

ಶ್ರೀರಂಗಪಟ್ಟಣ: ಪುರಸಭೆ ಕಾರ್ಯಾಲಯದಲ್ಲಿ ಪುರಜನರ ಕೆಲಸ ಕಾರ್ಯಗಳನ್ನು ಅಧಿಕಾರಿ-ಸಿಬ್ಬಂದಿ ನಿಗದಿತ ಸಮಯದಲ್ಲಿ ತ್ವರಿತವಾಗಿ ನಿರ್ವಹಿಸಿಕೊಡುವ ಜತೆಗೆ ಸ್ವಚ್ಛ ಶ್ರೀರಂಗಪಟ್ಟಣ ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಪುರಸಭಾ ಸದಸ್ಯರು ಒಕ್ಕೊರಲಿನಿಂದ ಆಗ್ರಹಿಸಿದರು.
ಪಟ್ಟಣದ ಪುರಸಭಾ ಕಾರ್ಯಾಲಯದಲ್ಲಿ ಬುಧವಾರ ಅಧ್ಯಕ್ಷೆ ಯಶೋದಮ್ಮ ಹಾಗೂ ಉಪಾಧ್ಯಕ್ಷ ಎಂ.ಎಲ್.ದಿನೇಶ್ ನೇತೃತ್ವದಲ್ಲಿ ಮುಖ್ಯಾಧಿಕಾರಿ ಎಂ.ರಾಜಣ್ಣ ಅವರ ಸಮ್ಮುಖದಲ್ಲಿ ಆಯೋಜಿಸಿದ್ದ 2ನೇ ಅವಧಿಯ ಮೊದಲನೇ ಸಾಮಾನ್ಯ ಸಭೆಯಲ್ಲಿ 23 ವಾರ್ಡ್‌ಗಳಲ್ಲಿ ಎದುರಾಗಿರುವ ಸಮಸ್ಯೆಗಳ ಕುರಿತು ಸದಸ್ಯರು ಚರ್ಚಿಸಿದರು.
ಎಸ್.ಪ್ರಕಾಶ್ ಮಾತನಾಡಿ, ಪುರಸಭೆಯಲ್ಲಿ ಇ-ಸ್ವತ್ತು, ದಾಖಲೆಗಳ ತಿದ್ದುಪಡಿ, ಖಾತೆ ಸೇರಿದಂತೆ ಕೆಲವು ಕಾರ್ಯಗಳು ವಿಳಂಬವಾಗುತ್ತಿರುವ ಕಾರಣ ಜನರಿಂದ ಆಕ್ರೋಶ ವ್ಯಕ್ತವಾಗುವ ಜತೆಗೆ ಕೆಲ ಅಧಿಕಾರಿ-ಸಿಬ್ಬಂದಿಗಳ ವಿರುದ್ಧ ಲಂಚದ ಆರೋಪ ಮಾಡುತ್ತಾರೆ. ಇದಕ್ಕೆ ತಕ್ಕಂತೆ 3 ಬಾರಿ ದಾಳಿ ಜತೆಗೆ ಲೋಕಾಯುಕ್ತ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದು ನಮ್ಮೆಲ್ಲರಿಗೂ ತಲೆ ತಲೆತಗ್ಗಿಸುವಂತೆ ಮಾಡಿದೆ. ವಾರ್ಡ್‌ಗಳಲ್ಲಿ ಸಂಗ್ರಹವಾಗುವ ತ್ಯಾಜ್ಯ ಸಕಾಲದಲ್ಲಿ ವಿಲೇವಾರಿಯಾಗಬೇಕು. ಇನ್ನಾದರೂ ಪುರಜನರ ಕಾರ್ಯಗಳು ತುರ್ತಾಗಿ ನಡೆಯಬೇಕು ಎಂದು ಒತ್ತಾಯಿಸಿದರು.
ಎಸ್.ನಂದೀಶ್ ಮಾತನಾಡಿ, ಇತಿಹಾಸದಲ್ಲೇ ಅವಿರೋಧವಾಗಿ ಆಯ್ಕೆಯಾಗಿ ಆಡಳಿತ ನಡೆಸಿದ ಹೆಮ್ಮೆ ಶ್ರೀರಂಗಪಟ್ಟಣ ಪುರಸಭೆಗಿದೆ. ಕಪ್ಪು ಚುಕ್ಕೆಯಾಗಿ ಲೋಕಾಯುಕ್ತ ದಾಳಿ ಕಾಡುತ್ತಿದೆ. ಆದರೆ ಆಡಳಿತ ಜನರು ನೀಡಿದ ದಾಖಲೆಗಳಲ್ಲಿ ಲೋಪ ಎದುರಾಗಿದ್ದಲ್ಲಿ ಅದನ್ನು ಕಚೇರಿಗಳಲ್ಲೇ ಬಾಕಿ ಉಳಿಸಿಕೊಳ್ಳದೆ ಸಕಾಲದಲ್ಲೇ ಕಾರಣ ತಿಳಿಸಿ ಸಮರ್ಪಕ ದಾಖಲೆಗಳೊಂದಿಗೆ ಪುನಾ ಒದಗಿಸುವಂತೆ ಮಾಹಿತಿ ನೀಡಿ ಕಡತಗಳನ್ನು ತಕ್ಷಣ ವಿಲೇವಾರಿ ಮಾಡಬೇಕು. ಜನರಿಗೆ ತಿಳಿಯದ ಸರ್ಕಾರದ ನಿಯಮಗಳನ್ನು ಸರಿಯಾಗಿ ತಿಳಿಸಿಕೊಡುವ ಜತೆಗೆ ಅವರೊಂದಿಗೆ ಸೌಜನ್ಯದಿಂದ ವರ್ತಿಸಿದರೆ ಇಂತಹ ಸಲ್ಲದ ಆರೋಪಗಳು ಕಡಿಮೆಯಾಗುತ್ತದೆ. ಇನ್ನು ಪಟ್ಟಣದ 23 ವಾರ್ಡ್‌ಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಲು ಪೌರ ಸಿಬ್ಬಂದಿ ಗುಂಪು ಕಾರ್ಯಾಚರಣೆಗೆ ನೇಮಕಗೊಳಿಸಿ ಎಂದು ಸಲಹೆ ನೀಡಿದರು.
ಪಟ್ಟಣದ ಕಾರ್ಯನಿರತ ಪತ್ರಕರ್ತರ ಭವನದ ನಿವೇಶನ ಈಗಲೂ ಪುರಸಭೆ ಹೆಸರಲ್ಲಿ ಚಾಲ್ತಿಯಲ್ಲಿದ್ದು, ಅಭಿವೃದ್ದಿ ದೃಷ್ಟಿಯಿಂದ ಅದನ್ನು ಸಂಘದ ಹೆಸರಿಗೆ ನೋಂದಣಿ ಮಾಡಿಕೊಡಬೇಕು ಎಂದರು.
ಪುರಸಭಾ ಸದಸ್ಯರಿಗೆ ಗೌರವ ಧನ ಹೆಚ್ಚಿಸುವ ಅವಶ್ಯವಿದ್ದು, ಕ್ಷೇತ್ರದ ಶಾಸಕರು, ವಿಧಾನಪರಿಷತ್ ಸದಸ್ಯರು ಹಾಗೂ ಜಿಲ್ಲಾ ಉಸ್ತುವಾರಿ ಮಂತ್ರಿಗಳ ಸಹಕಾರ ಪಡೆದು ಈ ಬೇಡಿಕೆ ಈಡೇರಿಸುವ ನಿಟ್ಟಿನಲ್ಲಿ ಆಡಳಿತ ಕ್ರಮ ಕೈಗೊಳ್ಳಲಿ ಎಂದು ಮನವಿ ಮಾಡಿದರು.
ಚೈತ್ರಾ ಚಂದ್ರಶೇಖರ್ ಮಾತನಾಡಿ, ಪಟ್ಟಣದಲ್ಲಿ ಮಡಿವಾಳ ಸಮುದಾಯ ಸಂಘಟಿತರಾಗಿ ಕಾರ್ಯ ನಿರ್ವಹಿಸುತ್ತಿದ್ದು, ಸಮುದಾಯ ಭವನ ನಿರ್ಮಾಣಕ್ಕೆ ನಿವೇಶನ ಕಲ್ಪಿಸಿಕೊಡಬೇಕು. ಈ ಬಗ್ಗೆ ಸಾಕಷ್ಟು ಬಾರಿ ಅರ್ಜಿ ನೀಡಿ ಗಮನ ಸೆಳೆಯಲಾಗಿದೆ. ಸಮುದಾಯದ ಹಿತದೃಷ್ಟಿಯಿಂದ ಈ ಬೇಡಿಕೆ ಈಡೇರಿಸಬೇಕು ಎಂದು ಮನವಿ ಮಾಡಿದರು.
ವಸಂತ ಕುಮಾರಿ ಲೋಕೇಶ್ ಮಾತನಾಡಿ, ಪಟ್ಟಣದಲ್ಲಿ ಅರ್ಧಕ್ಕೆ ನಿಂತಿರುವ ಒಳಚರಂಡಿ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು. ಜನರಿಗೆ ಸಮರ್ಪಕ ನೀರು ಒದಗಿಸಲು ಸರ್ಕಾರ ನೀಡಿರುವ 22 ಕೋಟಿ ರೂ. ಅನುದಾನದಡಿ ಯೋಜನೆ ಪೂರ್ಣಗೊಳಿಸಲು ಶೀಘ್ರ ಟೆಂಡರ್ ಕರೆದು ಕಾಮಗಾರಿಗೆ ಚಾಲನೆ ನೀಡುವ ಮೂಲಕ ಜನರ ನೀರಿನ ಸಮಸ್ಯೆ ಬಗೆಹರಿಸಿ ಎಂದು ಒತ್ತಾಯಿಸಿದರು.
ಇದೇ ವೇಳೆ ಸಭೆಯಲ್ಲಿ ಎಲ್ಲ ವಾರ್ಡ್‌ಗಳ ಸ್ವಚ್ಛತೆಗಾಗಿ ಹೆಚ್ಚುವರಿ ಕಾರ್ಮಿಕರನ್ನು ಗುತ್ತಿಗೆ ಆಧಾರದಲ್ಲಿ ನೇಮಿಸಿಕೊಳ್ಳಲು, ಮಾರ್ಚ್ ತಿಂಗಳಲ್ಲಿ ಸ್ಥಾಯಿ ಸಮಿತಿ ರಚನೆಯೊಂದಿಗೆ ಆಡಳಿತದ ಖರ್ಚು-ಜಮಾದ ಆಯವ್ಯಯ ಮಂಡಿಸಲು ಹಾಗೂ ಸರ್ಕಾರದ ಹೊಸ ನಿಯಮದಂತೆ ಎ ಮತ್ತು ಬಿ ಖಾತಾ ನೀಡುವ ಜಾಗೃತಿಗೆ 23 ವಾರ್ಡ್‌ಗಳಲ್ಲೂ ಆಂದೋಲನ ನಡೆಸಲು ಸರ್ವ ಸದಸ್ಯರು ಒಮ್ಮತದಿಂದ ಸಮ್ಮತಿ ಸೂಚಿಸಿದರು.
ಮನವಿ ಆಲಿಸಿದ ಉಪಾಧ್ಯಕ್ಷ ದಿನೇಶ್ ಮಾತನಾಡಿ, ಆಡಳಿತ ಚುರುಕುಗೊಳ್ಳಲು ಮುಖ್ಯಾಧಿಕಾರಿ ಎಂ.ರಾಜಣ್ಣ ಸಹ ಈಗಾಗಲೇ ಸಾಕಷ್ಟು ಕ್ರಮ ಕೈಗೊಂಡಿದ್ದಾರೆ. ಕ್ಷೇತ್ರದ ಶಾಸಕರ ಸಹಕಾರದೊಂದಿಗೆ ಜನಪ್ರತಿನಿಧಿಗಳ ಬೇಡಿಕೆ ಮತ್ತು ಸಮಸ್ಯೆಗಳನ್ನು ಹಂತ-ಹಂತವಾಗಿ ಈಡೇರಿಸಿ ಅಭಿವೃದ್ಧಿ ಪೂರಕ ಆಡಳಿತ ನೀಡಲಾಗುವುದು ಎಂದು ಭರವಸೆ ನೀಡಿದರು.
ಪುರಸಭಾ ಸದಸ್ಯರಾದ ಗಂಜಾಂ ಕೃಷ್ಣಪ್ಪ, ಎಸ್.ಎನ್.ದಯಾನಂದ್, ಎಸ್.ನಂದೀಶ್, ಎಸ್.ಟಿ.ರಾಜು, ನರಸಿಂಹೇಗೌಡ, ರಾಧಾ ಶ್ರೀಕಂಠು, ನಿರ್ಮಲಾ ವೇಣುಗೋಪಾಲ್, ಮಂಗಳಮ್ಮ, ಪೂರ್ಣಿಮಾ ಪರಶಿವ, ಪೂರ್ಣಿಮಾ ಪ್ರಕಾಶ್, ವನಿತಾ, ನಾಮನಿದೇರ್ಶಿತ ಸದಸ್ಯರಾದ ಪ್ರದೀಪ್, ನಾಗರತ್ನ, ದೀಪಕ್ ಸೇರಿದಂತೆ ಅಧಿಕಾರಿ-ಸಿಬ್ಬಂದಿ ಉಪಸ್ಥಿತರಿದ್ದರು.