ಸ್ಥಳೀಯ ಕಲಾವಿದರಿಗೆ ಆದ್ಯತೆ ನೀಡಿ

veeragase (Dasara)
Published on

ಅವಿನಾಶ್ ಜೈನಹಳ್ಳಿ ಮೈಸೂರು
ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವವನ್ನು ಈ ಬಾರಿ ಅದ್ದೂರಿಯಾಗಿ ಆಚರಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಈ ಮಧ್ಯೆ ದಸರಾ ಮಹೋತ್ಸವದಲ್ಲಿ ರಾಜ್ಯದ ಹಾಗೂ ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಪ್ರೋತ್ಸಾಹಿಸಬೇಕು ಎಂಬ ಕೂಗು ಕೇಳಿಬರುತ್ತಿದೆ.


ಎಲ್ಲ ಜಿಲ್ಲೆಗಳ ಗ್ರಾಮೀಣ ಭಾಗದ ಕಲಾವಿದರಿಗೆ ಹಾಗೂ ಎಲ್ಲ ಕಲಾ ಪ್ರಕಾರಗಳಿಗೆ ಅವಕಾಶ ನೀಡಬೇಕು. ನಮ್ಮ ಜಾನಪದ ಕಲಾವಿದರನ್ನು ಗೌರವಿಸುವ ಕೆಲಸವಾಗಬೇಕು. ಜಾನಪದ ಹಾಗೂ ಸಾಂಪ್ರದಾಯಿಕ ಸಂಗೀತ, ನೃತ್ಯ, ನಾಟಕೋತ್ಸವಗಳನ್ನು ಆಯೋಜಿಸಬೇಕು ಎಂದು ಸ್ಥಳೀಯ ಕಲಾವಿದರು ಒತ್ತಾಯ ಮಾಡುತ್ತಿದ್ದಾರೆ.

ಪ್ರತಿ ಬಾರಿಯೂ ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂಬ ಒತ್ತಾಯ ಇದ್ದೇ ಇರುತ್ತದೆ. ಅಂತೆಯೆ, ಪ್ರತಿ ವರ್ಷ ದಸರಾ ಉನ್ನತ ಮಟ್ಟದ ಸಮಿತಿ ಸಭೆಯಲ್ಲೂ ಸ್ಥಳೀಯ ಕಲಾವಿದರನ್ನು ಪರಿಗಣಿಸಲು ತೀರ್ಮಾನ ಮಾಡಲಾಗುತ್ತದೆ. ಆದರೆ ದಸರೆ ವೇಳೆ ಸ್ಥಳೀಯ ಕಲಾವಿದರನ್ನು ನಿರ್ಲಕ್ಷೃ ಮಾಡುವುದು ಸಾಮಾನ್ಯವಾಗಿಬಿಟ್ಟಿದೆ. ಈ ಬಾರಿಯ ದಸರಾ ಉನ್ನತ ಮಟ್ಟದ ಸಮಿತಿ ಸಭೆಯಲ್ಲೂ ಸ್ಥಳೀಯ ಕಲಾವಿದರಿಗೆ ಆದ್ಯತೆ ನೀಡಲಾಗುತ್ತದೆ ಎಂದು ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿರುವುದು ಕಲಾವಿದರ ಪಾಲಿಗೆ ಖುಷಿ ನೀಡಿದೆ. ಆದರೆ ಆ ತೀರ್ಮಾನ ಈ ಬಾರಿಯಾದರೂ ಸರಿಯಾಗಿ ಜಾರಿಯಾಗುವ ಮೂಲಕ ಸ್ಥಳೀಯ ಕಲಾವಿದರಿಗೆ ಅವಕಾಶ ದೊರೆಯಬೇಕು ಎಂಬ ಒತ್ತಾಯ

ಜೋರಾಗಿದೆ. ಕಲಾ ಪ್ರದರ್ಶನಕ್ಕೆ ಪ್ರಮುಖ ವೇದಿಕೆ

ಜಾನಪದ, ನೃತ್ಯ, ಸಂಗೀತ, ಕಲೆ, ಸಂಸ್ಕೃತಿಯನ್ನು ದಸರಾದಲ್ಲಿ ಪ್ರದರ್ಶಿಸಲು ಕಲಾವಿದರು ಚಾತಕಪಕ್ಷಿಯಂತೆ ಕಾಯುವುದು ಸಾಮಾನ್ಯ. ಹೀಗಾಗಿ ಪ್ರತಿವರ್ಷ ದಸರಾ ಮಹೋತ್ಸವ ಕಲಾ ಪ್ರದರ್ಶನಕ್ಕೆ ಪ್ರಮುಖ ವೇದಿಕೆಯಾಗುತ್ತಲೇ ಬಂದಿದೆ. ಕಲೆ ಮತ್ತು ಕಲಾವಿದರ ಪ್ರೋತ್ಸಾಹಕ್ಕೆ ಪೂರಕವಾದ ಕಾರ್ಯಕ್ರಮಗಳನ್ನು ರೂಪಿಸುವುದು ಅನಿವಾರ್ಯವಾಗಿದೆ. ದಸರಾದಲ್ಲಿ ಜಂಬೂಸವಾರಿ ಬಿಟ್ಟರೆ ಅತಿ ಹೆಚ್ಚು ಜನರನ್ನು ಆಕರ್ಷಿಸುವುದು ಸಾಂಸ್ಕೃತಿಕ ಕಾರ್ಯಕ್ರಮಗಳು. ಆದರೆ ನಾಡಿನ ಎಲ್ಲ ಕಲಾವಿದರನ್ನು ಹಾಗೂ ಎಲ್ಲ ಕಲಾ ಪ್ರಕಾರಗಳನ್ನು ಜನರಿಗೆ ಪರಿಚಯ ಮಾಡುವ ಕಾರ್ಯಕ್ರಮ ನಡೆಯುತ್ತಿಲ್ಲ. ಸ್ಥಳೀಯ ಕಲಾವಿದರಿಗೆ ಅವಕಾಶ ನೀಡುತ್ತಿಲ್ಲ ಎಂಬ ಕೂಗು ಅನೇಕ ವರ್ಷಗಳಿಂದ ಕೇಳುತ್ತಲೇ ಇದ್ದು, ಈ ಬಾರಿಯೂ ಮುಂದುವರಿದಿದೆ.


ಈ ವರ್ಷ ಎಲ್ಲ ಪ್ರಕಾರದ ಜಾನಪದ ಕಲಾವಿದರಿಗೆ ಅವಕಾಶ ಮಾಡಿಕೊಡಬೇಕೆಂಬ ಆಗ್ರಹ ಕೇಳಿಬಂದಿದೆ. ಅರಮನೆಯ ಮುಖ್ಯ ವೇದಿಕೆಯಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಜಾನಪದ ಕಲಾವಿದರಿಗೆ ನಿತ್ಯ ಒಂದು ಗಂಟೆ ಅವಕಾಶ ಕಲ್ಪಿಸಲು ಚಿಂತನೆ ಮಾಡಬೇಕಿದೆ. ಅದರಲ್ಲೂ ದೂರದ ಉತ್ತರ ಕರ್ನಾಟಕದಲ್ಲಿ ಸಾಕಷ್ಟು ಜಾನಪದ ಕಲಾವಿದರಿದ್ದು, ಅಂತಹವರಿಗೂ ಅವಕಾಶ ಕೊಡುವ ಕುರಿತಂತೆ ಸರ್ಕಾರ ಪರಿಗಣಿಸಬೇಕಿದೆ.

ದಸರಾ ಮಹೋತ್ಸವ ಬಂತೆಂದರೆ ಸಾಕು ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದ ಕಲಾವಿದರು ತಮ್ಮ ಪ್ರತಿಭೆ ಪ್ರದರ್ಶನಕ್ಕೆ ಹಾತೊರೆಯುತ್ತಾರೆ. ಇನ್ನು ನಮಗೂ ಕಾರ್ಯಕ್ರಮ ನೀಡಲು ವೇದಿಕೆ ಸಿಕ್ಕರೆ ಸಾಕೆಂದು ಸಾವಿರಾರು ಸ್ಥಳೀಯ ಕಲಾವಿದರು ಚಡಪಡಿಸುತ್ತಾರೆ. ಅದರಲ್ಲೂ ಮುಖ್ಯವಾಗಿ ಇಷ್ಟವಾದ ಸಂಗೀತ, ನೃತ್ಯ, ನಾಟಕ ಇನ್ನಿತರ ಕಾರ್ಯಕ್ರಮಗಳನ್ನು ಆಸ್ವಾದಿಸಲು ಕಲಾರಸಿಕರು ಕಾಯುತ್ತಿರುತ್ತಾರೆ. ಹಾಗಾಗಿ ಈ ಬಾರಿಯ ದಸರೆಯಲ್ಲಿ ಹೆಚ್ಚು ವೇದಿಕೆ ನಿರ್ಮಿಸುವ ಮೂಲಕ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದ ಕಲಾವಿದರ ಜತೆಗೆ ಸ್ಥಳೀಯ ಕಲಾವಿದರಿಗೂ ಹೆಚ್ಚಿನ ಆದ್ಯತೆ ನೀಡಬೇಕಿದೆ.

ಸಂಭಾವನೆಗೆ ಬ್ರೇಕ್ ಹಾಕಬೇಕು

ಪ್ರತಿವರ್ಷ ಯುವ ದಸರಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಅನ್ಯ ರಾಜ್ಯದ ಕಲಾವಿದರಿಗೆ ಲಕ್ಷಾಂತರ ರೂ. ಸಂಭಾವನೆ ಕೊಡುವುದಕ್ಕೆ ಶಾಶ್ವತವಾಗಿ ಬ್ರೇಕ್ ಹಾಕಬೇಕಿದೆ. ಯುವ ದಸರಾ ಕಾರ್ಯಕ್ರಮದಲ್ಲಿ ಅನ್ಯ ರಾಜ್ಯದ ಕಲಾವಿದರಿಗೆ ಒಂದರಿಂದ ಒಂದೂವರೆ ಗಂಟೆ ಕಾರ್ಯಕ್ರಮಕ್ಕೆ 30ರಿಂದ 40 ಲಕ್ಷ ರೂ. ಸಂಭಾವನೆ ಕೊಡುವುದನ್ನು ನಿಲ್ಲಿಸಬೇಕು. ಅದರ ಬದಲು ಹೊಸ ರೀತಿಯಲ್ಲಿ ಚಿಂತನೆ ಮಾಡಿ ಲೋಪ ಸರಿಪಡಿಸುವ ಕೆಲಸಕ್ಕೆ ಮುಂದಾಗಬೇಕಿದೆ.


ಜಂಬೂಸವಾರಿಯಲ್ಲಿ ಪಾಲ್ಗೊಳ್ಳುವ ಕಲಾವಿದರ ಗೌರವಧನ ತೀರಾ ಕಡಿಮೆಯಿದ್ದು, ಸರ್ಕಾರ ಈ ಬಾರಿಯಾದರೂ ಉದಾರ ಮನೋಭಾವ ತೋರಿಸಬೇಕಾಗಿದೆ. ದೂರದ ಉತ್ತರ ಕರ್ನಾಟಕ, ಹೈದರಾಬಾದ್ ಕರ್ನಾಟಕ, ಮುಂಬೈ ಕರ್ನಾಟಕದಿಂದ ಬರುವ ಕಲಾವಿದರು ಒಂದು ದಿನ ಮೈಸೂರಲ್ಲೇ ಉಳಿಯುತ್ತಾರೆ. ಮರುದಿನ ಮೆರವಣಿಗೆಯಲ್ಲಿ ಪಾಲ್ಗೊಳ್ಳುತ್ತಾರೆ. ನಂತರ, ಸಂಜೆ ಜಾಗ ಖಾಲಿ ಮಾಡುವಂತಾಗಿದೆ. ಅದರ ಬದಲು ಅವರಿಗೆ ಸರಿಯಾದ ಊಟ, ತಿಂಡಿ ವ್ಯವಸ್ಥೆ ಮಾಡಿಸುವ ಜತೆಗೆ ಪ್ರತಿಯೊಬ್ಬರಿಗೂ ಜಿಲ್ಲಾಡಳಿತದಿಂದ ಪ್ರಶಂಸನಾ ಪತ್ರ, ಸ್ಮರಣಿಕೆಯನ್ನು ಕೊಟ್ಟು ಗೌರವಿಸುವ ಕೆಲಸ ಮಾಡಬೇಕಿದೆ.

ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ದಸರಾ ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ ಬಗ್ಗೆ ಚರ್ಚಿಸಲಾಗಿದೆ. ಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಆದೇಶದಂತೆ ಈ ಬಾರಿ ಕಾರ್ಯಕ್ರಮ ರೂಪಿಸಲಾಗುತ್ತದೆ. ಸ್ಥಳೀಯ ಕಲಾವಿದರಿಗೂ ಹೆಚ್ಚಿನ ಅವಕಾಶ ಕಲ್ಪಿಸಲು ಪ್ರಯತ್ನಿಸುತ್ತೇವೆ.ವಿ.ಎನ್.ಮಲ್ಲಿಕಾರ್ಜುನಸ್ವಾಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಪ್ರತಿ ವರ್ಷ ದಸರೆಯಲ್ಲಿ ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂಬ ಒತ್ತಾಯ ಮಾಡುತ್ತೇವೆ. ಉನ್ನತ ಮಟ್ಟದ ಸಮಿತಿ ಸಭೆಯಲ್ಲೂ ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಆದ್ಯತೆ ನೀಡುವ ಬಗ್ಗೆ ತೀರ್ಮಾನ ಮಾಡುತ್ತಾರೆ. ಆದರೆ ದಸರೆ ವೇಳೆ ಸ್ಥಳೀಯ ಕಲಾವಿದರನ್ನು ಮರೆಯುತ್ತಾರೆ. ಸಿದ್ದರಾಮಯ್ಯ ಅವರು ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿದ್ದು, ಈ ವರ್ಷವಾದರೂ ಸ್ಥಳೀಯ ಕಲಾವಿದರಿಗೆ ನ್ಯಾಯ ಕೊಡಿಸುತ್ತಾರೆ ಎಂಬ ನಂಬಿಕೆ ಇದೆ. ದಸರೆಯಲ್ಲಿ ಶೇ.50 ರಷ್ಟು ಕಾರ್ಯಕ್ರಮಗಳನ್ನು ಸ್ಥಳೀಯ ಕಲಾವಿದರಿಗೆ ಮೀಸಲಿಡಬೇಕು.ಚಂದ್ರು ಮಂಡ್ಯ, ರಂಗಕರ್ಮಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net