

ಮೈಸೂರು: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರನ್ನು ಗೆಲ್ಲಿಸುವ ಮೂಲಕ ರಾಜಕೀಯ ಪುನರ್ಜನ್ಮ ನೀಡಬೇಕು ಎಂದು ಬಿಜೆಪಿ ರಾಜ್ಯ ಚುನಾವಣಾ ಉಸ್ತುವಾರಿ ರಾಧಾ ಮೋಹನ್‌ದಾಸ್ ಅಗರವಾಲ್ ವಿನಂತಿಸಿದರು.
ಸರಸ್ವತಿಪುರಂನ ವಿಜಯವಿಠ್ಠಲ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಆಯೋಜಿಸಿದ್ದ ಅಭ್ಯರ್ಥಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಯದುವೀರ ಅವರನ್ನು ಕ್ಷೇತ್ರದ ಜನ ಈಗಾಗಲೇ ಸಂಸದ ಎಂದು ನಿರ್ಧಾರಿಸಿದ್ದಾರೆ. ಅವರನ್ನು 4 ಲಕ್ಷ ಮತಗಳ ಅಂತರದಿಂದ ಗೆಲ್ಲಿಸಬೇಕು. ಆಗ ಅವರ ಶಕ್ತಿ ಹೆಚ್ಚಲಿದೆ. ಅವರಿಂದ ಇಡೀ ಕರ್ನಾಟಕ ಅಭಿವೃದ್ಧಿ ಆಗಬೇಕು. ಇದಕ್ಕಾಗಿ ಜನರು ಮತಗಳ ಮೂಲಕ ಅವರಿಗೆ ಶಕ್ತಿ ತುಂಬಬೇಕು. ಮೈಸೂರಿನ ಅಭಿವೃದ್ಧಿ ಬಗ್ಗೆ ಅವರು ಸಾಕಷ್ಟು ಕಲ್ಪನೆ ಹೊಂದಿದ್ದಾರೆ. ಇದು ಅವರಿಗೆ ರಾಜಕೀಯ ಪುನರ್ಜನ್ಮದ ಅವಕಾಶ ಮಾಡಿಕೊಡಬೇಕು ಎಂದರು.
ಮೈಸೂರಿನ ಯದುವಂಶಕ್ಕೆ 400 ವರ್ಷಗಳ ಇತಿಹಾಸ ಇದೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ದೇಶದಲ್ಲೇ ಮೊದಲ ಬಾರಿಗೆ ವಿವಿಧ ಜನಪರ ಯೋಜನೆ ಅನುಷ್ಠಾನಗೊಳಿಸಿದ್ದರು. ಶಿಕ್ಷಣ, ಆರೋಗ್ಯ, ಕೈಗಾರಿಕೆ ಸೇರಿದಂತೆ ಎಲ್ಲ ಕ್ಷೇತ್ರಗಳನ್ನು ಸ್ವಾತಂತ್ರ್ಯಪೂರ್ವದಲ್ಲೇ ಸಾಧನೆ ಮಾಡಿದ್ದಾರೆ. ಅವರ ವಂಶದ ಕುಡಿಯಾಗಿರುವ ಯದುವೀರ ವಿಕಸಿತ ಮೈಸೂರು ಕನಸು ಕಂಡಿದ್ದಾರೆ. ಆ ಕನಸನ್ನು ಸಾಕಾರಗೊಳಿಸಲು ರಾಜಕೀಯ ಪ್ರವೇಶಿಸಿದ್ದಾರೆ ಎಂದು ಹೇಳಿದರು.
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ಅವರನ್ನು ಗೆಲ್ಲಿಸುವ ಮೂಲಕ ಮೈಸೂರು ಮಾತ್ರವಲ್ಲದೆ, ರಾಜ್ಯದ ಪ್ರಗತಿಗೆ ಶ್ರಮಿಸುವ ಅವಕಾಶ ಮಾಡಿಕೊಡಬೇಕು ಎಂದರು.
ಅಭ್ಯರ್ಥಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿ, ಮೈಸೂರು ಅರಸರು ಮಾಡಿದ ಅಭಿವೃದ್ಧಿ ಕಾರ್ಯದ ಪ್ರತಿಧ್ವನಿಯಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಕೆಲಸ ಮಾಡುತ್ತಿದ್ದಾರೆ. ವಿಕಸಿತ ಭಾರತಕ್ಕಾಗಿ ಶ್ರಮಿಸುತ್ತಿದ್ದಾರೆ ಎಂದರು.
ಮೈಸೂರು ರಾಜವಂಶಸ್ಥರು ಈ ಹಿಂದೆ ದೂರದೃಷ್ಟಿಯಿಂದ ಜಾರಿಗೊಳಿಸಿದ ಯೋಜನೆಗಳ ಫಲವನ್ನು ನಾವು ಅನುಭವಿಸುತ್ತಿದ್ದು, ಈ ನಿಟ್ಟಿನಲ್ಲಿ ಮೋದಿ ಸಹ ಕಾರ್ಯನಿರ್ವಹಿಸುತ್ತಿದ್ದು, ಜನತೆ ಬಿಜೆಪಿಯನ್ನು ಬೆಂಬಲಿಸಿ, ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿಯಾಗಿ ಮಾಡಬೇಕು ಎಂದರು.
ಮೈಸೂರಲ್ಲಿ ಕಸದ ಸಮಸ್ಯೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಯದುವೀರ ಅವರು, ಪಾಲಿಕೆ ವತಿಯಿಂದ ಕಸ ಸಂಗ್ರಹ ನಡೆಯುತ್ತಿದೆ. ಆದರೂ, ಕೆಲವೆಡೆ ಕಸ ಹಾಕಲಾಗುತ್ತಿದೆ. ಜನರು ತಮ್ಮ ಮನಸ್ಥಿತಿ ಬದಲಿಸಿಕೊಳ್ಳಬೇಕು. ಎಲ್ಲೆಂದರಲ್ಲಿ ಕಸ ಬಿಸಾಡಬಾರದು. ಸ್ವಚ್ಛಗೊಳಿಸಿದಷ್ಟು ಕಸ ಎಸೆಯುವವರ ಸಂಖ್ಯೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮೈಸೂರಿನ ಸ್ವಚ್ಛತೆ ಕಾಪಾಡುವ ಹೊಣೆ ಎಲ್ಲ ನಾಗರಿಕರದ್ದಾಗಿದೆ ಎಂದು ಹೇಳಿದರು.
ಮೈಸೂರಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಆಂಬುಲೆನ್ಸ್ ಸೇವೆ ಹೆಚ್ಚಿಸುವ ಸಂಬಂಧ ಚರ್ಚಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಲಿಂಗಾಂಬುಧಿ ಕೆರೆ ಹಾಗೂ ಸ್ಮಾರಕ ಸಂರಕ್ಷಣೆ ಕುರಿತಂತೆ ಪ್ರತಿಕ್ರಿಸಿದ ಅವರು, ವಾರಾಂತ್ಯದಲ್ಲಿ ಯಾವುದಾದರೂ ಕೆರೆ ಅಥವಾ ಸ್ಮಾರಕ ಸಂರಕ್ಷಣೆಗೆ ಕ್ರಮ ಕೈಗೊಳ್ಳಲಾಗುವುದು. ಇದಕ್ಕೆ ಸಾರ್ವಜನಿಕರ ಸಹಕಾರ ಅಗತ್ಯ ಎಂದು ಹೇಳಿದರು.
ಮಾಜಿ ಸಚಿವ ಎಸ್.ಎ.ರಾಮದಾಸ್, ಬಿಜೆಪಿ ನಗರಾಧ್ಯಕ್ಷ ಎಲ್.ನಾಗೇಂದ್ರ, ಬಿಜೆಪಿ ಜಿಲ್ಲಾಧ್ಯಕ್ಷ ಎಲ್.ಆರ್.ಮಹದೇವಸ್ವಾಮಿ, ರಾಜ್ಯ ಬಿಜೆಪಿ ಉಪಾಧ್ಯಕ್ಷ ಎಂ.ರಾಜೇಂದ್ರ, ವಿಜಯ ವಿಠಲ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಆರ್.ವಾಸುದೇವ್ ಮೂರ್ತಿ, ಇತರರು ಉಪಸ್ಥಿತರಿದ್ದರು.
ಮೈಸೂರು ವಿಮಾನ ನಿಲ್ದಾಣದಿಂದ ವಿಮಾನಗಳ ಹಾರಾಟ ಸ್ಥಗಿತಗೊಂಡಿದೆ. ಈ ಹಿಂದೆ 10 ವಿಮಾನಗಳು ಹಾರಾಡುತ್ತಿದ್ದವು. ಪ್ರಸ್ತುತ ಕೇವಲ 2 ವಿಮಾನವಷ್ಟೇ ಸಂಚರಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ವಿಮಾನಯಾನ ಪುನರಾರಂಭಿಸಬೇಕು.
ಇಲ್ಲದಿದ್ದರೆ ಜನರು ಬೆಂಬಲಿಸುವುದಿಲ್ಲ ಎಂದು ಸಂವಾದ ಕಾರ್ಯಕ್ರಮದಲ್ಲಿ ಹೊಯ್ಸಳ ಸಂಘದ ಅಧ್ಯಕ್ಷ ಕೆ.ಆರ್.ಸತ್ಯನಾರಾಯಣ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಯದುವೀರ ಅವರು, ಕೇಂದ್ರದ ನಾಯಕರೊಂದಿಗೆ ಚರ್ಚಿಸಿ, ಗಮನ ಸೆಳೆಯುವುದಾಗಿ ಭರವಸೆ ನೀಡಿದರು.