

ಹನೂರು: ಮಹದೇಶ್ವರ ಬೆಟ್ಟದಲ್ಲಿ ಸ್ವಚ್ಛತೆ ಕಾಪಾಡುವುದರ ಮೂಲಕ ಆಗಮಿಸುವ ಭಕ್ತರಿಗೆ ಶ್ರೀ ಕ್ಷೇತ್ರ ಇಷ್ಟವಾಗುವಂತಿರಬೇಕು. ಸ್ವಚ್ಛತೆ ಬಗ್ಗೆ ನಿರ್ಲಕ್ಷ್ಯ ತೋರಿದ್ದಲ್ಲಿ ವಾರಪೂರ್ತಿ ಮ.ಬೆಟ್ಟದಲ್ಲೇ ತಂಗಬೇಕಾಗುತ್ತದೆ ಎಂದು ಶಾಸಕ ಎಂ.ಆರ್.ಮಂಜುನಾಥ್ ಎಚ್ಚರಿಸಿದರು.
ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಸ್ವಚ್ಛತೆ ಸಂಬಂಧ ಶನಿವಾರ ಅಂತರಗಂಗೆ ಕಲ್ಯಾಣಿ, ಮೇಲ್ಮಟ್ಟದಲ್ಲಿರುವ ಡ್ಯಾಂ, ನೀರಿನ ಪಂಪ್‌ಹೌಸ್, ಡಾರ್ಮಿಟರಿ, ಸ್ನಾನಗೃಹ, ಶೌಚಗೃಹಗಳು, ದೊಡ್ಡಕೆರೆ ಹಾಗೂ ಇನ್ನಿತರೆ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿದರು. ಅಂತರಗಂಗೆಯ ಸ್ಥಳಕ್ಕೆ ತೆರಳಿದ್ದ ಶಾಸಕರಿಗೆ ಅಲ್ಲಲ್ಲಿ ಕಸ, ಕಡ್ಡಿ ಬಿದ್ದರುವುದು ಕಂಡು ಬಂತು. ಈ ವೇಳೆ ಸ್ಥಳದಲ್ಲಿದ್ದ ಸಿಬ್ಬಂದಿಗೆ ಮ.ಬೆಟ್ಟದ ಪ್ರಸಿದ್ಧ ಧಾರ್ಮಿಕ ಯಾತ್ರಸ್ಥಳ. ಇಲ್ಲಿಗೆ ತಮಿಳುನಾಡು ಹಾಗೂ ರಾಜ್ಯದ ವಿವಿಧೆಡೆಯಿಂದ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಆದರೆ ಸೂಕ್ಷ್ಮವಾಗಿ ಗಮನಿಸಿದಾಗ ಸ್ವಚ್ಛತೆ ಕೊರತೆ ಎದ್ದು ಕಾಣುತ್ತಿದೆ. ಹಾಗಾಗಿ ಕ್ಷೇತ್ರದಲ್ಲಿ ನೈರ್ಮಲ್ಯ ಕಾಪಾಡುವುದು ಅಗತ್ಯವಿದೆ. ಇದರಲ್ಲಿ ಪೌರಕಾರ್ಮಿಕರ ಜವಾಬ್ದಾರಿ ಹೆಚ್ಚಿದೆ. ಯಾವುದೇ ಕಾರಣಕ್ಕೂ ಶುಚಿತ್ವ ಸಂಬಂಧ ಭಕ್ತರಿಂದ ದೂರು ಬರಬಾರದು. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಕಾರ್ಯೋನ್ಮುಖರಾಗಬೇಕು. ಇದರಲ್ಲಿ ಯಾವುದೇ ನಿರ್ಲಕ್ಷ್ಯ ಸಲ್ಲದು. ಮ.ಬೆಟ್ಟದಲ್ಲಿ ಸ್ವಚ್ಛತೆ ಕಾಪಾಡಬೇಕು ಅಷ್ಟೇ ಎಂದು ಸೂಚಿಸಿದರು.
ಇದೇ ವೇಳೆ ಅಂತರಗಂಗೆ ಡ್ಯಾಂನ ನೀಲಿ ನಕಾಶೆಯನ್ನು ಶಾಸಕರು ಪರಿಶೀಲಿಸಿ ಮಾತನಾಡಿ, ಡ್ಯಾಂನಲ್ಲಿ ಹೆಚ್ಚು ನೀರು ಸಂಗ್ರಹವಾಗಲು ಕ್ರಮವಹಿಸಬೇಕು. ಭಕ್ತರಿಗೆ ಯಾವುದೇ ರೀತಿಯಲ್ಲೂ ನೀರಿನ ಸಮಸ್ಯೆಯಾಗದಂತೆ ಯೋಜನೆ ಸಿದ್ಧಪಡಿಸಬೇಕು. ಅಗತ್ಯವಿರುವೆಡೆ ಭಕ್ತರು ಸ್ನಾನ ಮಾಡಲು ಶವರ್ ವ್ಯವಸ್ಥೆ ಮಾಡಬೇಕು. ಬಟ್ಟೆ ಬದಲಾಯಿಸಿಕೊಳ್ಳಲು ವ್ಯವಸ್ಥೆಯಾಗಬೇಕು. ಶೌಚಗೃಹ ಹಾಗೂ ಸ್ನಾನಗೃಹದ ಕೊಳಚೆ ನೀರು ಅಂತರಗಂಗೆ ಹೋಗದಂತೆ ಒಳಚರಂಡಿಗೆ ಸಂಪರ್ಕ ಕಲ್ಪಿಸಲು ಅಗತ್ಯ ಕ್ರಮವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಬೃಹತ್ ಸ್ನಾನಗೃಹ, ಶೌಚಗೃಹಗಳಿಗೆ ತೆರಳಿದ ಶಾಸಕರಿಗೆ ಅಶುಚಿತ್ವವಿರುವುದು ಕಂಡು ಬಂತು. ಈ ವೇಳೆ ಗರಂ ಆದ ಶಾಸಕರು ದೇಗುಲದ ಇಂಜಿನಿಯರ್ ಅವರನ್ನು ಉದ್ದೇಶಿಸಿ ಮಾತನಾಡಿ, ಈ ರೀತಿ ಅಶುಚಿತ್ವದಿಂದ ಕೂಡಿರುವುದು ಎಷ್ಟರ ಮಟ್ಟಿಗೆ ಸರಿ? ಈ ಬಗ್ಗೆ ಕ್ರಮವಾಗಬೇಕು. ಪುನರಾವರ್ತನೆಯಾದಲ್ಲಿ ಅಮಾನತು ಮಾಡುವುದಾಗಿ ಎಚ್ಚರಿಸಿದರು. ಇನ್ನು ಡಾರ್ಮಿಟರಿಗೆ ತೆರಳಿದ ವೇಳೆ ಭಕ್ತರೊಬ್ಬರ ಶೌಚಗೃಹದಲ್ಲಿ ಶುಚಿತ್ವವಿಲ್ಲ ಎಂಬ ದೂರಿಗೆ ಅಗತ್ಯ ಕ್ರಮವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಶ್ರೀ ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಉಪ ಕಾರ್ಯದರ್ಶಿ ಚಂದ್ರುಶೇಖರ್, ಪಿಡಬ್ಲುೃಡಿ ಎಇಇ ಚಿನ್ನಣ್ಣ, ಎಇ ಮಹೇಶ್, ಚಾಮುಲ್ ನಿರ್ದೇಶಕ ಮಹದೇವಸ್ವಾಮಿ, ಮುಖಂಡರಾದ ವಿಜಯಕುಮಾರ್, ಶಿವರಾಮು, ಸುರೇಶ್, ಬಸವರಾಜು, ನವೀನ್‌ಕುಮಾರ್ ಇದ್ದರು.