ಕಲೆ, ರಂಗಭೂಮಿಗೆ ಆದ್ಯತೆ ನೀಡಿ

13
Published on

ಮೈಸೂರು: ಚಿತ್ರಕಲೆ, ರಂಗಭೂಮಿ, ಪಠ್ಯೇತರ ಚಟುವಟಿಕೆಗಳಿಗೆ ಹೆಚ್ಚು ಆದ್ಯತೆ ನೀಡಬೇಕು. ರಂಗ ಚಟುವಟಿಕೆಗಳನ್ನು ಶಿಕ್ಷಣ ಸಂಸ್ಥೆಗಳಲ್ಲಿ ನಡೆಸಿದರೆ, ಮಕ್ಕಳ ಸರ್ವತೋಮುಖ ಬೆಳವಣಿಗೆ ಸಾಧ್ಯ. ಮಕ್ಕಳ ದೇಹ ಹಾಗೂ ಮನಸ್ಸು ಅರಳುತ್ತದೆ ಎಂದು ಶಿಕ್ಷಣ ತಜ್ಞ ಉಮಾಶಂಕರ್ ಪೆರಿಯೋಡಿ ಪ್ರತಿಪಾದಿಸಿದರು.

ನಗರದಲ್ಲಿ ಭಾರತೀಯ ರಂಗಶಿಕ್ಷಣ ಸಂಸ್ಥೆಯು ರಾಷ್ಟ್ರೀಯ ಮಕ್ಕಳ ರಂಗೋತ್ಸವ ಪ್ರಯುಕ್ತ ಬುಧವಾರ ಆಯೋಜಿಸಿದ್ದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ರಂಗ ಶಿಕ್ಷಣವನ್ನು ಶಾಲೆ, ಕಾಲೇಜುಗಳಲ್ಲಿ ಒಂದು ಭಾಗವಾಗಿಸಿದರೆ ಅಭಿನಯ, ಪ್ರದರ್ಶನ, ಮಿದುಳು ಜ್ಞಾನ ಸಾಮರ್ಥ್ಯ ಹೆಚ್ಚಿಸುತ್ತದೆ. ಮಕ್ಕಳಲ್ಲಿ ವಿಮರ್ಶಾತ್ಮಕ ಚಿಂತನೆ ಮೂಡಿಸುವುದೇ ಶಿಕ್ಷಣದ ಗುರಿಯಾಗಬೇಕು. ಅದಕ್ಕೆ ರಂಗಭೂಮಿ ನೆರವು ಅಗತ್ಯ. ಈಗಿನ ಶಿಕ್ಷಣ ಪದ್ಧತಿಯು ಮಕ್ಕಳಲ್ಲಿ ಆಲೋಚನಾ ಶಕ್ತಿಯನ್ನು ಬೆಳೆಸುತ್ತಿಲ್ಲ. ಕೇವಲ ನೆನಪಿಟ್ಟುಕೊಳ್ಳುವ ಸಾಮರ್ಥ್ಯವನ್ನು ಹೆಚ್ಚಿಸುವಲ್ಲಿ ಮಾತ್ರ ನಿರತವಾಗಿದೆ. ಆನ್‌ಲೈನ್ ಶಿಕ್ಷಣವು ಕಲಿಕಾ ಸಂಸ್ಥೆಗಳಲ್ಲಿ ಸಾಮಾನ್ಯವಾಗಿರುವಾಗ ಮಕ್ಕಳ ಕಲಿಕೆಯಲ್ಲಿ ಏಕತಾನತೆ ಬಂದಿದೆ. ವೈವಿಧ್ಯಮಯವಾಗಿಲ್ಲ. ಕಲಿಕಾ ಚಟುವಟಿಕೆಗಳು ಇರುವುದಿಲ್ಲ. ಹೀಗಾಗಿ

ಪಠ್ಯ ಕಲಿಕೆಯ ಭಾವಗಳನ್ನು ಶಿಕ್ಷಕರು ಮಕ್ಕಳಿಗೆ ದಾಟಿಸುತ್ತಿಲ್ಲ ಎಂದರು.
ರಂಗಕರ್ಮಿ ಪ್ರಸನ್ನ ಮಾತನಾಡಿ, ಯಾಂತ್ರೀಕರಣ, ಜಾಗತೀಕರಣ ಕೇಂದ್ರಿತ ಅಭಿವೃದ್ಧಿಯು ಮಕ್ಕಳ ಆಲೋಚನೆಗಳಿಗೆ ಪೂರಕವಾಗಿಲ್ಲ. ಯಾಂತ್ರಿಕ ಜೀವನಕ್ಕೆ ಸಜ್ಜುಗೊಳಿಸುವ ಶಿಕ್ಷಣ ಪದ್ಧತಿ ಜಾರಿಯಲ್ಲಿದೆ. ಮಕ್ಕಳ ಕೇಂದ್ರಿತ, ಅವರ ಮನಸ್ಸು ಹೃದಯವನ್ನು ಅರಳಿಸುವ ಶಿಕ್ಷಣವು ಇಂದು ತುರ್ತಾಗಿದೆ ಎಂದರು.

ಭಾರತವು ವೈವಿಧ್ಯಮಯ ಸಂಸ್ಕೃತಿ ಹೊಂದಿದೆ. ಬಂಗಾಳ, ಕರ್ನಾಟಕ, ಮಹಾರಾಷ್ಟ್ರ, ಕೇರಳ, ತಮಿಳುನಾಡು ಹಾಗೂ ಉತ್ತರ ಭಾರತದ ಒಂದೊಂದು ರಾಜ್ಯಗಳು ವಿಭಿನ್ನವಾಗಿವೆ. ಸಂಸ್ಕೃತಿಯನ್ನು ಅರಿಯುವ, ಸಂಭ್ರಮಿಸುವ ವಾತಾವರಣವನ್ನು ಸೃಷ್ಟಿಸಬೇಕಿದೆ. ನಾಟಕ, ನೃತ್ಯ, ಕಲೆಗಳ ಕೂಡುಕೊಳ್ಳುವಿಕೆಯನ್ನು ಏರ್ಪಡಿಸಬೇಕಿದೆ ಎಂದರು.

ಸ್ವೀಡನ್ ರಂಗ ಲೇಖಕರಾದ ಲೀನಾ ಫ್ರೀಡೆಲ್, ಲಿಸ್ ಹೆಲ್‌ಸ್ಟ್ರೋಮ್, ಜಾಕ್ ಒಯಾ, ರಂಗಕರ್ಮಿಗಳಾದ ರಾಜೇಶ್ ಬಸವಣ್ಣ, ಪರಿಸರ ತಜ್ಞ ಮನು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net