ಕನ್ನಡಕ್ಕೆ ಪ್ರಥಮಾದ್ಯತೆ ಕೊಡಿ

25sdp3 KANNADA
Published on

ಸಿದ್ದಾಪುರ: ಕನ್ನಡದ ಹಿರಿಮೆ ಎತ್ತಿ ಹಿಡಿಯುವುದು ಕನ್ನಡಿಗರಾದ ನಮ್ಮೆಲ್ಲರ ಕರ್ತವ್ಯವಾಗಿದೆ. ಕನ್ನಡ ನೆಲ ಹಾಗೂ ಜಲ ರಕ್ಷಿಸಬೇಕಾದ ಜವಾಬ್ದಾರಿಯೂ ಎಲ್ಲರದಾಗಿದೆ. ಅನ್ಯ ಭಾಷೆಗಳನ್ನು ಗೌರವಿಸುವುದರೊಂದಿಗೆ ಕನ್ನಡಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದರು.

ಪಟ್ಟಣದ ಪ್ರಶಾಂತಿ ವಿದ್ಯಾಕೇಂದ್ರದ ಸಭಾಭವನದಲ್ಲಿ ಜಿಲ್ಲಾ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ 2023-24ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕನ್ನಡ ಭಾಷಾ ವಿಷಯದಲ್ಲಿ ಶೇ. 100ಕ್ಕೆ ನೂರು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ, ಶೇ. 100ಫಲಿತಾಂಶ ನೀಡಿದ ಕನ್ನಡ ಶಿಕ್ಷಕರು ಹಾಗೂ ತಾಲೂಕಿನ ರ್ಯಾಂಕ್ ವಿಜೇತರಿಗೆ ಮಂಗಳವಾರ ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್. ವಾಸರೆ ಮಾತನಾಡಿ, ಶೋಕಿಗಾಗಿ ಅನ್ಯ ಭಾಷೆ ಮಾತನಾಡುವುದು ಸರಿಯಲ್ಲ. ಭಾಷೆ ಸತ್ತರೆ ಸಂಸ್ಕೃತಿ ಹಾಗೂ ಸಮುದಾಯ ಸಾಯುತ್ತದೆ. ನಾವು ಕನ್ನಡದ ಪ್ರೀತಿಯನ್ನು ಹಂಚಲು ಹೊರಟಿದ್ದೇವೆ. ನಮ್ಮೊಳಗಿರುವ ಭಾಷೆಯ ಕೀಳರಿಮೆ ಹೊಡೆದು ಹಾಕಬೇಕು ಎಂದರು.

ಬಿಇಒ ಎಂ.ಎಚ್. ನಾಯ್ಕ, ಚೈತನ್ಯಕುಮಾರ ಕೆ.ಎಂ., ಸತೀಶ ಹೆಗಡೆ, ಜಿ.ಜಿ. ಹೆಗಡೆ ಬಾಳಗೋಡ, ತಮ್ಮಣ್ಣ ಬೀಗಾರ, ಪಿ.ಬಿ. ಹೊಸೂರು, ಚಂದಸ್ರಶೇಖರ ಕುಂಬ್ರಿಗದ್ದೆ, ಅಣ್ಣಪ್ಪ ಶಿರಳಗಿ, ಪ್ರಶಾಂತ ಶೇಟ್, ಟಿ.ಕೆ.ಎಂ. ಆಜಾದ್, ದಿನೇಶ ಶೆಟ್ಟಿ, ಇತರರಿದ್ದರು.

ಇದೇ ಸಂದರ್ಭದಲ್ಲಿ ಸರ್ಕಾರಿ ಪ್ರೌಢಶಾಲೆಯಲ್ಲಿ ಓದಿ ಎಸ್ಸೆಸ್ಸೆಲ್ಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆಯಿಂದ ಉಚಿತವಾಗಿ ನೀಡಲಾಗುವ ಲ್ಯಾಪ್​ಟ್ಯಾಪ್ ಹಾಗೂ ಬ್ಯಾಗಗಳನ್ನು ವಿತರಿಸಲಾಯಿತು.

ರತ್ನಾಕರ ನಾಯ್ಕ ಸ್ವಾಗತಿಸಿದರು. ಕಸಾಪ ತಾಲೂಕಾಧ್ಯಕ್ಷ ಗೋಪಾಲ ನಾಯ್ಕ ಭಾಶಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಶಾಂತ ಹಾಗೂ ಸುಧಾರಾಣಿ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net