

ಚಿತ್ರದುರ್ಗ : ವಿಧಾನಸಭಾ ಚುನಾವಣೆಯಲ್ಲಿ ಚಿತ್ರದುರ್ಗ, ತುಮಕೂರು ಜಿಲ್ಲೆಗಳಲ್ಲಿ ಕಾಡುಗೊಲ್ಲ ಸಮುದಾಯದ ಅಭ್ಯರ್ಥಿಗಳಿಗೆ ಟಿಕೆಟ್ ನೀಡುವಂತೆ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ನಾಯಕರನ್ನು ರಾಜ್ಯ ಕಾಡುಗೊಲ್ಲ ಬುಡಕಟ್ಟು ಮಹಾಸಭಾ ಅಧ್ಯಕ್ಷ ಡಾ.ದೊಡ್ಡ ಮಲ್ಲಯ್ಯ ಒತ್ತಾಯಿಸಿದ್ದಾರೆ.
ಸಮುದಾಯದ ಜನರು ಇಂದಿಗೂ ಮುಖ್ಯವಾಹಿನಿಗೆ ಬಂದಿಲ್ಲ. ರಾಜಕೀಯವಾಗಿಯೂ ಪ್ರಾತಿನಿಧ್ಯ ಸಿಕ್ಕಿಲ್ಲ. ಕಾಡುಗೊಲ್ಲರು ಚಿತ್ರದುರ್ಗ ಜಿಲ್ಲೆಯಲ್ಲಿ 3ನೇ ಅತಿ ದೊಡ್ಡ ಸಮುದಾಯವಾಗಿದ್ದರೂ ಮಾನ್ಯತೆ ಸಿಕ್ಕಿಲ್ಲ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಚಿತ್ರದುರ್ಗ, ತುಮಕೂರು, ಕೂಡ್ಲಿಗಿ, ಅರಸೀಕೆರೆಯಲ್ಲಿ ಕಾಡುಗೊಲ್ಲರ ಸಮುದಾಯದವರ ಸಂಖ್ಯೆ ಹೆಚ್ಚಿದೆ. ಕಳೆದ ಚುನಾವಣೆಯಲ್ಲಿ ಯಾವ ಪಕ್ಷವೂ ಟಿಕೆಟ್ ಕೊಟ್ಟಿಲ್ಲ. ಕಾಡುಗೊಲ್ಲ ಅಭಿವೃದ್ಧಿ ನಿಗಮಕ್ಕೆ ಅಧ್ಯಕ್ಷರ ನೇಮಕ ಮಾಡಿ ಮೂಗಿಗೆ ತುಪ್ಪ ಸವರಲಾಗಿದೆ ಎಂದರು.
ಅಲೆಮಾರಿ ಪಟ್ಟಿಗೆ ಸೇರಿಸಲು, ಜಾತಿ ಪ್ರಮಾಣ ಪತ್ರ ನೀಡಲು ಸಲ್ಲಿಸಿದ ಮನವಿಗಳು ಮೂಲೆ ಸೇರಿವೆ ಎಂದು ತಿಳಿಸಿದರು. ಜೆ.ವಿ.ಲಕ್ಷ್ಮೀದೇವಿ, ಹಾರೋಗೆರೆ ಮಾರಣ್ಣ, ಕೃಷ್ಣಪ್ಪ ಚಿನ್ನಪ್ಪ , ಮಹಾಸಭಾ ಹಾಗೂ ಸಮುದಾಯದ ಪ್ರಮುಖರು ಇದ್ದರು.
----