ತುಂಗಭದ್ರಾ ಸಕ್ಕರೆ ಕಾರ್ಖಾನೆ ಮಾಲೀಕರಿಗೆ ಬದಲಿ ಜಾಗ ಕೊಡಿ: ಟಿ.ಡಿ.ಮೇಘರಾಜ್

bjp dist president T.D. Megharaj
ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್
Published on

ಶಿವಮೊಗ್ಗ: ತುಂಗಭದ್ರಾ ಸಕ್ಕರೆ ಕಾರ್ಖಾನೆ ಮಾಲೀಕರಿಗೆ ಬದಲಿ ಜಾಗ ಕೊಡಬೇಕು. ಸರ್ಕಾರ ಈ ಬಗ್ಗೆ ಮಧ್ಯೆ ಪ್ರವೇಶ ಮಾಡಬೇಕು ಎಂಬುದು ಬಿಜೆಪಿ ನಿಲುವಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್ ತಿಳಿಸಿದರು.

ಶಿವಮೊಗ್ಗ ತಾಲೂಕಿನ ಯರಗನಾಳು, ಸದಾಶಿಪುರ, ಮಲವಗೊಪ್ಪ ಸೇರಿ ಹಲವೆಡೆ ತುಂಗಭದ್ರಾ ಸಕ್ಕರೆ ಕಾರ್ಖಾನೆ ಮರು ಆರಂಭ ಆಗಬೇಕೆಂಬ ಕೂಗು ಎಬ್ಬಿಸುತ್ತಿದ್ದು ಇದೀಗ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರು ರೈತರ ನೆರವಿಗೆ ಬರುವುದಾಗಿ ಹೇಳಿರುವುದು ಸಂಸದ ಬಿ.ವೈ.ರಾಘವೇಂದ್ರ ಮತ್ತು ಆ ಭಾಗದ ರೈತರ ಹೋರಾಟಕ್ಕೆ ಸಿಕ್ಕ ಮೊದಲ ಜಯವಾಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ರೈತರು 2,300 ಎಕರೆ ಪ್ರದೇಶದಲ್ಲಿ ಉಳುಮೆ ಮಾಡಿಕೊಂಡಿದ್ದಾರೆ. ಮನೆಗಳನ್ನು ಕಟ್ಟಿಕೊಂಡು ಸಾವಿರಾರು ಕುಟುಂಬ ವಾಸವಾಗಿದೆ. ರೈತರು, ರೈತ ಹೋರಾಟಗಾರರು ಅನೇಕ ಬಾರಿ ಅಧಿಕಾರಿಗಳ ಮನೆ ಬಾಗಿಲು ತಟ್ಟಿದ್ದಾರೆ. ಒಕ್ಕಲೆಬ್ಬಿಸುವ ಹುನ್ನಾರ ನಡೆಯುತ್ತಿದೆ ಎನ್ನುವುದು ಆ ಭಾಗದ ಜನರ ಆತಂಕವಾಗಿದೆ. 12 ದಿನದೊಳಗೆ ಜಾಗವನ್ನು ಕಾರ್ಖಾನೆಗೆ ಸೇರಿದ ಮರು ವಶ ಮಾಡಬೇಕೆಂದು ಮದ್ರಾಸ್ ಕೋರ್ಟ್ ಆದೇಶಿಸಿದ್ದು ಜ.12 ಅದರ ಅವಧಿ ಪೂರೈಸುತ್ತದೆ. ಕೋರ್ಟ್ ಮೊರೆ ಹೋಗಿ ನಿಷೇಧಾಜ್ಞೆ ತರುತ್ತಾರೆಂಬ ಕಾರಣಕ್ಕೆ ಯಾವೊಬ್ಬ ರೈತನಿಗೂ ನೋಟಿಸ್ ನೀಡಿಲ್ಲ. ಹಿಂಬರಹ ನೀಡಿದರೆ ತಡೆಯಾಜ್ಞೆ ತರಲು ಅವಕಾಶವಿದೆ ಎಂಬ ಕಾರಣಕ್ಕೆ ಅದನ್ನೂ ಮಾಡಿಲ್ಲ ಎಂದು ದೂರಿದರು.
ಸಂಸದ ರಾಘವೇಂದ್ರ ಅವರು ಕ್ಷೇತ್ರದಲ್ಲಿ ಎಷ್ಟೆಲ್ಲ ಕೆಲಸ ಮಾಡಿದ್ದಾರೆ. ಅವರ ಕೊಡುಗೆ ಏನಿದೆ ಎಂಬುದನ್ನು ಚರ್ಚಿಸಲು ನಾವು ಸಿದ್ಧರಿದ್ದೇವೆ. ಚರ್ಚೆಗೆ ಬರಲು ಅವರು ಸಿದ್ಧರಾಗಬೇಕು. ಸೊರಬ ತಾಲೂಕಿನಲ್ಲಿ ಮೂಡಿ, ಮೂಗೂರು ಏತ ನೀರಾವರಿ ಯೊಜನೆ ಬರಲು ಯಡಿಯೂರಪ್ಪ, ರಾಘವೇಂದ್ರ ಅವರೇ ಬರಬೇಕಾಯಿತು ಎಂದರು.
ಎಂಎಲ್‌ಸಿ ಎಸ್.ರುದ್ರೇಗೌಡ, ಶಿವರಾಜ್, ಬಿ.ಕೆ.ಶ್ರೀನಾಥ, ದಿನೇಶ್ ಬುಳ್ಳಾಪುರ, ತಮ್ಮಡಿಹಳ್ಳಿ ನಾಗರಾಜ್, ಎನ್.ಕೆ.ಜಗದೀಶ್, ಕೆ.ವಿ.ಅಣ್ಣಪ್ಪ ಸುದ್ದಿಗೋಷ್ಠಿಯಲ್ಲಿದ್ದರು.

ಕಾಂಗ್ರೆಸ್ ಸರ್ಕಾರ ಇದ್ದಾಗ ಏಕೆ ಆಗಲಿಲ್ಲ?
1980ಕ್ಕೂ ಮುನ್ನ ಕಾಂಗ್ರೆಸ್ ಸರ್ಕಾರವೇ ಅಧಿಕಾರದಲ್ಲಿತ್ತು. ಆಗ ಏಕೆ ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆಯನ್ನು ಬಗೆಹರಿಸಲಿಲ್ಲ. ಆಗ ರಾಜ್ಯ ಸರ್ಕಾರಕ್ಕೆ ಡಿನೋಟಿಫೈ ಮಾಡುವ ಸಂಪೂರ್ಣ ಅಧಿಕಾರವಿತ್ತು. ಆ ಬಳಿಕ ಮತ್ತೆ ಅಧಿಕಾರಕ್ಕೆ ಬಂದಾಗ 6,500 ಸಾವಿರ ಎಕರೆ ಡಿನೋಟಿಫೈ ಮಾಡಲು ಹೊರಟಿತ್ತು. ಆದರೆ ಬಿ.ಎಸ್.ಯಡಿಯೂರಪ್ಪ ಸಿಎಂ ಆಗಿದ್ದಾಗ 9,500 ಎಕರೆಯನ್ನು ಸರ್ವೆ ಮಾಡಿ ಡಿನೋಟಿಫೈ ಮಾಡಲು ನಿರ್ಧರಿಸಿದ್ದರು ಎಂದು ಮೇಘರಾಜ್ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net