ಹಿರಿಯರನ್ನು ಗೌರವಿಸಿದರೆ ಉನ್ನತ ಸ್ಥಾನ

31Naregal1
Published on

ಗದಗ: ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎನ್ನುವಂತೆ ಗುರುಗಳು, ತಂದೆ-ತಾಯಿ, ಹಿರಿಯರಿಗೆ ಗೌರವ ಸಲ್ಲಿಸುವವರು ಸಮಾಜದಲ್ಲಿ ದೊಡ್ಡ ಸ್ಥಾನಕೇರುತ್ತಾರೆ ಎಂದು ನಿವೃತ್ತ ಪ್ರಾಧ್ಯಾಪಕ ಎಸ್.ಟಿ. ಪಾಟೀಲ ಹೇಳಿದರು.

ನಗರದ ಜಿಲ್ಲಾ ಕನ್ನಡ ಸಾಹಿತ್ಯ ಭವನದಲ್ಲಿ ಸೋಮವಾರ ಏರ್ಪಡಿಸಿದ್ದ ಲಿಂ. ಡಾ. ತೋಂಟದ ಸಿದ್ಧಲಿಂಗ ಶ್ರೀಗಳ ಪುಣ್ಯಸ್ಮರಣೆ, 2004-05ನೇ ಸಾಲಿನ ಡಾ. ಡಿ.ಸಿ. ಪಾವಟೆ ಶಿಕ್ಷಣ ಮಹಾವಿದ್ಯಾಲಯ ಪ್ರಶಿಕ್ಷಣಾರ್ಥಿಗಳಿಂದ ನಿವೃತ್ತ ಪ್ರಾಚಾರ್ಯ ಡಾ.ಬಿ.ಮಲ್ಲಿಕಾರ್ಜುನ ಹಾಗೂ ಬೋಧಕ ಸಿಬ್ಬಂದಿ ವರ್ಗದವರಿಗೆ ಗುರುವಂದನೆ ಹಾಗೂ ಸ್ನೇಹ ಸಮ್ಮೇಳನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪವಿತ್ರ ಶಿಕ್ಷಕ ವೃತ್ತಿಯನ್ನು ಗೌರವಿಸಿ ಸೂಕ್ತ ಆದರ್ಶಗಳನ್ನು ಮೈಗೂಡಿಸಿಕೊಂಡು ಜೀವನವನ್ನು ಸಾರ್ಥಕಪಡಿಸಿಕೊಳ್ಳಬೇಕು ಎಂದರು.

ಸಾನ್ನಿಧ್ಯ ವಹಿಸಿದ್ದ ಭೈರನಹಟ್ಟಿ ವಿರಕ್ತಮಠದ ಶಾಂತಲಿಂಗ ಸ್ವಾಮೀಜಿ ಮಾತನಾಡಿ, ಸಮಾಜಮುಖಿಯಾಗಿ, ಪ್ರಾಮಾಣಿಕವಾಗಿ ಕ್ರಿಯಾ ಶೀಲತೆಯೊಂದಿಗೆ ಮುನ್ನಡೆಯಬೇಕು. ಆ ದಿಸೆಯಲ್ಲಿ ಕಾಯಕ, ದಾಸೋಹ, ತತ್ತ್ವಳಿಗೆ ಬದ್ಧರಾಗಿರಬೇಕು ಎಂದರು.

ಗುರುವಂದನೆ ಸ್ವೀಕರಿಸಿದ ಡಾ. ಬಿ. ಮಲ್ಲಿಕಾರ್ಜುನ ಮಾತನಾಡಿ, ಪ್ರತಿಯೊಬ್ಬರೂ ಕಠಿಣ ಪರಿಶ್ರಮಿಗಳಾಗಬೇಕು. ನಿರಂತರ ಪರಿಶ್ರಮದಿಂದ ಸರ್ವ ಕಾರ್ಯಗಳು ಯಶಸ್ವಿಯಾಗುವವು. ಸಮಾಜದಲ್ಲಿ ಗುರುವಿನ ಸ್ಥಾನ ಮಹತ್ತರವಾದದ್ದು ಅದನ್ನರಿತು ಆದರ್ಶ ಮಾದರಿ ಶಿಕ್ಷಕರಾಗಿ, ರಾಷ್ಟ್ರಕ್ಕೆ ಉತ್ತಮ ಕೊಡುಗೆ ನೀಡಬೇಕು ಎಂದರು.

ವಿಜಯಪುರ ಅಕ್ಕಮಹಾದೇವಿ ವಿವಿ ಸಹ ಪ್ರಾಧ್ಯಾಪಕ ಪ್ರೊ.ಯು.ಕೆ. ಕುಲಕರ್ಣಿ ಮಾತನಾಡಿ, ಯಾವುದೇ ವೃತ್ತಿಯಲ್ಲಿ ಭೇದಭಾವ ಮಾಡದೇ ವೃತ್ತಿಯಲ್ಲಿ ಸಂತೃಪ್ತಿ ಕಂಡುಕೊಂಡಾಗ ಮಾತ್ರ ಸಾರ್ಥಕ ಬದುಕು ಕಟ್ಟಿಕೊಳ್ಳಲು ಸಾಧ್ಯ ಎಂದರು.

ಜೆಟಿವಿಪಿ ಸಂಸ್ಥೆಯ ಕಾರ್ಯದರ್ಶಿ ಎಸ್.ಎಸ್. ಪಟ್ಟಣಶೆಟ್ಟಿರ ಅವರು ಲಿಂ. ಡಾ. ತೊಂಟದ ಸಿದ್ಧಲಿಂಗ ಶ್ರೀಗಳ ಸಾಧನೆ ವಿವರಿಸಿದರು.

ಬಿ.ಇಡಿ ಪ್ರಶಿಕ್ಷಣಾರ್ಥಿಗಳಾದ ಉಮೇಶ ತಾಳಿ, ಶರಣಪ್ಪ ಪತ್ತಾರ, ಪ್ರತಿಮಾ ಬೂಸರಡ್ಡಿ ಅನಿಸಿಕೆಗಳನ್ನು ಹಂಚಿಕೊಂಡರು. ಸನ್ಮಾನಿತರಾದ ಶಂಕರ ಕಲ್ಲಿಗನೂರ, ಎಂ.ಎಸ್. ಗುಜ್ಜಲ, ಟಿ.ಬಿ. ಕರದಾನಿ ಎ.ವಿ. ಹಿರೇಮಠ ಮಾತನಾಡಿದರು.

ಮೃತ್ಯುಂಜಯ ಹಿರೇಮಠ ಹಾಗೂ ಹಾಗೂ ಸಂಗಡಿಗರಿಂದ ಪ್ರಾರ್ಥನೆ ಜರುಗಿತು. ಕಳಕಮಲ್ಲೇಶ ಪಟ್ಟಣಶೆಟ್ಟಿ ಸ್ವಾಗತಿಸಿದರು.

ಸೋಮಶೇಖರ ರಾಜೂರ, ಶಾಂತಲಾ ಹಂಚಿನಾಳ ನಿರೂಪಿಸಿದರು. ಶಿವಪ್ಪ ಬಂಡಿವಾಡ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net