

ವಿಜಯವಾಣಿ ಸುದ್ದಿಜಾಲ ಧಾರವಾಡ
ರಸ್ತೆ ಸಂಚಾರ ಮಾಡುವ ವಾಹನ ಸವಾರರಿಗೆ ಸುರಕ್ಷಿತ ಸಂಚಾರದ ಭರವಸೆ ಮೂಡಿಸುವುದು ಸಂಬಂಧಿಸಿದ ಇಲಾಖೆಗಳ ಕರ್ತವ್ಯ. ಸವೋರ್ಚ್ಚ ನ್ಯಾಯಾಲಯದ ಆದೇಶದಂತೆ ಜಿಲ್ಲೆಯಲ್ಲಿನ ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಗಳಲ್ಲಿನ ಅವೈಜ್ಞಾನಿಕ ಹಂಪ್ಸ್ ತೆಗೆದು ಹಾಕಬೇಕು. ಈ ಕುರಿತು ಜಿಲ್ಲೆಯಲ್ಲಿ ರಸ್ತೆ ಸಮೀಕ್ಷೆ ಮಾಡುವಂತೆ ಜಿಲ್ಲಾ ರಸ್ತೆ ಸುರಕ್ಪತಾ ಸಮಿತಿ ಅಧ್ಯಕ್ಷೆ, ಜಿಲ್ಲಾಧಿಕಾರಿ ದಿವ್ಯ ಪ್ರಭು ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಹಾಗೂ ಜಿಲ್ಲಾ ರಸ್ತೆ ಸಾರಿಗೆ ಸಮಿತಿ ಸಭೆಗಳ ಅಧ್ಯಕ್ಪತೆ ವಹಿಸಿ ಅವರು ಮಾತನಾಡಿದರು.
ರಸ್ತೆಗಳಲ್ಲಿ ಸಂಚಾರ ಮಾಡುವುದು ಕಷ್ಟ. ಅನುಮತಿ ಇಲ್ಲದೆ ಅನೇಕರು ರಸ್ತೆಗಳ ಮೇಲೆ ಹಂಪ್ಸ್ ಹಾಕುತ್ತಿದ್ದಾರೆ. ಮುನ್ಸೂಚನೆ ಇಲ್ಲದೆ ಹಂಪ್ಸ್ ಹಾಕುವುದರಿಂದ ಅಪಘಾತಗಳು ಹೆಚ್ಚಾಗಿವೆ. ಈ ಕುರಿತು ರಸ್ತೆ ಸಮೀಕ್ಷೆ ಮಾಡಿ, ಅನುಮತಿ ಇಲ್ಲದ ಹಂಪ್ಸ್ಗಳನ್ನು ತೆಗೆದು ಹಾಕಬೇಕು ಎಂದರು.
ಜನಸಂದಣಿ ಇರುವ ಮತ್ತು ಪ್ರಮುಖ ಸಂಚಾರ ನಿಲ್ದಾಣಗಳ ಸಮೀಪದಲ್ಲಿ ಮುಖ್ಯವಾಗಿ ಹುಬ್ಬಳ್ಳಿಯ 5 ಸ್ಥಳಗಳಲ್ಲಿ ಆಟೋ ನಿಲ್ದಾಣ ಸ್ಥಾಪನೆಗೆ ಸೂಚಿಸಲಾಗಿತ್ತು. ಕೆಲ ಕಡೆ ನಿರ್ಮಾಣ ಹಂತದಲ್ಲಿದ್ದು, ಶೀಘ್ರ ರ್ಪೂಣಗೊಳಿಸಬೇಕು. ಹು-ಧಾದಲ್ಲಿ ಅನಧಿಕೃತ ಆಟೋಗಳ ಓಡಾಟ ಹೆಚ್ಚಿದ್ದು, ಜನರಿಂದ ಹೆಚ್ಚುವರಿ ಹಣ ವಸೂಲು ಮಾಡುತ್ತಿದ್ದಾರೆ ಎಂದು ದೂರು ಬರುತ್ತಿವೆ. ಸಾರಿಗೆ ಹಾಗೂ ಪೊಲೀಸ್ ಅಧಿಕಾರಿಗಳು ಪರಿಶೀಲಿಸಿ ತುರ್ತು ಕ್ರಮವಹಿಸಬೇಕು. ಪರ್ಮಿಟ್ ಇಲ್ಲದೆ ಆಟೋ ಓಡಿಸುತ್ತಿದ್ದರೆ, ಅಂತಹ ವಾಹನ ಜಪ್ತಿ ಮಾಡಿ ಮಾಲೀಕ ಹಾಗೂ ಚಾಲಕನ ಮೇಲೆ ಕಾನೂನು ಕ್ರಮಕೈಗೊಳ್ಳಬೇಕು ಎಂದರು.
ಪ್ರಾದೇಶಿಕ ಸಾರಿಗೆ ಅಧಿಕಾರಿ ಕೆ. ದಾಮೋದರ ಮಾತನಾಡಿ, ವಿವಿಧ ಪ್ರಕರಣಗಳಲ್ಲಿ ದಂಡ ವಿಧಿಸಿದ ಮಾಹಿತಿ ನೀಡಿದರು. ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ಗೋಪಾಲ ಬ್ಯಾಕೋಡ, ಮಹಾನಗರ ಉಪ ಪೊಲೀಸ್ ಆಯುಕ್ತ ರವೀಶ ಸಿ.ಆರ್., ಸಂಚಾರ ನಿಯಮಗಳ ಮತ್ತು ಸಾರಿಗೆ ನಿಯಂತ್ರಣ, ರಸ್ತೆ ಅಭಿವೃದ್ಧಿ, ಸೇತುವೆ ಅಗಲೀಕರಣ ಮಾಹಿತಿ ನೀಡಿದರು.
ಪ್ರಾದೇಶಿಕ ಸಾರಿಗೆ ಅಧಿಕಾರಿ ಭೀಮನಗೌಡ ಪಾಟೀಲ, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರ ಪ್ರಶಾಂತ ಪಿ.ಕೆ., ಪರುಶರಾಮ ರಾಠೋಡ, ಸಾರಿಗೆ ಸಂಸ್ಥೆ ವಿಭಾಗೀಯ ನಿಯಂತ್ರಣಾಧಿಕಾರಿಗಳು, ಮಹಾನಗರಪಾಲಿಕೆ, ಸ್ಮಾರ್ಟ್ ಸಿಟಿ, ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ, ಅಬಕಾರಿ, ಅಳತೆ ಮತ್ತು ತೂಕ ಮಾಪನ ಇಲಾಖೆ ಸೇರಿ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.