ತಿಗಳರಿಗೆ ರಾಜಕೀಯ ಪ್ರಾತಿನಿಧ್ಯ ನೀಡಿ; ಶ್ರೀ ಜ್ಞಾನಾನಂದಪುರಿ ಸ್ವಾಮೀಜಿ ಆಗ್ರಹ

06Tmk_Tigala_Nigama_Swamiji_PC
Published on

ತುಮಕೂರು: ತಿಗಳ ಜನಾಂಗವನ್ನು ಸಮಾಜದ ಮುಖ್ಯವಾಹಿನಿಗೆ ತರಲು ಹಾಗೂ ಸರ್ವತೋಮುಖ ಅಭಿವೃದ್ಧಿ ಸಾಧಿಸಲು ತಿಗಳ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಿ, ಕನಿಷ್ಠ 100 ಕೋಟಿ ರೂ . ಅನುದಾನ ನೀಡುವಂತೆ ರಾಜ್ಯ ಸರ್ಕಾರವನ್ನು ರಾಜ್ಯ ಹಿಂದುಳಿದ ಮತ್ತು ದಲಿತ ಮಠಾಧೀಶರ ಒಕ್ಕೂಟದ ಕಾರ್ಯಾಧ್ಯಕ್ಷರೂ ಆದ ತಿಗಳ ಜನಾಂಗದ ಶ್ರೀ ಜ್ಞಾನಾನಂದಪುರಿ ಸ್ವಾಮೀಜಿ ಆಗ್ರಹಿಸಿದರು.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸ್ವಾಮೀಜಿ, ಸ್ವಾತಂತ್ರ್ಯ ನಂತರ ಬಂದ ಸರ್ಕಾರಗಳು ವ್ಯವಸ್ಥಿತವಾಗಿ ಹಿಂದುಳಿದ ವರ್ಗಗಳನ್ನು ಅಭಿವೃದ್ಧಿ ಪಡಿಸುತ್ತಿವೆಯಾದರೂ ತಿಗಳ ಸಮುದಾಯಕ್ಕೆ ಸೂಕ್ತ ರಾಜಕೀಯ ಪ್ರಾತಿನಿಧ್ಯ ನೀಡಿಲ್ಲ. ಎಲ್ಲ ಸರ್ಕಾರಗಳು ವಂಚಿಸಿವೆ ಎಂದರು.

ಸಿದ್ದರಾಮಯ್ಯ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ನಿಗಮ ಸ್ಥಾಪನೆಯ ಭರವಸೆ ನೀಡಿದ್ದರು. ಸಮ್ಮಿಶ್ರ ಸರ್ಕಾರ ಪತನವಾಗಿದ್ದರಿಂದ ನಿಗಮ ರಚನೆ ಮುಂದೆ ಹೋಯಿತು. ಬಿಜೆಪಿ ಸರ್ಕಾರವು 40 ಲಕ್ಷ ಜನಸಂಖ್ಯೆ ಇರುವ ತಿಗಳ ಸಮುದಾಯಕ್ಕೆ ನಿಗಮ ರಚನೆಗೆ ಮುಂದಾಗಬೇಕು. ಶಿರಾ ಉಪ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಸಹ ಭರವಸೆಕೊಟ್ಟಿದ್ದರು. ಅಲ್ಲಿ ನಮ್ಮ ಸಮುದಾಯ ಬಿಜೆಪಿಯನ್ನು ಬೆಂಬಲಿಸಿದ್ದು ಸಮುದಾಯಕ್ಕೆ ನೀಡಿರುವ ಬೇಡಿಕೆಯನ್ನು ಈಡೇರಿಸುವಂತೆ ಒತ್ತಾಯಿಸಿದರು.

ಕೋಲಾರದಿಂದ ಬೀದರ್‌ವರೆಗೆ ಇರುವ ತಿಗಳರ ಪರವಾಗಿ ಪಕ್ಷಾತೀತವಾಗಿ ಹೋರಾಡುವ ಮೂಲಕ ನಿಗಮ ರಚನೆ ಮಾಡುವುದಕ್ಕೆ ಒತ್ತಾಯಿಸಲಾಗುವುದು. ತುಮಕೂರಿನಲ್ಲಿಯೇ ಸಮಾವೇಶವನ್ನು ಸಂಘಟಿಸಿ, ಬಿಜೆಪಿ ಸರ್ಕಾರದ ಅವಧಿಯಲ್ಲಿಯೇ ಶತಾಯಗತಾಯ ನಿಗಮ ರಚನೆಗೆ ಒತ್ತಡ ಹಾಕಲಾಗುವುದು ಎಂದರು. ಅಣೇತೋಟ ಶ್ರೀನಿವಾಸ್, ವೈ.ಟಿ.ರಾಜೇಂದ್ರ, ಶ್ರೀರಾಮನಗರದ ರವೀಶ್ , ನೆಲಮಂಗಲದ ರೇಣುಕೇಶ್ ಮತ್ತಿತರರು ಹಾಜರಿದ್ದರು.

ತಿಗಳರ ಅಭಿವೃದ್ಧಿ ನಿಗಮ ಸ್ಥಾಪಿಸಿ, ತುಮಕೂರು ಜಿಲ್ಲೆಯ ಒಬ್ಬ ಮಹಿಳೆಯನ್ನೇ ನಿಗಮದ ಅಧ್ಯಕ್ಷರನ್ನಾಗಿ ನೇಮಿಸಬೇಕು. ತಿಗಳ ಜನಾಂಗವನ್ನು ಪ್ರವರ್ಗ- 2 ಎ ನಿಂದ ಪ್ರವರ್ಗ- 1 ಕ್ಕೆ ಬದಲಾಯಿಸಬೇಕು . ಈ ನಿಟ್ಟಿನಲ್ಲಿ ಸರ್ಕಾರ ತುರ್ತು ಕ್ರಮ ಕೈಗೊಳ್ಳಬೇಕು.

ಶ್ರೀ ಜ್ಞಾನಾನಂದಪುರಿ ಸ್ವಾಮೀಜಿ ಕಾರ್ಯಾಧ್ಯಕ್ಷ, ರಾಜ್ಯ ಹಿಂದುಳಿದ ಮತ್ತು ದಲಿತ ಮಠಾಧೀಶರ ಒಕ್ಕೂಟ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net