ಜಿಲ್ಲೆಯಲ್ಲಿ ಸಹಜ ಹೆರಿಗೆಗೆ ಆದ್ಯತೆ ನೀಡಿ

Published on

ಬಳ್ಳಾರಿ : ಗರ್ಭಿಣಿಯರಿಗೆ ರಕ್ತಹೀನತೆ ತಡೆಗಟ್ಟುವ ಮೂಲಕ ಸಹಜ ಹೆರಿಗೆಯೊಂದಿಗೆ ತಾಯಿ ಮಗು ಮನೆಗೆ ಸಂತಸದಿಂದ ಮರಳುವಂತೆ ಕ್ರಮವಹಿಸಬೇಕು ಎಂದು ಡಿಸಿ ಪ್ರಶಾಂತ ಕುಮಾರ ಮಿಶ್ರಾ ತಿಳಿಸಿದರು.

ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ತಾಯಿ ಮತ್ತು ಶಿಶು ಮರಣ ತಡೆಗಟ್ಟುವಿಕೆ ಕುರಿತ ಅಂತರ ಇಲಾಖೆ ಸಮನ್ವಯ ಸಮಿತಿ ಸಭೆಯಲ್ಲಿ ಮಾತನಾಡಿದರು. ಕುಟುಂಬದ ಸದಸ್ಯರಿಗೆ ತಮ್ಮ ಮನೆಯಲ್ಲಿರುವ ಗರ್ಭಿಣಿ ಮಹಿಳೆಗೆ ವೈದ್ಯರ ಬಳಿ ತಪಾಸಣೆಗೆ ಒಳಪಟ್ಟ ನಂತರ ರಕ್ತ ಹೀನತೆಯನ್ನು ತಡೆಗಟ್ಟಲು ಕಬ್ಬಿಣಾಂಶ ಮಾತ್ರೆಗಳನ್ನು ನಿರ್ಲಕ್ಷೃ ವಹಿಸದೇ ತೆಗೆದುಕೊಳ್ಳಲು ಸೂಕ್ತ ಮಾಹಿತಿ ನೀಡಬೇಕು. ಗ್ರಾಮೀಣ ಪ್ರದೇಶದಲ್ಲಿ ತಾಯಂದಿರ ಆರೈಕೆ ಕುರಿತು ಕುಟುಂಬದ ಸದಸ್ಯರಿಗೆ ತಿಳಿ ಹೇಳಬೇಕು. ಚೊಚ್ಚಲು ಗರ್ಭಿಣಿ ಅವಧಿಯಲ್ಲಿ ಆರೋಗ್ಯ ಇಲಾಖೆಯು ವೈದ್ಯಕೀಯ ಕಾರಣಗಳಿಂದ ಗುರ್ತಿಸಲ್ಪಡುವ ಗಂಡಾಂತರ ಗರ್ಭಿಣಿ ಸಂದರ್ಭದಲ್ಲಿ ಹೆಚ್ಚಿನ ಕಾಳಜಿ ವಹಿಸಲು ಆದ್ಯತೆ ನೀಡಬೇಕು ಎಂದು ಹೇಳಿದರು.

ಕ್ಷೇತ್ರ ಮಟ್ಟದಲ್ಲಿ ವೈದ್ಯಾಧಿಕಾರಿಗಳಿಂದ ಹಿಡಿದು ಪ್ರತಿಯೊಬ್ಬ ಸಿಬ್ಬಂದಿ ಗಂಡಾಂತರ ಗರ್ಭಿಣಿ ಎಂದು ತಿಳಿದ ದಿನದಿಂದಲೇ ಕಬ್ಬಿಣಾಂಶ ಮಾತ್ರೆಗಳ ಕುರಿತು ಪಾಲಕರಲ್ಲಿ ತಪ್ಪು ನಂಬಿಕೆಗಳು ಇದ್ದಲ್ಲಿ ಹೆಚ್ಚಿನ ಜಾಗೃತಿ ನೀಡಬೇಕು. ಮಾತ್ರೆಗಳನ್ನು ಪ್ರತಿದಿನ ತಪ್ಪದೇ ನುಂಗಲು ತಿಳಿಸಬೇಕು. ವೈದ್ಯರ ಸಲಹೆ ಮೇರೆಗೆ ಸ್ಕಾೃನಿಂಗ್, ರಕ್ತ ಪರೀಕ್ಷೆ, ಮೂತ್ರ ಪರೀಕ್ಷೆ, ಎಚ್.ಐ.ವಿ ಪರೀಕ್ಷೆ, ಅಗತ್ಯವೆನಿಸುವ ಇತರೆ ಪರೀಕ್ಷೆಗಳನ್ನು ಕಾಲ ಕಾಲಕ್ಕೆ ಮಾಡಿಸಲು ಸೂಚಿಸಬೇಕು ಎಂದರು.

ಡಿಎಚ್‌ಒ ಡಾ.ವೈ.ರಮೇಶಬಾಬು ಮಾತನಾಡಿ, ಎಲ್ಲ ಗರ್ಭಿಣಿಯರಿಗೂ ಕ್ಯಾಲ್ಶಿಯಂ ಮಾತ್ರೆಯನ್ನು ನೀಡಲಾಗುತ್ತಿದೆ. ಪ್ರತಿ ತಿಂಗಳು ವೈದ್ಯರ ಮೂಲಕ ತಪಾಸಣೆಯನ್ನು 7ನೇ ತಿಂಗಳವರೆಗೆ, 7 ರಿಂದ 9 ತಿಂಗಳಲ್ಲಿ ಪ್ರತಿ 15 ದಿನಕ್ಕೊಮ್ಮೆ ತಪಾಸಣೆ ಹಾಗೂ 9 ತಿಂಗಳ ನಂತರ ಪ್ರತಿ ವಾರ ವೈದ್ಯರ ಮೂಲಕ ತಪಾಸಣೆ ಮಾಡಿಸುವ ಜತೆಗೆ ಪ್ರತಿ ತಿಂಗಳು 09ನೇ ಮತ್ತು 20ನೇ ತಾರೀಖುನಂದು ಎಲ್ಲ ಗರ್ಭಿಣಿಯರ ತಪಾಸಣೆ ಕೈಗೊಂಡು ಜಾಗೃತಿ ನೀಡಲಾಗುತ್ತಿದೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net