀಡಿದರು.