

ವಿಜಯವಾಣಿ ಸುದ್ದಿಜಾಲ ಧಾರವಾಡ
ಶಿಕ್ಷಣ ಇಂದು ವ್ಯಾಪಾರಿಕರಣವಾಗುತ್ತಿದೆ. ಅಧಿಕ ಶುಲ್ಕ ಭರಿಸಿ ಆಂಗ್ಲ ಮಾಧ್ಯಮ ಶಾಲೆಗೆ ಮಕ್ಕಳನ್ನು ಕಳುಹಿಸುವುದು ವಿಷಾದನೀಯ. ಪಾಲಕರು ಶಿಕ್ಷಣದ ಗುಣಮಟ್ಟ ಉತ್ತಮವಿರುವ ಶಾಲೆಗೆ ಮಕ್ಕಳನ್ನು ಸೇರಿಸಬೇಕು ಎಂದು ವಿಶ್ರಾಂತ ಪ್ರಾಚಾರ್ಯ ಸುರೇಶ್ ಚೊಳಕೆ ಅಭಿಪ್ರಾಯಪಟ್ಟರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘವು ಪ್ರೊ. ಎಸ್.ಎಸ್. ದೇಸಾಯಿ ದತ್ತಿ ನಿಮಿತ್ತ ಏರ್ಪಡಿಸಿದ್ದ ಶಿಣವೇತ್ತರು ಪ್ರಶಸ್ತಿ ಪ್ರದಾನ ಹಾಗೂ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಆಂಗ್ಲ ಭಾಷೆಯಲ್ಲಿ ಕಲಿತರೆ ಮಾತ್ರ ಮಕ್ಕಳಿಗೆ ಉಜ್ವಲ ಭವಿಷ್ಯ ಎಂಬ ಭ್ರಮೆಯಿಂದ ಪಾಲಕರು ಹೊರಬರಬೇಕು. ಗುಣಾತ್ಮಕ ಶಿಕ್ಷಣ ನೀಡುವ ಸಂಸ್ಥೆಗಳಲ್ಲಿ ಶಿಕ್ಷಣ ಕೊಡಿಸಲು ಪಾಲಕರು ಪ್ರಯತ್ನಿಸಬೇಕು. ತ್ರಿಭಾಷಾ ಸೂತ್ರದಡಿ ಮಕ್ಕಳಿಗೆ ಮೊದಲ ಆದ್ಯತೆ ಮಾತೃಭಾಷೆಯಲ್ಲಿ ಶಿಕ್ಷಣ ನೀಡಬೇಕು. ಆಂಗ್ಲ ಭಾಷೆ ದ್ವೀತಿಯ ಭಾಷೆಯನ್ನಾಗಿ ಕೊಡಿಸಬಹುದು. ಮಾತೃ ಭಾಷೆ ಹೃದಯದ ಭಾಷೆಯಾಗಿದ್ದು, ಮಕ್ಕಳನ್ನು ಸಂಸ್ಕಾರಯುತರನ್ನಾಗಿ ಮಾಡುತ್ತದೆ ಎಂದರು.
ಡಾ. ಬಸು ಬೇವಿನಗಿಡದ ಹಾಗೂ ಪ್ರೊ. ಅರವಿಂದ ಕಾಂಚ್ಯಾಣಿ ಅವರಿಗೆ ಶಿಣವೇತ್ತರು ಪ್ರಶಸ್ತಿ ಪ್ರದಾನ ಮಾಡಲಾಯಿತು. ಡಾ. ಸಿ.ಆರ್. ಯರವಿನತೆಲಿಮಠ ಅಧ್ಯಕ್ಷತೆ ವಹಿಸಿದ್ದರು. ದತ್ತಿ ದಾನಿ ಪರ ಸರೋಜಿನಿ ಪಾಟೀಲ ಪ್ರೊ. ಎಸ್. ಎಸ್. ದೇಸಾಯಿ ಅವರ ಸಾಧನೆ ಕುರಿತು ಸ್ಮರಿಸಿದರು.
ಬಸವಪ್ರಭು ಹೊಸಕೇರಿ, ಸತೀಶ ತುರಮರಿ, ಶಂಕರ ಕುಂಬಿ, ಡಾ. ಮಲ್ಲಿಕಾರ್ಜುನ ಪಾಟೀಲ, ಶಾಂತವೀರ ಬೇಟಗೇರಿ, ಡಾ. ಚಂದ್ರಶೇಖರ ರೊಟ್ಟಿಗವಾಡ, ಎಸ್.ಜಿ. ಪಾಟೀಲ, ಕೆ.ಜಿ. ದೇವರಮನಿ, ಎಸ್. ಎಂ. ದಾನಪ್ಪಗೌಡರ, ಮಹಾಂತೇಶ ನರೇಗಲ್, ಇತರರು ಇದ್ದರು.
ವೀರಣ್ಣ ಒಡ್ಡೀನ ಸ್ವಾಗತಿಸಿದರು. ಶಂಕರ ಹಲಗತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಮಹೇಶ ಹೊರಕೇರಿ ನಿರೂಪಿಸಿದರು. ಡಾ. ಧನವಂತ ಹಾಜವಗೋಳ ವಂದಿಸಿದರು.