

ಮೈಸೂರು: ಯುಗಾದಿ ಹಬ್ಬದ ಅಂಗವಾಗಿ ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆಯಿಂದ ನಗರ ಸದ್ವಿದ್ಯಾ ಶಿಕ್ಷಣ ಸಂಸ್ಥೆ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 500ಕ್ಕೂ ಹೆಚ್ಚು ಕುಟುಂಬಕ್ಕೆ ಒಂಟಿಕೊಪ್ಪಲ್ ಪಂಚಾಂಗ ವಿತರಿಸುವ ಮೂಲಕ ವಸುನಾಮ ಸಂವತ್ಸರದ ಯುಗಾದಿ ಹಬ್ಬದ ಶುಭ ಕೋರಲಾಯಿತು.
ಶಾಸಕ ಕೆ.ಹರೀಶ್‌ಗೌಡ ಅವರು ಪಂಚಾಂಗ ವಿತರಿಸಿ ಮಾತನಾಡಿ, ಚೈತ್ರ ಮಾಸದ ಮೂಲಕ ಪ್ರಾರಂಭವಾಗುವ ಯುಗಾದಿಯ ಹೊಸ ವರ್ಷ ಇಡೀ ಪರಿಸರವೇ ಹಸಿರಿನ ಮೂಲಕ ಸಂತಸ ಪಡುತ್ತದೆ. ನಮ್ಮ ಪೂರ್ವಜರು ಹೇಳಿಕೊಟ್ಟ ಹಬ್ಬಗಳ ಮಹತ್ವ, ಸಾಂಸ್ಕೃತಿಕ ಧಾರ್ಮಿಕ ಆಚರಣೆಯನ್ನು ಪಾಲಿಸಿಕೊಂಡು ಬರುವಲ್ಲಿ ಪ್ರತಿಯೊಬ್ಬರೂ ಚಿಂತಿಸಬೇಕು. ಅದರಲ್ಲಿಯೇ ಒಂದು ವೈಜ್ಞಾನಿಕ ಶಕ್ತಿ ಅಡಗಿದೆ ಎಂದು ಹೇಳಿದರು.
ಧಾರ್ಮಿಕ ಕಾರ್ಯಕ್ರಮಗಳಿಗೆ ದಿನಾಂಕ, ಸಮಯವನ್ನು ಪಂಚಾಂಗದ ಪ್ರಕಾರವಾಗಿ ಯಥಾವತ್ತಾಗಿ ಸರ್ವರಿಗೂ ಮಾಹಿತಿ ನೀಡುವ ಪುರೋಹಿತರು, ಅರ್ಚಕರನ್ನು ಸೇರಿಸಿ ಕಳೆದ 6 ವರ್ಷಗಳಿಂದ ಈ ಕಾರ್ಯಕ್ರಮ ಮಾಡಿಕೊಂಡು ಬರುತ್ತಿದ್ದೇನೆ. ಚಾಮರಾಜ ಕ್ಷೇತ್ರದಲ್ಲೂ ಬ್ರಾಹ್ಮಣ ಸಮುದಾಯದ 28 ಸಾವಿರಕ್ಕೂ ಹೆಚ್ಚು ಜನರು ಇದ್ದಾರೆ. ಬಹುತೇಕರು ಅರ್ಚಕರು, ಪುರೋಹಿತರು, ಶಿಕ್ಷಕರು ಅಡುಗೆ ವೃತ್ತಿಯವರು ಆರ್ಥಿಕವಾಗಿ ಹಿಂದುಳಿದವರಾಗಿದ್ದು, ಶಿಕ್ಷಣ, ಉದ್ಯೋಗ, ವೈದ್ಯಕೀಯ ನೆರವು, ಸಾಂಸ್ಕೃತಿಕ ಸಹಕಾರ, ಪ್ರೋತ್ಸಾಹ, ಯಾವುದೇ ಸರ್ಕಾರಿ ಸೌಲಭ್ಯಗಳಿಲ್ಲದ ಬಗ್ಗೆ ನನ್ನ ಬಳಿ ಚರ್ಚಿಸಿದ್ದಾರೆ. ಇದರ ಬಗ್ಗೆ ಸರ್ಕಾರದ ಗಮನಕ್ಕೆ ತಂದು ಶಾಶ್ವತ ಯೋಜನೆ ರೂಪಿಸಲು ಪ್ರಯತ್ನ ಪಡುವುದಾಗಿ ಭರವಸೆ ನೀಡಿದರು.
ಆಧ್ಯಾತ್ಮಿಕ ಚಿಂತಕ ಡಾ. ಶೆಲ್ವಪಿಳ್ಳೆ ಅಯ್ಯಂಗಾರ್ ಮಾತನಾಡಿ, ಪಂಚಾಗದಲ್ಲಿ ಹಿಂದು ಸಂಪ್ರದಾಯದ ಆಚರಣೆ ಮಹತ್ವದ ಬಗ್ಗೆ ನಿಶ್ಚಯಿಸಿದಂತೆ ಎಲ್ಲವೂ ನಡೆಯುತ್ತ ಬಂದಿರುವದನ್ನು ಕಾಣುತ್ತಿದ್ದೇವೆ ಎಂದರು.
ಸಾವಿರಾರು ವರ್ಷಗಳಿಂದ ಸಮಾಜದಲ್ಲಿ ಆಗುವ ಬದಲಾವಣೆಯ ಮುನ್ನವೇ ಪಂಚಾಂಗದಲ್ಲಿ ನಮೂದಿಸಲಾಗುತ್ತದೆ. ಸರ್ಕಾರದಿಂದ ಬಡ ಬ್ರಾಹ್ಮಣರಿಗೆ ಸಿಗಬೇಕಾದ ಸರ್ಕಾರದ ಸವಲತ್ತುಗಳು ಅನ್ಯರಾಜ್ಯಗಳಲ್ಲಿ ಇರುವ ಹಾಗೆ ಕರ್ನಾಟಕದಲ್ಲಿ ಜಾರಿಗೆ ಬರಬೇಕಿದೆ. ಅರ್ಚಕ, ಪುರೋಹಿತರಿಗೆ ಅಡುಗೆ ವೃತ್ತಿಯವರಿಗೆ ಸರ್ಕಾರದ ನೆರವು ಅವಶ್ಯಕ ಎಂದು ಕೋರಿದರು.
ಮೇಲುಕೋಟೆ ವೆಂಗಿಪುರ ಮಠದ ಶ್ರೀಇಳೈ ಆಳ್ವಾರ್ ಸ್ವಾಮೀಜಿ, ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ. ಪ್ರಕಾಶ್, ಹಿರಿಯ ಸಮಾಜ ಸೇವಕ ಕೆ. ರಘುರಾಮ್ ವಾಜಪೇಯಿ, ಯೋಗ ನರಸಿಂಹ ಸ್ವಾಮಿ ದೇವಸ್ಥಾನದ ಆಡಳಿತ ಅಧಿಕಾರಿ ಶ್ರೀನಿವಾಸ್, ಯೋಗ ನರಸಿಂಹ (ಮುರಳಿ), ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ಅಧ್ಯಕ್ಷ ಎಚ್. ಎನ್.ಶ್ರೀಧರಮೂರ್ತಿ, ಪ್ರಧಾನ ಕಾರ್ಯದರ್ಶಿ ವಿಕ್ರಂ ಅಯ್ಯಂಗಾರ್, ನಿರೂಪಕ ಅಜಯ್ ಶಾಸ್ತ್ರಿ, ಅರ್ಚಕರ ಸಂಘದ ಅಧ್ಯಕ್ಷ ವಿದ್ವಾನ್ ಕೃಷ್ಣಮೂರ್ತಿ, ಕಡಕೊಳ ಜಗದೀಶ್, ವಿಘ್ನೇಶ್ವರ ಭಟ್, ಸುದರ್ಶನ್, ಶ್ರೀಕಾಂತ್ ಕಶ್ಯಪ್, ಸುಚೇಂದ್ರ, ಚಕ್ರಪಾಣಿ, ಮಿರ್ಲೆ ಪನಿಶ್, ಗುರುಪ್ರಸಾದ್, ನವೀನ್ , ರವಿಚಂದ್ರ ಇತರರು ಇದ್ದರು.