ಚುನಾವಣೆಯಲ್ಲಿ ಯುವಜನತೆಗೆ ಮೀಸಲಾತಿ ನೀಡಿ

D M Sali
Published on

ರಟ್ಟಿಹಳ್ಳಿ: ದೇಶಪ್ರೇಮ, ಗಡಿನಾಡ ಭಾಷೆಗಳ ಬಗ್ಗೆ ಗೌರವ, ಭ್ರಷ್ಟಾಚಾರ ವಿರೋಧಿಸುವಿಕೆ, ಪರಧರ್ಮ ಸಹಿಷ್ಣುತೆ ಹೊಂದಿರುವ ಯುವಜನತೆಗೆ ವಿಧಾನಸಭೆ ಮತ್ತು ಲೋಕಸಭೆಗೆ ಆಯ್ಕೆಯಾಗಲು ಮೀಸಲಾತಿ ನೀಡಬೇಕು. ಯುವಜನತೆಗೆ ಈ ಮೀಸಲಾತಿ ನೀಡಿ ಸಾಮಾಜಿಕ ಸಮಸ್ಯೆಗಳ ಪರಿಹಾರಕ್ಕೆ ಮತ್ತು ರಾಷ್ಟ್ರ ರಕ್ಷಣೆಯ ಕಾರ್ಯಕ್ಕೆ ಸಿದ್ಧಗೊಳಿಸಬೇಕು ಎಂದು ಮಾಜಿ ಮುಖ್ಯ ಸಚೇತಕ ಡಿ.ಎಂ. ಸಾಲಿ ಹೇಳಿದರು.

ಪಟ್ಟಣದ ಪ್ರಿಯದರ್ಶಿನಿ ವಿದ್ಯಾಸಂಸ್ಥೆಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2010-11ರ ಜನಗಣತಿಯ ಪ್ರಕಾರ ಭಾರತದ ಒಟ್ಟು ಜನಸಂಖ್ಯೆಯಲ್ಲಿ 0 ದಿಂದ 17ರ ವಯೋಮಾನದವರು ಶೇ. 36.5, 18ರಿಂದ 40 ವಯೋಮಾನದವರು ಶೇ. 55, 40 ರಿಂದ 60 ವಯೋಮಾನದವರು ಶೇ. 5.4 ಮತ್ತು 60 ಮೇಲ್ಪಟ್ಟು ವಯೋಮಾನದ ಶೇ. 3.1ರಷ್ಟು ಜನರಿದ್ದಾರೆ ಎಂದರು.

18ರಿಂದ 40 ವಯೋಮಾನದಲ್ಲಿರುವವರನ್ನು ಕೇವಲ ಮತದಾರರನ್ನಾಗಿ ಬಳಸಿಕೊಳ್ಳುತ್ತಿದ್ದೇವೆ. ಇವರಿಗೆ ಮತದಾನ ಹಕ್ಕು ಕೊಡುವ ಮುಖಾಂತರ ಕೋಮುವಾದ ಪ್ರತಿಪಾದನೆ ಮಾಡುವಂತಹ, ಭ್ರಷ್ಟಾಚಾರಿಗಳು, ದೇಶಪ್ರೇಮ ಇಲ್ಲದವರು, ಭಾಷೆ ಹಾಗೂ ನೆಲ-ಜಲದ ಮಾಹಿತಿ ಇರದವರನ್ನು ಆಯ್ಕೆ ಮಾಡುತ್ತಿದ್ದೇವೆ. ಯುವಜನತೆ ಆಶಯದ ಪ್ರಕಾರ ದೇಶಪ್ರೇಮ ಹುಟ್ಟು ಹಾಕುವುದು, ಪರಧರ್ಮ ಸಹಿಷ್ಣುತೆ ಹೊಂದುವುದು, ರಾಷ್ಟ್ರದ ಅಭಿಮಾನ ಹೊಂದಿ ಅನೇಕ ಭಾಷೆ ಮತ್ತು ಪರಧರ್ಮ ಸಹಿಷ್ಣತೆಯಿಂದ ಕೂಡಿದ ಈ ಪ್ರಜಾಪ್ರಭುತ್ವ ವ್ಯವಸ್ಥೆ ಮುನ್ನೆಡುಸುವಂತಹವರು ದೇಶಕ್ಕೆ ಅವಶ್ಯವಾಗಿದೆ. ಯುವಜನತೆಯಲ್ಲಿ ಸಾಮೂಹಿಕ ಕ್ರಿಯಾಶೀಲತೆ ಜಾಗೃತಗೊಳಿಸಿ, ಸುಧಾರಣೆ ತರುವಂತವರನ್ನು ಸಿದ್ಧಗೊಳಿಸಿ ಅಂತಹವರ ಆಯ್ಕೆಗೆ ಮೀಸಲಾತಿ ನೀಡಬೇಕಾಗಿದೆ ಎಂದರು.

ಯುವಜನರ ಪ್ರಶ್ನೆಗಳಿಗೆ, ಅವರುಗಳ ತುಡಿತಕ್ಕೆ ಅವರೇ ನ್ಯಾಯ ದೊರಕಿಸಿಕೊಡಲು ಸಾಧ್ಯ. ಸಾಮಾಜಿಕ ಸಮಸ್ಯೆಗಳು ದೇಶದ ಸಮಸ್ಯೆಗಳಾಗಬಾರದು. ಹೀಗಾಗಿ ಯುವಜನತೆಗೆ ಮೀಸಲಾತಿ ನೀಡುವುದರ ಬಗ್ಗೆ ಚಿಂತನೆಯಾಗಬೇಕಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net