ಮಕ್ಕಳಿಗೆ ಶಿಕ್ಷಣ, ಸಂಸ್ಕಾರ ಕೊಡಿಸಿ

gangamma trust
Published on

ಹುಬ್ಬಳ್ಳಿ: ಆಧುನಿಕ ಕಾಲದ ಸವಾಲುಗಳನ್ನು ಎದುರಿಸಲು ಪಾಲಕರು, ಮಕ್ಕಳಿಗೆ ಉನ್ನತ ಶಿಕ್ಷಣದ ಜತೆ ಒಳ್ಳೆಯ ಸಂಸ್ಕಾರಗಳನ್ನು ಕೊಡಿಸಬೇಕು ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.

ಶ್ರೀಮತಿ ಗಂಗಮ್ಮ ಸೋಮಪ್ಪ ಬೊಮ್ಮಾಯಿ ಟ್ರಸ್ಟ್ ವತಿಯಿಂದ ಹುಬ್ಬಳ್ಳಿಯ ಶ್ರೀನಿವಾಸ ಗಾರ್ಡನ್​ನಲ್ಲಿ ಗುರುವಾರ ಆಯೋಜಿಸಿದ್ದ ಪ್ರಶಸ್ತಿ ಪ್ರದಾನ ಹಾಗೂ ಗ್ರಂಥ ಲೋಕಾರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಜಗತ್ತಿನಲ್ಲಿ ತಾಯಿಯ ಋಣವನ್ನು ತೀರಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದರು.

ಅಧ್ಯಕ್ಷತೆ ವಹಿಸಿದ್ದ ಮಾಜಿ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ಜೀವಸೆಲೆಯ ಮೊದಲ ಅನುಭವ ಬರುವುದು ತಾಯಿಯಿಂದ. ಯಾವುದೇ ದೇಶ, ಧರ್ಮವಿರಲಿ ತಾಯಿಯ ಪಾತ್ರ ಹಿರಿದಾದುದು. ತಾಯಿ ಗಂಗಮ್ಮ ಭಾವನಾತ್ಮಕ ಜೀವಿಯಾಗಿದ್ದರು. ತತ್ವ, ಆದರ್ಶ ಇಟ್ಟುಕೊಂಡು ಬದುಕು ನಡೆಸಿದ್ದರು. ಯಾವುದರಲ್ಲಿ ನಂಬಿಕೆ ಇಟ್ಟಿದ್ದರೂ ಅದರಂತೆ ನಡೆದುಕೊಂಡಿದ್ದರು. ಅವರು ದೊಡ್ಡ ದೇಶ ಭಕ್ತೆಯಾಗಿದ್ದರು. ಗುರುವಿನ ಮೇಲೆ ಅಪಾರ ಶ್ರದ್ಧೆ ಇತ್ತು ಎಂದು ತಾಯಿಯನ್ನು ಸ್ಮರಿಸಿದರು.

ಶಾಸಕರಾದ ಅರವಿಂದ ಬೆಲ್ಲದ, ಮಹೇಶ ಟೆಂಗಿನಕಾಯಿ, ಎಂ.ಆರ್. ಪಾಟೀಲ, ಎಂಎಲ್​ಸಿ ಎಸ್.ವಿ. ಸಂಕನೂರ, ಮಾಜಿ ಸಂಸದ ಐ.ಜಿ. ಸನದಿ, ಟ್ರಸ್ಟ್ ಉಪಾಧ್ಯಕ್ಷ ಮಲ್ಲಿಕಾರ್ಜುನ ಬೊಮ್ಮಾಯಿ ಇದ್ದರು. ಸಾಮಾನ್ಯರ ಅಸಾಮಾನ್ಯ ಅವ್ವ ಗ್ರಂಥ ಲೋಕಾರ್ಪಣೆ ಮಾಡಲಾಯಿತು. ಗ್ರಂಥದ ಸಂಪಾದಕ ಚಂದ್ರಶೇಖರ ವಸ್ತ್ರದ ಹಾಗೂ ಪ್ರಾಚಾರ್ಯ ರಮೇಶ ಕಲ್ಲನಗೌಡರ ಕೃತಿ ಕುರಿತು ಮಾತನಾಡಿದರು.

ಲೇಖಕಿ ಹೇಮಲತಾ ಪಟ್ಟಣಶೆಟ್ಟಿ ಅವರ ಅಕ್ಕರದ ಸುಯಿಧಾನ ಕೃತಿಗೆ ಅಕ್ಕ ಪ್ರಶಸ್ತಿ, ಬಾಲಪ್ರತಿಭೆ ನೇಹಾ ರಾಮಾಪುರ ಅವಳ ಮ್ಯಾಜಿಕ್ ಪೆನ್ಸಿಲ್ ಕೃತಿಗೆ ಅರಳು ಮೊಗ್ಗು ಪ್ರಶಸ್ತಿ ಹಾಗೂ ಹೊರೆಯಾಲ ದೊರೆಸ್ವಾಮಿ ಅವರ ಜಾನಪದ ನಡೆನುಡಿ ಕೃತಿಗೆ ಜಾನಪದ ಸಿರಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಹುಬ್ಬಳ್ಳಿ ಗೋಕುಲ ರಸ್ತೆಯ ಎಸ್.ಆರ್. ಬೊಮ್ಮಾಯಿ ಸರ್ಕಾರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಪ್ರಾರ್ಥನೆ ಹಾಡಿದರು. ಭರತ ಬೊಮ್ಮಾಯಿ ಸ್ವಾಗತಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net