ಶಿಕ್ಷಕರಿಗೆ ಪಾಠ ಮಾಡುವ ಕೆಲಸ ಮಾತ್ರ ಕೊಡಿ,  ಸರ್ಕಾರಕ್ಕೆ ಸಭಾಪತಿ ಬಸವರಾಜ ಹೊರಟ್ಟಿ ಪತ್ರ

Published on

ಹುಬ್ಬಳ್ಳಿ: ಕಡಿಮೆ ಫಲಿತಾಂಶ ಕೊಡುವ ಶಿಕ್ಷಕರಿಗೆ ಬಡ್ತಿ ಇಲ್ಲ ಎಂಬ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಇತ್ತೀಚಿನ ಆದೇಶ ಸರಿಯಾದುದಲ್ಲ ಎಂದು ಸಭಾಪತಿ ಬಸವರಾಜ ಹೊರಟ್ಟಿ ಅಭಿಪ್ರಾಯಪಟ್ಟಿದ್ದಾರೆ.

ಶೇ. 60ಕ್ಕಿಂತ ಫಲಿತಾಂಶ ಕಡಿಮೆಯಾದರೆ ಅಂತಹ ಶಾಲೆಯ ಶಿಕ್ಷಕರಿಗೆ ಮುಂಬಡ್ತಿ ಇಲ್ಲ, ಅನುದಾನ ಕೊಡುವುದಿಲ್ಲ ಎಂಬ ಅನೇಕ ವಿಚಾರಗಳನ್ನು ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಆದರೆ, ಶಿಕ್ಷಕರಿಗೆ ಕೇವಲ ಪಾಠ ಮಾಡುವ ಕೆಲಸವನ್ನು ನೀಡಿದರೆ ಇದು ಸಾಧ್ಯವಾಗುತ್ತದೆ ಎಂದು ಸಚಿವ ಮಧು ಬಂಗಾರಪ್ಪ ಅವರಿಗೆ ಬರೆದಿರುವ ಪತ್ರದಲ್ಲಿ ಅವರು ತಿಳಿಸಿದ್ದಾರೆ.

ರಾಜ್ಯದಲ್ಲಿ ಪ್ರಾಥಮಿಕ, ಪ್ರೌಢ, ಪದವಿಪೂರ್ವ ಸೇರಿದಂತೆ ಒಟ್ಟು 29 ಸಾವಿರ ಶಿಕ್ಷಕರ ಕೊರತೆ ಇದೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಖಾಸಗಿ ಆಡಳಿತ ಶಿಕ್ಷಣ ಸಂಸ್ಥೆಗಳಲ್ಲಿ 2015ರಿಂದ ಶಿಕ್ಷಕರ ನೇಮಕಾತಿಯನ್ನು ನಿಲ್ಲಿಸಲಾಗಿದೆ. ಹೀಗಿರುವಾಗ ಶಿಕ್ಷಕರು ಇಲ್ಲದೆಯೇ ಶಾಲೆಯಲ್ಲಿ ಮಕ್ಕಳು ಹೇಗೆ ಶಿಕ್ಷಣ ಪಡೆಯುತ್ತಾರೆ ?
ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ಹಾಲು, ಚಿಕ್ಕಿ, ಮೊಟ್ಟೆ ಕೊಡಲಾಗುತ್ತದೆ. ಇದರ ಲೆಕ್ಕವನ್ನು ಕಡ್ಡಾಯವಾಗಿ ನಿತ್ಯ ಬಿಇಒ ಕಚೇರಿಗೆ ಸಲ್ಲಿಸಬೇಕೆಂಬ ನಿಯಮವಿದೆ. ಕೆಲವೊಮ್ಮೆ ಮೊಟ್ಟೆಗಳು ಕೆಟ್ಟಿದ್ದರೆ ಅವುಗಳನ್ನು ಏನು ಮಾಡಿದಿರಿ ಎಂದು ಶಿಕ್ಷಕರನ್ನೇ ಕೇಳಲಾಗುತ್ತದೆ. ಹೀಗಾಗಿ ಶಿಕ್ಷಕರೇ ತಮ್ಮ ಸ್ವಂತ ಹಣ ಖರ್ಚು ಮಾಡಿ ತಂದು ಕೊಡುತ್ತಾರೆ. ಇಂತಹ ಪ್ರಸಂಗಗಳಿಂದ ಶಿಕ್ಷಕರು ಮಾನಸಿಕವಾಗಿ ನೆಮ್ಮದಿಯನ್ನು ಕಳೆದುಕೊಂಡು ಪಾಠ ಪ್ರವಚನ ಮಾಡಲು ಸಾಧ್ಯವಾಗದೇ ಪರದಾಡುತ್ತಾರೆ.

ಕೇರಳ ರಾಜ್ಯದಲ್ಲಿ ಒಬ್ಬ ಶಿಕ್ಷಕ ಒಂದು ಕೊಠಡಿ. ಮಕ್ಕಳು ಎಷ್ಟೇ ಇರಲಿ ಅಲ್ಲಿ ಶಿಕ್ಷಣ ಸುಧಾರಣೆಯಾಗುತ್ತದೆ. ಇಲ್ಲಿ ನನ್ನ ಮೂಲ ಪ್ರಶ್ನೆ ಏನೆಂದರೆ ಶಿಕ್ಷಕರೇ ಇಲ್ಲದಿದ್ದರೆ ಪಾಠವನ್ನು ಯಾರು ಮಾಡುತ್ತಾರೆ? ಸರ್ಕಾರಿ ಸಂಸ್ಥೆಗಳಲ್ಲಿ ಅತಿಥಿ ಶಿಕ್ಷಕರನ್ನು ಕೊಡುತ್ತೀರಿ. ಇಲ್ಲಿ ಕೊಡುವುದಿಲ್ಲ. ಇದರಲ್ಲಿ ಸರ್ಕಾರಿ ಶಾಲೆಗಳಿಗೆ ಒಂದು ಕಾನೂನು ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಒಂದು ಕಾನೂನು ಎಂಬಂತಾಗಿದೆ.

ಎಷ್ಟೋ ಕಡೆಗೆ ಸರ್ಕಾರಿ ಶಾಲೆ ಇಲ್ಲದೆ ಖಾಸಗಿ ಅನುದಾನಿತ ಶಾಲೆಗಳು ಮಕ್ಕಳಿಗೆ ಶಿಕ್ಷಣ ಕೊಡುತ್ತ ಬಂದಿವೆ.

ಸರ್ಕಾರ ಮಾಡದ ಕೆಲಸವನ್ನು ಮಠಗಳು, ಅಂಜುಮನ್ ಸಂಸ್ಥೆಗಳು, ಕ್ರೈಸ್ತ ಮಿಷನರಿಗಳು ಮಾಡುತ್ತಿವೆ. ಅನುದಾನಿತ ಒಂದೊಂದು ಶಾಲೆಯಲ್ಲಿ ಒಬ್ಬರು ಅಥವಾ ಇಬ್ಬರು ಶಿಕ್ಷಕರಿದ್ದು, ಇಂತಹ ಶಾಲೆಯಲ್ಲಿ ಕಲಿಕೆಗೆ ತೊಂದರೆಯಾಗುತ್ತದೆ ಎಂದು ಸರ್ಕಾರ ಅರ್ಥ ಮಾಡಿಕೊಳ್ಳಬೇಕು.

ಶೇ. 60, 50ರಷ್ಟು ಫಲಿತಾಂಶ ತರಬೇಕೆಂದರೆ ಬೇರೆ ಅಡ್ಡದಾರಿ ಹಿಡಿದು ನಕಲು ಮಾಡಿಸುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ.
ಬಿಸಿಯೂಟ ಮೊಟ್ಟೆ ಕೊಡುವುದು, ಹಾಲು, ಚಿಕ್ಕಿ, ಇತ್ಯಾದಿ ಖರೀದಿ ಮಾಡುವ ಜವಾಬ್ದಾರಿ ಶಿಕ್ಷಕರಿಗೆ ವಹಿಸಿರುತ್ತಾರೆ. ಇದರ ನಡುವೆ ಶಾಲೆಯ ಶುಚಿತ್ವ ಕಾಪಾಡುವುದು, ಈ ಎಲ್ಲ ಕೆಲಸಗಳಿಗೆ ಬೇರೆ ಸಿಬ್ಬಂದಿ ನೇಮಿಸಬೇಕು. ಆಗ ಮಾತ್ರ ಶಿಕ್ಷಕರು ಕಲಿಕೆ ಕಡೆ ಗಮನ ನೀಡಿ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯ.

ಈ ರೀತಿ ಆಗದೇ ಇದ್ದರೆ ಮುಂದಿನ ದಿನಗಳಲ್ಲಿ ಮತ್ತಷ್ಟು ಶಾಲೆಗಳು ಮುಚ್ಚುವ ಹಂತಕ್ಕೆ ತಲುಪುತ್ತವೆ. ಶಿಕ್ಷಕರಿಗೆ ಕೇವಲ ಪಾಠ ಪ್ರವಚನ ಮಾಡಲು ಅನುವು ಮಾಡಿಕೊಟ್ಟರೆ ಸರ್ಕಾರ ಅಂದುಕೊಂಡಿದ್ದು ಸಾಧಿಸಲು ಸಾಧ್ಯ ಎಂದು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net