

ಕುಶಾಲನಗರ: ವಿದ್ಯಾರ್ಥಿಗಳು ವ್ಯಾಸಂಗಕ್ಕೆ ನೀಡುವಷ್ಟೇ ಆದ್ಯತೆಯನ್ನು ಕ್ರೀಡೆಗೂ ನೀಡಬೇಕು ಎಂದು ಎಚ್.ಡಿ. ಕೋಟೆಯ ಸಂತ ಮೇರಿ ವಿದ್ಯಾಸಂಸ್ಥೆಯ ಮುಖ್ಯಶಿಕ್ಷಕ ಅಂಥೋಣಿ ಪ್ರಭುರಾಜ್ ಹೇಳಿದರು.
ಕುಶಾಲನಗರದ ವಿವೇಕಾನಂದ ಪಿಯು ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ಕಾಲೇಜು ವಿದ್ಯಾರ್ಥಿಗಳ ಕ್ರೀಡೋತ್ಸವ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ತಮ್ಮಲ್ಲಿನ ಪ್ರತಿಭೆ ಪ್ರದರ್ಶಿಸಿ ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ರೂಪುಗೊಳ್ಳಬೇಕು. ಯಾವುದೇ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳುವ ವಿದ್ಯಾರ್ಥಿಗಳಿಗೆ ಕೀಳರಿಮೆ, ಅಸಹನೆ, ಅತೃಪ್ತಿ ಇರಬಾರದು. ಕ್ರೀಡೆ ವಿದ್ಯಾರ್ಥಿಗಳಲ್ಲಿ ದೈಹಿಕ ಸಾಮರ್ಥ್ಯ ಹಾಗೂ ಆತ್ಮಸ್ಥೈರ್ಯ ಹೆಚ್ಚಿಸುತ್ತದೆ. ವಿದ್ಯಾರ್ಥಿಗಳಿಗೆ ಮಹಾನ್ ಪುರುಷರ ಜೀವನ ಹಾಗೂ ಸಾಧನೆಗಳು ಆದರ್ಶವಾಗಬೇಕು ಎಂದರು.
ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಎನ್.ಎನ್.ಶಂಭುಲಿಂಗಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಾಲೇಜಿನಲ್ಲಿ ಮಕ್ಕಳ ವ್ಯಾಸಂಗಕ್ಕೆ ನೀಡುವಷ್ಟೇ ಆದ್ಯತೆಯನ್ನು ಮಕ್ಕಳಲ್ಲಿ ಅಡಗಿರುವ ಪ್ರತಿಭೆ ಹೊರತರಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಕ್ರೀಡೆ ವಿದ್ಯಾರ್ಥಿಗಳಲ್ಲಿ ಶಿಸ್ತು, ಸನ್ನಡತೆ ಹಾಗೂ ಸಂಯಮ ಕಲಿಸುತ್ತದೆ ಎಂದರು.
ಕಣಿವೆ ರಾಮಲಿಂಗೇಶ್ವರ ದೇವಾಲಯ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ.ಎನ್.ಸುರೇಶ್ ಮತ್ತು ಪ್ರಭುರಾಜ್ ಅವರನ್ನು ಕ್ರೀಡಾ ಸಮಿತಿ ವತಿಯಿಂದ ಸನ್ಮಾನಿಸಲಾಯಿತು.
ಮಹಾತ್ಮ ಗಾಂಧಿ ಕಾಲೇಜಿನ ಪ್ರಾಂಶುಪಾಲೆ ಟಿ.ಎ.ಲಿಖಿತಾ, ವಿವೇಕಾನಂದ ಪಿಯು ಕಾಲೇಜಿನ ಪ್ರಾಂಶುಪಾಲೆ ಕ್ಲಾರಾ ರೇಷ್ಮಾ, ಕಚೇರಿ ಅಧೀಕ್ಷಕ ಎನ್.ಎನ್.ನಂಜಪ್ಪ, ಆಡಳಿತಾಧಿಕಾರಿ ಮಹೇಶ್ ಅಮೀನ್, ಉಪನ್ಯಾಸಕರಾದ ವಿಕ್ರಂ, ಚಂದ್ರಶೇಖರ್, ಉಪನ್ಯಾಸಕಿ ಮೇರಿ ಪ್ರಿಯಾ, ಕ್ರೀಡಾ ಶಿಕ್ಷಕ ದಿನೇಶ್, ಕಬಡ್ಡಿ ತೀರ್ಪುಗಾರ ಕಾರ್ತಿಕ್ ಇತರರು ಇದ್ದರು. ಬಳಿಕ ವಿದ್ಯಾರ್ಥಿಗಳಿಗೆ ವಿವಿಧ ಕ್ರೀಡಾ ಸ್ಪರ್ಧೆಗಳು ನಡೆದವು.