

ವಿಜಯಪುರ: ವಿವಿಧ ಸಭೆ-ಸಮಾರಂಭಗಳಲ್ಲಿ ಅನಗತ್ಯ ಹಾರ-ತುರಾಯಿಗೆ ಹಣ ಖರ್ಚು ಮಾಡದೇ ಅದರ ಬದಲಿಗೆ ಬಡ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಲು ನೋಟ್‌ಬುಕ್ ವಿತರಣೆ ಮಾಡುವ ಪದ್ಧತಿ ರೂಢಿಸಿಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ.ಪಾಟೀಲ ಅಭಿಪ್ರಾಯಿಸಿದರು.
ಬುಧವಾರ ತಿಕೋಟಾ ತಾಲೂಕು ಸೌಧದಲ್ಲಿನ ಉಪನೋಂದಣಾಧಿಕಾರಿ ಕಚೇರಿ ಕಾರ್ಯಾರಂಭ ಹಾಗೂ ವಿದ್ಯುತ್ ಪರಿವರ್ತಕ ದುರಸ್ತಿ ಕೇಂದ್ರ ವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶಾಲೆಗಳ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ಕ್ರಮ ವಹಿಸುವೆ. ಶಿಕ್ಷಣಕ್ಕೆ ಒತ್ತು ನೀಡಿ ಶೈಕ್ಷಣಿಕ ಪ್ರಗತಿಯಲ್ಲಿ ವಿಜಯಪುರ ಜಿಲ್ಲೆ ರಾಜ್ಯದಲ್ಲಿಯೇ ಮಾದರಿ ಜಿಲ್ಲೆಯನ್ನಾಗಿ ರೂಪಿಸುವ ನಿಟ್ಟಿನಲ್ಲಿ ಶ್ರಮಿಸುವೆ. ಸಿಎಸ್‌ಆರ್ ಅನುದಾನದಡಿ ಜಿಲ್ಲೆಯ ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ಕ್ರಮ ವಹಿಸಲಾಗುವುದು. ಸ್ಮಾರ್ಟ್ ಕ್ಲಾಸ್ ಆರಂಭಿಸುವ ಕುರಿತಂತೆ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ಸಮೀಕ್ಷೆ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸಲಾಗಿದ್ದು, ಸಿಎಸ್‌ಆರ್ ಅನುದಾನದಡಿ ಶಾಲಾ ಕಟ್ಟಡಗಳ ದುರಸ್ಥಿ, ಸುಸಜ್ಜಿತ ಗ್ರಂಥಾಲಯಗಳ ನಿರ್ಮಾಣ, ಸ್ಮಾರ್ಟ್ ಕ್ಲಾಸ್ ಸೇರಿದಂತೆ ಅಗತ್ಯ ಮೂಲ ಸೌಲಭ್ಯಗಳನ್ನು ಒದಗಿಸಲಾಗುವುದು. ಪ್ರಥಮ ಹಂತದಲ್ಲಿ ಬಬಲೇಶ್ವರ ಹಾಗೂ ತಿಕೋಟಾದಲ್ಲಿ ಒದಗಿಸಲಾಗಿದ್ದು, ಮುಂಬರುವ ಒಂದು ವರ್ಷದೊಳಗೆ ಜಿಲ್ಲೆಯಾದ್ಯಂತ ಇರುವ ಶಾಲೆಗಳಿಗೆ ಈ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.
ತಿಕೋಟಾ ಭಾಗದಲ್ಲಿ ವಿದ್ಯುತ್ ಪರಿವರ್ತಕ ದುರಸ್ತಿ ಕೇಂದ್ರ ಸ್ಥಾಪನೆಯಿಂದ ಈ ಭಾಗದ ರೈತರಿಗೆ ಅನುಕೂಲವಾಗಿದೆ. ರೈತರು ತಮ್ಮ ಹೊಲದಲ್ಲಿನ ವಿದ್ಯುತ್ ಪರಿವರ್ತಕಗಳ ದುರಸ್ತಿಗೆ ಜಿಲ್ಲಾ ಕೇಂದ್ರ ವಿಜಯಪುರಕ್ಕೆ ಹೋಗಿ ದುರಸ್ತಿ ಮಾಡಿಕೊಳ್ಳುವುದರಿಂದ ಅನಾವಶ್ಯಕವಾಗಿ ಸಮಯ ವ್ಯರ್ಥವಾಗುತ್ತಿತ್ತು. ಈ ಭಾಗದಲ್ಲಿ ದುರಸ್ತಿ ಕೇಂದ್ರ ಆರಂಭವಾಗಿರುವುದರಿಂದ ರೈತರ ಸಮಯವೂ ಉಳಿತಾಯವಾಗಿ ಶೀಘ್ರದಲ್ಲಿ ಸಮಸ್ಯೆಗಳಿಗೆ ಪರಿಹಾರ ದೊರೆತು ರೈತರಿಗೆ ಅನುಕೂಲವಾಗಲಿದೆ ಎಂದು ಸಚಿವ ಎಂ.ಬಿ. ಪಾಟೀಲ ಹೇಳಿದರು.
ಈಗಾಗಲೇ ನೀರಾವರಿಗೆ ಆದ್ಯತೆ ನೀಡಲಾಗಿದೆ. ನೀರಾವರಿಗೆ ನೀಡಿದ ಆದ್ಯತೆಯನ್ನು ಈ ಭಾಗದಲ್ಲಿ ವಿದ್ಯತ್ ಪೂರೈಕೆಗೆ ನೀಡಲಾಗುತ್ತಿದೆ. ವಿದ್ಯುತ್ ಪೂರೈಕೆ ಮುಖ್ಯವಾಗಿರುವುದರಿಂದ ವಿಶೇಷ ಕಾಳಜಿ ವಹಿಸಿ, ನೀರಿನೊಂದಿಗೆ ವಿದ್ಯುತ್ ಒದಗಿಸುವ ಮೂಲಕ ರೈತರ ಬಾಳು ಹಸನಾಗಿಸಲು ಪ್ರಯತ್ನಿಸಲಾಗಿದೆ. 2013-2018ರ ಅವಧಿಯಲ್ಲಿ ನೀರಾವರಿಗಾಗಿ 3600 ಕೋಟಿ ರೂ. ವೆಚ್ಚ ಮಾಡಿ ನೀರಾವರಿ ಸೌಲಭ್ಯ ಕಲ್ಪಿಸಲಾಗಿದೆ. ಈ ಅವಧಿಯಲ್ಲಿ ಉಸ್ತುವಾರಿ ಸಚಿವನಾಗಿ ನನ್ನ ಜವಾಬ್ದಾರಿಯನ್ನರಿತು ರೈತರು ಸಾರ್ವಜನಿಕರ ಎಲ್ಲ ರೀತಿಯ ಸೌಲಭ್ಯ ಕಲ್ಪಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುತ್ತಿದೆ ಎಂದು ಹೇಳಿದರು.
ತಿಕೋಟಾ ಮತ್ತು ಬಬಲೇಶ್ವರದಲ್ಲಿ ಮಿನಿ ವಿಧಾನಸೌಧ ನಿರ್ಮಾಣ ಮಾಡಲಾಗಿದೆ. ಒಂದೇ ತಾಲೂಕಿನಲ್ಲಿ ಎರಡು ಮಿನಿ ವಿಧಾನಸೌಧ ನಿರ್ಮಾಣ ಮಾಡಿರುವ ರಾಜ್ಯದಲ್ಲಿಯೇ ಪ್ರಥಮವಾಗಿದೆ. ಇದೀಗ ವಿಜಯಪುರ ಜಿಲ್ಲೆಯಲ್ಲಿಯೇ ತಾಲೂಕಾ ಮಟ್ಟದಲ್ಲಿ ಪ್ರಪ್ರಥಮವಾಗಿ ಉಪನೋಂದಣಾಧಿಕಾರಿ ಕಚೇರಿ ಕಾರ್ಯಾರಂಭಗೊಳಿಸಿದ್ದು, ಇದರಿಂದ ರೈತರ ಆಸ್ತಿ ಖರೀದಿ, ಆಸ್ತಿ ನೋಂದಣಿಗೆ ಅನುಕೂಲವಾಗಿ ಜಿಲ್ಲಾ ಕೇಂದ್ರಕ್ಕೆ ಹೋಗುವುದನ್ನು ತಪ್ಪಿಸಿ ರೈತರ ವಿವಿಧ ಕೆಲಸ ಕಾರ್ಯಗಳು ತಾಲೂಕಾ ಕೇಂದ್ರದಲ್ಲಿಯೇ ಆಗುವುದರಿಂದ ಜಿಲ್ಲಾ ಕೇಂದ್ರಕ್ಕೆ ಹೋಗುವ ಸಮಯ ಉಳಿತಾಯವಾಗಿ ಅನುಕೂಲವಾಗಲಿದೆ. ಮುಂಬರುವ ದಿನಗಳಲ್ಲಿ ಭೂದಾಖಲೆಗಳ ಕಚೇರಿಗಳನ್ನು ಸಹ ಕಾರ್ಯಾರಂಭ ಮಾಡಿ ಅನುಕೂಲ ಕಲ್ಪಿಸಲಾಗುವುದು ಎಂದರು.
ತಿಕೋಟಾ ಕೆರೆ ಅಭಿವೃದ್ಧಿಪಡಿಸಿ ಸಾರ್ವಜನಿಕರ ಅನುಕೂಲಕ್ಕಾಗಿ ಕೆರೆ ಆವರಣದಲ್ಲಿ ವಾಕಿಂಗ್ ಟ್ರ್ಯಾಕ್ ನಿರ್ಮಾಣ ಮಾಡಿ ಅನುಕೂಲ ಕಲ್ಪಿಸಲಾಗುವುದು. ನಮ್ಮ ಸರ್ಕಾರ ನುಡಿದಂತೆ ನಡೆದ ಸರ್ಕಾರ. ಸರ್ಕಾರ ಜಾರಿಗೊಳಿಸಿರುವ 5 ಗ್ಯಾರಂಟಿಗಳು ಜನರ ಜೀವನ ಮಟ್ಟ ಸುಧಾರಣೆಗೆ ಸಹಕಾರಿಯಾಗಿವೆ ಎಂದು ಹೇಳಿದರು.
ತಿಕೋಟಾ ಮಾದರಿ ಪ್ರಾಥಮಿಕ ಶಾಲೆ, ಕೆಜಿಎಸ್ ಮತ್ತು ಎಲ್‌ಪಿಎಸ್ ಶಾಲೆ ವಿದ್ಯಾರ್ಥಿಗಳಿಗೆ ಸಾಂಕೇತಿಕವಾಗಿ ನೋಟಬುಕ್ ವಿತರಣೆ ಮಾಡಲಾಯಿತು. ಉಪನೋಂದಣಾಧಿಕಾರಿ ಕಚೇರಿಯಲ್ಲಿ ಆಸ್ತಿ ನೋಂದಣಿ ಮಾಡಿಕೊಂಡವರಿಗೆ ನೋಂದಣಿ ಪತ್ರ ವಿತರಿಸುವ ಮೂಲಕ ಚಾಲನೆ ನೀಡಲಾಯಿತು.
ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ, ತಿಕೋಟಾ ತಹಸೀಲ್ದಾರ್ ಪ್ರಶಾಂತ ಚನಗೊಂಡ, ಜಿಲ್ಲಾ ನೋಂದಣಾಧಿಕಾರಿ ದ್ರಾಕ್ಷಾಯಿಣಿ ಮಠ, ಹೆಸ್ಕಾಂ ಅಧೀಕ್ಷಕ ಅಭಿಯಂತರ ಸಿದ್ಧಪ್ಪ ಬಿಂಜಗೇರಿ, ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಮೋದಿನಿ, ತಿಕೋಟಾ ಉಪ ನೋಂದಣಾಧಿಕಾರಿ ಸುಷ್ಮಾ ಬಡಿಗೇರ, ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಗೋವಿಂದ ದೇಶಮುಖ ಮತ್ತಿತರರಿದ್ದರು.