ನೈರುತ್ಯ ಶಿಕ್ಷಕರ ಕ್ಷೇತ್ರದ ಸ್ಪರ್ಧೆಗೆ ಅವಕಾಶ ನೀಡಿ

31 ckm 7 kalmarudappa
ಎಚ್.ಸಿ.ಕಲ್ಮರುಡಪ್ಪ
Published on

ಚಿಕ್ಕಮಗಳೂರು: ನೈರುತ್ಯ ಶಿಕ್ಷಕರ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲು ತಾವು ಒಬ್ಬ ಆಕಾಂಕ್ಷಿಯಾಗಿದ್ದು, ಚುನಾವಣೆಗೆ ನನ್ನನ್ನು ಪರಿಗಣಿಸುವಂತೆ ಪಕ್ಷದ ಮುಖಂಡರ ಬಳಿ ಮನವಿ ಮಾಡಲಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎಚ್.ಸಿ.ಕಲ್ಮರುಡಪ್ಪ ಹೇಳಿದರು.
ಪಕ್ಷ ಟಿಕೆಟ್ ನೀಡಿ ಚುನಾವಣೆಗೆ ಸ್ಪರ್ಧಿಸಿದರೆ ನನ್ನನ್ನು ಬೆಂಬಲಿಸಿ ಆಶೀರ್ವದಿಸುವಂತೆ ಶಿಕ್ಷಕ ಸಮೂಹಕ್ಕೆ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು. ಒಬ್ಬ ಶಿಕ್ಷಕರ ಮಗನಾಗಿ ಶಿಕ್ಷಕರ ನೋವು ಬವಣೆಗಳ ಬಗ್ಗೆ ತಿಳಿದಿದೆ. ಜಿಪಂ ಅಧ್ಯಕ್ಷ, ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷನಾದಾಗ ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸಿದ್ದು, ಎಂಎಲ್‌ಸಿ ಚುನಾವಣೆಯಲ್ಲಿ ನನ್ನನ್ನು ಗೆಲ್ಲಿಸಿದಲ್ಲಿ ಶಿಕ್ಷಕರ ಸಮಸ್ಯೆ ಪರಿಹಾರಕ್ಕೆ ಪ್ರಾಮಾಣಿಕವಾಗಿ ಯತ್ನಿಸಲಾಗುವುದು ಎಂದು ಭರವಸೆ ನೀಡಿದರು.
ತನ್ನನ್ನು ನೈರುತ್ಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿಯನ್ನಾಗಿಸುವಂತೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಬಿಜೆಪಿ ನಾಯಕರಾದ ಬಿ.ಎಸ್.ಯಡಿಯೂರಪ್ಪ, ಕೆ.ಎಸ್.ಈಶ್ವರಪ್ಪ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ನೈರುತ್ಯ ಕ್ಷೇತ್ರದ ಸಂಚಾಲಕ ಸಿ.ಟಿ.ರವಿಗೆ ಮನವಿ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಸಂಘ ನಿಷ್ಠೆ, ಸತ್ಯ ನಿಷ್ಠೆ, ಪಕ್ಷ ನಿಷ್ಠೆ ಹಾಗೂ ತತ್ವ ನಿಷ್ಠೆಗಳಿಂದ ಬಿಜೆಪಿ ಯುವಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ, ಬೀರೂರು ಕ್ಷೇತ್ರ ಸಮಿತಿ ಅಧ್ಯಕ್ಷನಾಗಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ, ಜಿಲ್ಲಾ ಉಪಾಧ್ಯಕ್ಷನಾಗಿ, ಜಿಲ್ಲಾ ಅಧ್ಯಕ್ಷನಾಗಿ ಎರಡು ಬಾರಿ ಕಾರ್ಯನಿರ್ವಹಿಸಿದ್ದೇನೆ. ಚುನಾವಣೆಯಲ್ಲಿ ಅವಕಾಶ ನೀಡಿದರೆ ನ್ಯಾಯ ಸಮ್ಮತವಾಗಿ ಕಾರ್ಯನಿರ್ವಹಿಸಲಾಗುವುದು ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net