ಗುಣಮಟ್ಟದ ಆಹಾರ ನೀಡಿ ಅಪೌಷ್ಟಿಕತೆ ತಪ್ಪಿಸಿ: ಡಾ.ಮಧುಸೂದನ

poshan abiyana
Published on

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ೫ ವರ್ಷದೊಳಗಿನ ಸಾಧಾರಣ ಅಪೌಷ್ಟಿಕತೆಯಿಂದ ೨೬೪ ಮಕ್ಕಳು ಹಾಗೂ ತೀವ್ರ ಅಪೌಷ್ಟಿಕತೆಯಿಂದ ೫೦ ಮಕ್ಕಳು ತುತ್ತಾಗಿದ್ದು, ಮಕ್ಕಳ ಅಪೌಷ್ಟಿಕತೆ ದೂರ ಮಾಡಲು ಗುಣಮಟ್ಟದ ಆಹಾರ ನೀಡುವಂತಾಗಬೇಕು ಎಂದು ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ಮಧುಸೂದನ ಕರೆ ನೀಡಿದರು.


ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನ ಕಾರ್ಯಕ್ರಮದಡಿಯಲ್ಲಿ ಮಕ್ಕಳ ವಿಭಾಗದಿಂದ ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಮಕ್ಕಳ ಹೊರ ರೋಗಿಗಳ ವಿಭಾಗದಲ್ಲಿ ನಡೆದ ಪೋಷಣ ಅಭಿಯಾನ ಮಾಸಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.


ಐದು ವರ್ಷದೊಳಗಿನ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿರುವ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದ್ದು, ಇದನ್ನು ತಡೆಯಬೇಕಿದೆ. ಇತ್ತೀಚಿನ ದಿನಗಳ ಜೀವನ ಶೈಲಿಯಲ್ಲಿನ ಬದಲಾವಣೆ, ಗುಣಮಟ್ಟದ ಆಹಾರ ಪಡೆಯದಿರುವುದು ಮತ್ತಿತರ ಕಾರಣವಾಗಿದೆ. ಆದ್ದರಿಂದ ಸರ್ಕಾರದಿಂದ ಪ್ರತೀ ಮೂರು ತಿಂಗಳಿಗೊಮ್ಮೆ ಮಕ್ಕಳ ಆರೋಗ್ಯ ತಪಾಸಣೆ ಕೈಗೊಳ್ಳಲಾಗುತ್ತಿದ್ದು, ಆ ನಿಟ್ಟಿನಲ್ಲಿ ಮಕ್ಕಳ ಆರೋಗ್ಯ ತಪಾಸಣೆ ಮಾಡಿಸಿ ಅಪೌಷ್ಟಿಕತೆ ತಡೆಯಬೇಕು. ಮಕ್ಕಳಿಗೆ ಮನೆಯಲ್ಲಿ ತಯಾರಿಸಿದ ಸಮತೋಲಿತ ಆಹಾರವನ್ನು ನೀಡುವಂತಾಗಬೇಕು ಎಂದು ಡಾ.ಮಧಸೂದನ್ ಸಲಹೆ ನೀಡಿದರು.


ಅಪೌಷ್ಟಿಕತೆಯು ರೋಗ ನಿರೋಧಕ ಶಕ್ತಿಯನ್ನು ಕಡಿಮೆ ಮಾಡುತ್ತದೆ. ರೋಗಕ್ಕೆ ಒಳಗಾಗುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ದೈಹಿಕ ಮತ್ತು ಮಾನಸಿಕ ಬೆಳವಣಿಗೆಯನ್ನು ದುರ್ಬಲಗೊಳಿಸುತ್ತದೆ. ಸಮತೋಲಿತ ಆಹಾರವಾದ ಹಸಿರು ಎಲೆಯುಕ್ತ ತರಕಾರಿ ಮತ್ತು ಹಣ್ಣುಗಳು, ಬೇಳೆ ಕಾಳುಗಳು, ಏಕದಳ ಮತ್ತು ದ್ವಿದಳ ಧಾನ್ಯಗಳು, ಶೇಂಗಾ ಹಾಗೂ ವಿಶೇಷವಾಗಿ ಸಿರಿಧಾನ್ಯ ಬಳಸುವಂತಾಗಬೇಕು. ಹಾಗೆಯೇ, ರಕ್ತಹೀನತೆ ಕಾಯಿಲೆ ತಡೆಯುವುದು ಅತೀ ಮುಖ್ಯವಾಗಿದೆ. ಆ ನಿಟ್ಟಿನಲ್ಲಿ ಮಕ್ಕಳ ಶಾರೀರಿಕ ಮತ್ತು ಭೌದ್ಧಿಕ ಬೆಳವಣಿಗೆ ಅತೀಮುಖ್ಯವಾಗಿದೆ ಎಂದರು.


ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕ ಡಾ.ವಿಶಾಲ್ ಕುಮಾರ್ ಮಾತನಾಡಿ, ಆರೋಗ್ಯಯುತ ಸಮಾಜ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಬೇಕಿದೆ. ಆ ನಿಟ್ಟಿನಲ್ಲಿ ಮಕ್ಕಳ ಆರೋಗ್ಯ ಕಡೆ ಹೆಚ್ಚಿನ ಗಮನಹರಿಸುವಂತಾಗಬೇಕು. ಸರ್ಕಾರದ ಹಲವು ಯೋಜನೆಗಳನ್ನು ಬಳಸಿಕೊಳ್ಳುವಂತಾಗಬೇಕು ಎಂದರು.


ಡಾ.ನರಸಿಂಹ ರೈ ಮಾತನಾಡಿ, ಮಕ್ಕಳ ಆರೋಗ್ಯ ತಪಾಸಣೆಯನ್ನು ಕಾಲಕಾಲಕ್ಕೆ ಮಾಡಿಸಿ ಮಕ್ಕಳ ಆರೋಗ್ಯಯುತ ಬೆಳವಣಿಗೆಗೆ ವಿಶೇಷ ಆಸಕ್ತಿ ವಹಿಸಬೇಕು ಎಂದರು.


ಈ ಸಂದರ್ಭದಲ್ಲಿ ನರ್ಸಿಂಗ್ ಕಾಲೇಜಿನ ಮಂಜುಳ, ಶ್ರೂಶ್ರೂಷಕ ಅಧೀಕ್ಷಕಿ ವೀಣಾ, ಆರೋಗ್ಯ ಶಿಕ್ಷಣಾಧಿಕಾರಿ ಶಾಂತಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net