

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆ ದುರ್ದೈವದ ಸಂಗತಿ. ಫಯಾಜ್ ಎಂಬಾತ ಅತ್ಯಂತ ಹೀನ ಕೆಲಸ ಮಾಡಿದ್ದಾನೆ. ಆತನಿಗೆ 90ದಿನದೊಳಗೆ ಕಠಿಣ ಶಿಕ್ಷೆಗೆ ಗುರಿ ಪಡಿಸಬೇಕು ಎಂದು ಹುಬ್ಬಳ್ಳಿ ಅಂಜುಮನ್ ಎ ಇಸ್ಲಾಂ ಸಂಸ್ಥೆಯ ಅಧ್ಯಕ್ಷ ಎ.ಎಂ. ಹಿಂಡಸಗೇರಿ ಆಗ್ರಹಿಸಿದರು.
ಹುಬ್ಬಳ್ಳಿಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಇದೊಂದು ವಿಶೇಷ ಪ್ರಕರಣವೆಂದು ಪರಿಗಣಿಸಿ ಫಾಸ್ಟ್ ಟ್ರ್ಯಾಕ್ ಕೋರ್ಟ್ಗೆ ವಹಿಸಬೇಕು. ಈ ಕುರಿತು ನಾವು ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಗೃಹ ಮತ್ತು ಕಾನೂನು ಸಚಿವರಿಗೆ ಮನವಿ ಸಲ್ಲಿಸುತ್ತೇವೆ ಎಂದರು.
ನೇಹಾ ನಮ್ಮ ಮಗಳು ಇದ್ದಂತೆ. ಅವರ ತಂದೆ ನಿರಂಜನ ಹಿರೇಮಠ ಅಂಜುಮನ್ ಸಂಸ್ಥೆಯ ನೆಹರು ಕಾಲೇಜ್ನಲ್ಲಿಯೇ ವ್ಯಾಸಂಗ ಮಾಡಿದ್ದಾರೆ. ನೆಹರು ಕಾಲೇಜ್ನಲ್ಲಿ ಇಂದು 7400 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಅದರಲ್ಲಿ ಹಿಂದೂಗಳು, ಅನ್ಯ ಧರ್ಮೀಯರು ಇದ್ದಾರೆ. ಘಟನೆಯ ಬಳಿಕ ಅಂಜುಮನ್ ಸಂಸ್ಥೆ ವತಿಯಿಂದ ಸಮಾಜದ ಮುತುವಲ್ಲಿ, ಮೌಲ್ವಿಗಳು ಮತ್ತು ಮುಖಂಡರು ಸಭೆ ಸೇರಿ ಹುಬ್ಬಳ್ಳಿ ಮತ್ತು ಧಾರವಾಡದ ಯಾವೊಬ್ಬ ಮುಸ್ಲಿಂ ವಕೀಲರು ಫಯಾಜ್ ಪರ ವಕಾಲತ್ತು ವಹಿಸಬಾರದೆಂದು ತಾಕೀತು ಮಾಡಿದ್ದೇವೆ ಎಂದು ತಿಳಿಸಿದರು.
ಈ ಪ್ರಕರಣದ ಹಿಂದೆ ಯಾರ್ಯಾರು ಭಾಗಿಯಾಗಿದ್ದರೆ, ಯಾರ್ಯಾರೂ ಕುಮ್ಮಕ್ಕು ನೀಡಿದ್ದಾರೆ, ಯಾರೂ ದಾರಿ ತಪ್ಪಿಸುವ ಕೆಲಸ ಮಾಡಿದ್ದಾರೆ ಅವರಿಗೆಲ್ಲ ಕಾನೂನು ಕ್ರಮವಾಗಬೇಕು. ಯಾರೂ ಈ ಪ್ರಕರಣದಲ್ಲಿ ರಾಜಕೀಯ ಮಾಡುವುದು ಬೇಡ. ಇದು ಮನುಷ್ಯತ್ವ ಪ್ರಶ್ನೆ ಎಂದು ಹೇಳಿದರು.
ನೇಹಾಳ ಮನೆಗೆ ಭೇಟಿ
ಧರ್ಮಗುರು ಸೈಯದ್ ತಾಜುದ್ದಿನ್ ಖಾದ್ರಿ, ಮೌಲಾನಾ ಜಹೀರುದ್ದಿನ್ ನೇತೃತ್ವದಲ್ಲಿ ಅಂಜುಮನ್ ಸಂಸ್ಥೆಯ ಪದಾಧಿಕಾರಿಗಳು ಬಿಡನಾಳದಲ್ಲಿರುವ ಮೃತ ನೇಹಾಳ ಮನೆಗೆ ಭೇಟಿ ನೀಡಿ ತಂದೆ ನಿರಂಜನ ಹಿರೇಮಠ ಹಾಗೂ ಕುಟುಂಬದವರಿಗೆ ಸಾಂತ್ವನ ಹೇಳಿದರು.
ನನ್ನ ಸಾರಿಗೆ ಉದ್ಯಮದಲ್ಲಿ ಶೇ. 90 ರಷ್ಟು ಜನ ಮುಸ್ಲಿಮರು ಇದ್ದು, ನಾವು ಅನ್ಯೋನ್ಯವಾಗಿದ್ದೇವೆ. ನನ್ನ ಮಗಳ ಹತ್ಯೆ ಹಿಂದೆ ದೊಡ್ಡ ಶಕ್ತಿ ಕೆಲಸ ಮಾಡಿದೆ. ನನಗೆ ನ್ಯಾಯ ಸಿಗುವವರೆಗೂ ನೀವು (ಮುಸ್ಲಿಂರು) ನನ್ನ ಜತೆ ಇರಬೇಕು ಎಂದು ನಿರಂಜನ ಹಿರೇಮಠ ಮನವಿ ಮಾಡಿದರು.
ಅಂಜುಮನ್ ಸಂಸ್ಥೆಯ ಪದಾಧಿಕಾರಿಗಳಾದ ಬಶೀರ ಅಹ್ಮದ್, ದಾದಾಹಯಾತ್ ಖೈರಾತಿ, ಶಿರಾಜ ಅಹ್ಮದ್ ಕುಡಚಿವಾಲೆ, ಇತರರು ಇದ್ದರು.