ಕುಡಿಯುವ ನೀರು ಪೂರೈಕೆಗೆ ಆದ್ಯತೆ ನೀಡಿ; ಉಜ್ವಲ್‌ಕುಮಾರ ಘೋಷ್ ಸೂಚನೆ

UJWAJALAKUMAR MEETING
ವಿಜಯಪುರ ನಗರದ ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಉಜ್ವಲ್‌ಕುಮಾರ ಘೋಷ್ ಪ್ರಗತಿ ಪರಿಶೀಲನೆ ಸಭೆ ನಡೆಸಿದರು. ಸಿಇಒ ರಿಷಿ ಆನಂದ ಇದ್ದಾರೆ.
Published on

ವಿಜಯಪುರ: ಬೇಸಿಗೆ ಹಿನ್ನೆಲೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕೆಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಉಜ್ವಲ್‌ಕುಮಾರ ಘೋಷ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮಹಾನಗರ ಪಾಲಿಕೆ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಕ್ರೀಯಾ ಯೋಜನೆ ಪರಿಶೀಲನೆ ಹಾಗೂ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಬೇಸಿಗೆ ಸಂದರ್ಭದಲ್ಲಿ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಂಡು ಸಮರ್ಪಕವಾಗಿ ಕುಡಿಯುವ ನೀರು ಪೂರೈಸಲು ಕ್ರಮ ವಹಿಸಬೇಕು. ನಗರ ಪ್ರದೇಶದ ಎಲ್ಲ ವಾರ್ಡ್‌ಗಳಿಗೆ ಕುಡಿಯುವ ನೀರು ಪೂರೈಸಬೇಕು. ನೀರು ಪೂರೈಕೆಗೆ ತಾಂತ್ರಿಕ ಸಮಸ್ಯೆ ಎದುರಾದ ಸಂದರ್ಭಗಳಲ್ಲಿ ತ್ವರಿತವಾಗಿ ಸಮಸ್ಯೆಗಳನ್ನು ಇರ್ತರ್ಥಪಡಿಸಿಕೊಂಡು ಸಕಾಲದಲ್ಲಿ ಕುಡಿಯುವ ನೀರು ಪೂರೈಸಲು ಕ್ರಮ ವಹಿಸುಂತೆ ಅವರು ಸೂಚಿಸಿದರು.

ಜನರ ಸಮಸ್ಯೆ ಅರಿತುಕೊಳ್ಳಬೇಕು. ಕುಡಿಯುವ ನೀರಿನ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು. ಸ್ಥಳೀಯ ಸಂಸ್ಥೆಗಳಾದ ಪುರಸಭೆ ಮತ್ತು ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಕುಡಿಯುವ ನೀರು ಪೂರೈಕೆಗೆ ಸಮಸ್ಯೆ ಎದುರಾದಲ್ಲಿ ನಿಮ್ಮ ಹಂತದಲ್ಲಿಯೇ ತ್ವರಿತವಾಗಿ ಪರಿಹರಿಸಿಕೊಂಡು ನೀರು ಪೂರೈಕೆಗೆ ಕ್ರಮ ವಹಿಸಬೇಕು. ಶುದ್ಧ ಕುಡಿಯುವ ನೀರು ಪೂರೈಕೆ ಮಾಡಬೇಕು. ಯಾವುದೇ ಕಲುಷಿತ ನೀರು ಪೂರೈಕೆಯಾಗದಂತೆ ಮುನ್ನೆಚರಿಕೆ ವಹಿಸುವಂತೆ ಅವರು ಸೂಚನೆ ನೀಡಿದರು.

ಬಹುಹಳ್ಳಿ ಕುಡಿಯುವ ನೀರಿನ ಯೋಜನೆ

ಬಹುಹಳ್ಳಿ ಕುಡಿಯುವ ನೀರಿನ ಯೋಜನೆಯಡಿ ಸಾಕಷ್ಟು ಪ್ರಮಾಣದಲ್ಲಿ ನೀರು ಕೆರೆಗಳಿಗೆ ತುಂಬಿಸಲು ಸರ್ಕಾರ ಕ್ರಮ ವಹಿಸಿದೆ. ನಾರಾಯಣಪುರ ಎಡದಂಡೆ ಕಾಲುವೆ ಮೂಲಕ ಇಂಡಿ, ಸಿಂದಗಿ ಹಾಗೂ ಚಡಚಣ ಭಾಗದಲ್ಲಿನ ಬಹುಹಳ್ಳಿ ಕುಡಿಯುವ ನೀರಿನ ಕೆರೆಗೆಳಿಗೆ 1.5 ಟಿಎಂಸಿ ನೀರು ಕುಡಿಯುವ ನೀರಿನ ಸಂಗ್ರಹಣೆಗೆ ಬಿಡುಗಡೆ ಮಾಡಲಾಗುತ್ತಿದೆ. ನೀರನ್ನು ಸಂಗ್ರಹಿಸಿಟ್ಟುಕೊಂಡು, ಸದ್ಭಳಕೆ ಮಾಡಿಕೊಂಡು, ಜೂನ್ ಅಂತ್ಯದವರೆಗೆ ಯಾವುದೇ ರೀತಿ ಸಮಸ್ಯೆಯಾಗದಂತೆ ನೋಡಿಕೊಳ್ಳುವಂತೆ ಅವರು ಸೂಚಿಸಿದರು.

ಯಾವುದೇ ಸರ್ಕಾರಿ ಕಾಮಗಾರಿಗಳಿಗಾಗಿ ಕ್ರೀಯಾಯೋಜನೆ ರೂಪಿಸಿದ ಕಾಲಾವಧಿಯೊಳಗೆ ಭೌತಿಕ ಹಾಗೂ ಆರ್ಥಿಕ ಪ್ರಗತಿ ಸಾಧಿಸಬೇಕು. ಯಾವುದೇ ಹಂತದಲ್ಲಿ ಬಾಕಿ ಇರುವ, ಈಗಾಗಲೇ ಆಡಳಿತಾತ್ಮಕ ಅನುಮೊದನೆ ದೊರೆತಿರುವ ಕಟ್ಟಡ ಕಾಮಗಾರಿಗಳ ಮಾಹಿತಿಯನ್ನು ಒದಗಿಸಿದಲ್ಲಿ ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ತ್ವರಿತ ವಿಲೆವಾರಿಗೆ ಕ್ರಮ ವಹಿಸಲಾಗುವುದು ಎಂದರು.

ಶೇ.100ರಷ್ಟು ಪ್ರಗತಿ ಸಾಧಿಸಿ

ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದಲ್ಲಿ ಟೆಂಡರ್ ಆದ ಕಾಮಗಾರಿಗಳನ್ನು ನಿಗದಿಪಡಿಸಿದ ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ, ಅಲ್ಪಸಂಖ್ಯಾತರ ವಸತಿ ನಿಲಯಗಳಲ್ಲಿನ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಒದಗಿಸಲು ಆದ್ಯತೆ ನೀಡಬೇಕು. ವಸತಿ ನಿಲಯಗಳಲ್ಲಿ ಅಗತ್ಯವಿರುವ ನೀರು, ಗುಣಮಟ್ಟದ ಆಹಾರ ಸೇರಿದಂತೆ ಮೂಲ ಸೌಲಭ್ಯಗಳನ್ನು ಸಮರ್ಪಕವಾಗಿ ಕಲ್ಪಿಸಬೇಕು. ವಿದ್ಯಾರ್ಥಿಗಳು ಶಿಷ್ಯವೇತನಕ್ಕೆ ಅರ್ಜಿ ಸಲ್ಲಿಸಿದ ದಾಖಲೆಗಳನ್ನು ಸಮರ್ಪಕವಾಗಿ ನಿರ್ವಹಿಸಿ ಅರ್ಹರಿಗೆ ಶಿಷ್ಯವೇತನ ದೊರಕಿಸಲು ಕ್ರಮ ವಹಿಸಿ, ಶೇಕಡಾ ನೂರರಷ್ಟು ಪ್ರಗತಿ ಸಾಧಿಸುವಂತೆ ಅವರು ಸೂಚನೆ ನೀಡಿದರು.

ವಸತಿ ಶಾಲೆಯ ವಿದ್ಯಾರ್ಥಿಯೋರ್ವ ಯುಪಿಎಸ್‌ಸಿಯಲ್ಲಿ ಮಾಡಿದ ಸಾಧನೆಗೆ ಪ್ರಶಂಸಿಸಿದ ಅವರು, ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಒದಗಿಸುವ ಉದ್ದೇಶದಿಂದ ಸರ್ಕಾರ ಹಲವು ಯೋಜನೆ- ಕಾರ್ಯಕ್ರಮಗಳನ್ನು ಜಾರಿಗೊಳಿಸಿ ಶಿಕ್ಷಣಕ್ಕೆ ಒತ್ತು ನೀಡಿದ್ದು, ಸರ್ಕಾರ ಒದಗಿಸುವ ಸೌಲಭ್ಯಗಳನ್ನು ವಿದ್ಯಾರ್ಥಿಗಳಿಗೆ ದೊರಕಿಸುವಂತೆ ಅವರು ಸೂಚನೆ ನೀಡಿದರು.

ಜಿಲ್ಲೆಯಲ್ಲಿ ಏ.26 ರಿಂದ ಜೂನ್ 9 ರವರೆಗೆ ಏಳನೇ ಸುತ್ತಿನ ಜಾನುವಾರು ಕಾಲುಬಾಯಿ ರೋಗ ಲಸಿಕಾ ಅಭಿಯಾನ ಯಶಸ್ವಿಯಾಗಿ ಕೈಗೊಂಡಿದ್ದು, ಇದರೊಂದಿಗೆ ಚರ್ಮ ಗಂಟು ರೋಗಗಳ ಪ್ರತಿಬಂಧಕ ಲಸಿಕೆ (ಎಲ್ ಎಸ್ ಡಿ) ಲಸಿಕೆಗೆ ಕ್ರಮ ವಹಿಸುವಂತೆ ಅವರು ಸೂಚನೆ ನೀಡಿದರು.

ಜಿಪಂ ಸಿಇಒ ರಿಷಿ ಆನಂದ, ಎಡಿಸಿ ಸೋಮಲಿಂಗ ಗೆಣ್ಣೂರ, ವಿಜಯಪುರ ಉಪವಿಭಾಗಾಧಿಕಾರಿ ಗುರುನಾಥ ದಡ್ಡೆ, ಇಂಡಿ ಉಪವಿಭಾಗಾಧಿಕಾರಿ ಅನುರಾಧಾ ವಸ್ತ್ರದ, ಮಹಾನಗರ ಪಾಲಿಕೆ ಆಯುಕ್ತ ಮೆಕ್ಕಳಕಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net