

ಶಿವಮೊಗ್ಗ: ತೀವ್ರ ಮಳೆಯಿಂದ ಬೆಳೆ ಹಾನಿಗೊಳಗಾದ ರೈತರಿಗೆ ಕೂಡಲೇ ಪರಿಹಾರ ನೀಡಬೇಕು. ಕೃಷಿ ಪರಿಕರಗಳಿಗೆ ಸಬ್ಸಿಡಿ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿ ಜಿಲ್ಲಾ ಜೆಡಿಎಸ್ ರೈತ ಘಟಕದ ಪದಾಧಿಕಾರಿಗಳು ಡಿಸಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.
ಕೃಷಿ ಪಂಪ್‌ಸೆಟ್‌ಗಳಿಗೆ ಆಧಾರ್ ಕಾರ್ಡ್ ಜೋಡಣೆಗೆ ಮುಂದಾಗಿರುವ ನಿರ್ಧಾರ ಹಿಂಪಡೆಯಬೇಕು. 2024-25ರಲ್ಲಿ ಪಹಣಿಯಲ್ಲಿ ಸಮರ್ಪಕವಾಗಿ ಬೆಳೆ ನಮೂದು ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಭದ್ರಾ ಜಲಾಶಯದಿಂದ ಗೋಂದಿ ನಾಲೆಯ ಕೊನೆಯ ಭಾಗದವರೆಗೂ ನೀರು ಹರಿಸಲು ಅನುಕೂಲವಾಗುವಂತೆ ನಾಲೆಯ ಹೂಳು ತೆಗೆಯಲು ಕ್ರಮ ಕೈಗೊಳ್ಳಬೇಕು. ಶಿವಮೊಗ್ಗ ತಾಲೂಕು ಆನವೇರಿ ಗ್ರಾಪಂನ ಇಟ್ಟಿಗೆಹಳ್ಳಿಯಲ್ಲಿ ಕೆರೆ ನಿರ್ಮಿಸಬೇಕು. ಜಿಪಂ, ತಾಪಂ, ನಗರ ಪಾಲಿಕೆಗೆ ಕೂಡಲೇ ಚುನಾವಣೆ ಘೋಷಿಸಬೇಕು ಎಂದು ಒತ್ತಾಯಿಸಿದರು.
ಜೆಡಿಎಸ್ ರೈತ ಘಟಕದ ಜಿಲ್ಲಾಧ್ಯಕ್ಷ ಎಂ.ದಾನೇಶ್, ಜೆಡಿಎಸ್ ಕಾರ್ಯಾಧ್ಯಕ್ಷ ದಾದಾಪೀರ್, ಕಾರ್ಯದರ್ಶಿ ರಾಕೇಶ್ ಡಿಸೋಜ, ಪ್ರಮುಖರಾದ ಕೆ.ಪಿ.ಓಂಕಾರಪ್ಪ, ಸಿ.ಪಿ.ನಾಗರಾಜ್, ಎಚ್.ಆರ್.ಮಹೇಶ್ವರಪ್ಪ, ಎಸ್.ಎಲ್.ನಿಖಿಲ್, ರುದ್ರೇಶ್ ಇತರರಿದ್ದರು.