

ಮುದ್ದೇಬಿಹಾಳ: ಪಟ್ಟಣದ ಆಲಮಟ್ಟಿ ರಸ್ತೆಯಲ್ಲಿರುವ ಸರ್ವೆ ನಂ. 65/4 ರಲ್ಲಿರುವ 50x200 ಜಾಗವನ್ನು ಡಾ. ಬಾಬು ಜಗಜೀವನರಾಮ್ ಸಮುದಾಯ ಭವನ ಹಾಗೂ ಸಂಗೀತ ಶಾಲೆ ನಿರ್ಮಾಣಕ್ಕೆಂದು ಕಾಯ್ದಿರಿಸಲಾಗಿದ್ದು ಅಲ್ಲಿ ಪುರಸಭೆಯಿಂದ ಕುಡಿಯುವ ನೀರಿನ ಸ್ಥಾವರ ನಿರ್ಮಾಣಕ್ಕೆ ವಿರೋಧಿಸಿ ಮಾದಿಗ ಸಮಾಜದ ಮುಖಂಡರು ಮುಖ್ಯಾಧಿಕಾರಿಗೆ ಗುರುವಾರ ಮನವಿ ಸಲ್ಲಿಸಿದರು.
ಈಗಾಗಲೇ 2005ರಲ್ಲಿ ಪುರಸಭೆ ಅಧ್ಯಕ್ಷರು, ಸದಸ್ಯರು, ಆಡಳಿತ ಮಂಡಳಿಯವರು ಈ ಜಾಗ ಮಾದಿಗ ಸಮಾಜಕ್ಕೆ ಸೇರಿದ್ದು. ಡಾ.ಬಾಬು ಜಗಜೀವನ್‌ರಾಮ್ ಸಮುದಾಯ ಭವನ ಹಾಗೂ ಸಂಗೀತ ಶಾಲೆಗೆ ಸೇರಿದೆ ಎಂದು ಠರಾವು ಪಾಸು ಮಾಡಿದ್ದಾರೆ. ಈ ಜಾಗೆಯ ಬಗ್ಗೆ ತಾಲೂಕಿನ ಮಾದಿಗ ಸಮಾಜದವರು 2019ರ ಸೆ.19 ರಂದು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಎಸ್‌ಸಿ, ಎಸ್ಟಿ ಜಿಲ್ಲಾ ಜಾಗೃತ ಉಸ್ತುವಾರಿ ಸಮಿತಿ ಸಭೆಯಲ್ಲಿ ಸದಸ್ಯ ಬಸವರಾಜ ಪೂಜಾರಿ ಚರ್ಚೆ ಮಾಡಿದ್ದಾರೆ.
ಜಿಲ್ಲಾಧಿಕಾರಿ ಅವರು ಎಸಿ ಅವರಿಗೆ ಸಂಬಂಧಿಸಿದ ಮುಖ್ಯಾಧಿಕಾರಿಗಳಿಗೆ ಮುಂದಿನ ಕ್ರಮಕ್ಕೆ ಎಂದು ತಿಳಿಸಿದ್ದರು. ಅದರಂತೆ ಸದರಿ ಜಾಗದ ಹಂಚಿಕೆ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿ ತಂಟೆ, ತಕರಾರು ಇದ್ದಲ್ಲಿ ಆಕ್ಷೇಪಣೆ ಆಹ್ವಾನಿಸಲಾಗಿತ್ತು. ಯಾರದ್ದೂ ತಂಟೆ ತಕರಾರು ಇರಲಿಲ್ಲವೆಂದು ಹೇಳಿರುವುದಾಗಿ ಮನವಿಯಲ್ಲಿ ತಿಳಿಸಲಾಗಿದೆ.
ಈಗ ಸದರಿ ಜಾಗದಲ್ಲಿ ಪುರಸಭೆಯಿಂದ ನೀರಿನ ಟ್ಯಾಂಕ್ ನಿರ್ಮಿಸಲು ಮುಂದಾಗಿದ್ದಾರೆ ಎಂಬ ಮಾಹಿತಿ ನಮ್ಮ ಗಮನಕ್ಕೆ ಬಂದಿದ್ದು ಈ ಆಸ್ತಿಯಲ್ಲಿ ಯಾವುದೇ ಕಾರಣಕ್ಕೂ ಅನ್ಯ ಚಟುವಟಿಕೆಗಳನ್ನು ಮಾಡದೆ ಮಾದಿಗ ಸಮಾಜಕ್ಕೆ ಹತ್ತು ದಿನಗಳಲ್ಲಿ ಉತಾರ ಪೂರೈಸಬೇಕು. ಇಲ್ಲದಿದ್ದಲ್ಲಿ ಪುರಸಭೆ ಎದುರಿಗೆ ಧರಣಿ ಸತ್ಯಾಗ್ರಹ ಆರಂಭಿಸುತ್ತೇವೆ ಎಂದು ಮುಖ್ಯಾಧಿಕಾರಿಗೆ ಸಲ್ಲಿಸಿದ ಮನವಿಯಲ್ಲಿ ತಿಳಿಸಲಾಗಿದೆ.
ಮುಖ್ಯಾಧಿಕಾರಿ ಕೆ.ಎಂ. ಖಿಲಾರಿ ಮನವಿ ಸ್ವೀಕರಿಸಿದರು. ಮುಖಂಡರಾದ ಬಸವರಾಜ ಪೂಜಾರಿ, ದೇವರಾಜ ಹಂಗರಗಿ, ಮಹಾಂತೇಶ ಕಂದಗನೂರ, ಆನಂದ ಮುದೂರ, ಮಹೆಬೂಬ ಹಡಲಗೇರಿ, ಜಗದೀಶ ಸರೂರ, ಶಶಿಕುಮಾರ ಹಳ್ಳೂರ, ರಾಹುಲ್ ಹಂದ್ರಾಳ, ಶರಣು ಸರೂರ, ಭೀಮಣ್ಣ ಗೋನಾಳ, ಬಸವರಾಜ ಕೋಳೂರ, ಶ್ರೀನಿವಾಸ ಐಹೊಳೆ, ಶಿವು ದೊಡಮನಿ, ಶ್ರೀಧರ ಹಳ್ಳೂರ ಇತರರಿದ್ದರು.