

ಶಿವಮೊಗ್ಗ: ರೈತರ ಬೆಳೆಗಳನ್ನು ಕಾಡುಪ್ರಾಣಿಗಳು ಹಾಳು ಮಾಡುತ್ತಿದ್ದು ಅಂತಹ ಪ್ರಾಣಿಗಳನ್ನು ಅರಣ್ಯ ಇಲಾಖೆಯವರು ಹಿಡಿಯಬೇಕು ಅಥವಾ ಬೆಳೆ ಹಾನಿ ಮಾಡುವ ಕಾಡುಪ್ರಾಣಿಗಳಿಗೆ ಗುಂಡು ಹೊಡೆಯಲು ರೈತರಿಗೆ ಅನುಮತಿ ಕೊಡಬೇಕು ಎಂದು ಮಾಜಿ ಗೃಹಸಚಿವ ಆರಗ ಜ್ಞಾನೇಂದ್ರ ಆಗ್ರಹಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ಪ್ರಾಣಿಗಳಿಂದ ನಮ್ಮನ್ನು ರಕ್ಷಣೆ ಮಾಡಿ ಎಂದು ನಾವು ಹೋರಾಟ ಮಾಡುತ್ತಿದ್ದೇವೆ. ಇತ್ತೀಚೆಗೆ ಪ್ರಾಣಿ ಮತ್ತು ಮನುಷ್ಯನ ಸಂಘರ್ಘ ಮೀತಿ ಮಿರುತ್ತಿದೆ. ಅರಣ್ಯಾಧಿಕಾರಿಗಳಿಗೆ ಕಾಡಿನಲ್ಲಿ ಗಿಡ ನೆಡಿ ಎಂದರೆ ರೈತರ ಮನೆ ಹಿಂಬಾಗಿಲಲ್ಲಿ ಬಂದು ಅಗೆದು ಗುಂಡಿ ಹೊಡಿಯುತ್ತಿದ್ದಾರೆ ಎಂದು ಕಿಡಿಕಾರಿದರು.
ಮಲೆನಾಡಿನ ಭಾಗದ ಜನರ ಸಮಸ್ಯೆಯನ್ನು ಸರ್ಕಾರ ಅರ್ಥವೇ ಮಾಡಿಕೊಂಡಿಲ್ಲ. ರೈತರು ಬೆಳೆದು ಕೊಟ್ಟ ಆಹಾರವನ್ನು ಆರಾಮಾಗಿ ಕೂತುಕೊಂಡು ಊಟ ಮಾಡುತ್ತಾರೆ. ಆದರೆ ರೈತರ ಕಷ್ಟಕ್ಕೆ ಸ್ಪಂದಿಸುವುದಿಲ್ಲ. ಅರಣ್ಯ ಇಲಾಖೆಯ ಕಾಡುಪ್ರಾಣಿಗಳನ್ನು ಹಿಡಿದುಕೊಂಡು ಹೋಗಬೇಕು. ಇಲ್ಲವೇ ಬೆಳೆ ಹಾನಿ ಮಾಡುವ ಕಾಡು ಪ್ರಾಣಿಗೆ ಗುಂಡು ಹೊಡೆಯಲು ಅನುಮತಿ ಕೊಡಿ ಎಂದು ಗುಡುಗಿದರು.
ನಾವು ಬೆಳೆ ಬೆಳೆದು ಕಾಡು ಪ್ರಾಣಿಗೆ ಆಹಾರ ಕೊಡುವಂತಾಗಿದೆ. ನಮ್ಮ ಬದುಕು ಹಾಗೂ ನಾವು ತಿನ್ನುವ ಆಹಾರವನ್ನು ಅರಣ್ಯ ಇಲಾಖೆ ಕಸಿದುಕೊಳ್ಳುತ್ತಿದೆ. ರೈತರ ಹಣೆ ಬರಹ ದೇವರು ಬರೆಯುತ್ತಿಲ್ಲ ಅರಣ್ಯ ಇಲಾಖೆಯವರು ಬರೆಯುತ್ತಿದ್ದಾರೆ. ಕಾಡು ರಕ್ಷಣೆ ಆಗಿರೋದು ಅರಣ್ಯ ಇಲಾಖೆಯವರಿಂದಲ್ಲ ರೈತರಿಂದ ಎಂದರು.