150 ದಿನ ಎನ್‌ಆರ್‌ಇಜಿ ಕೆಲಸ ನೀಡಿ

srt 1
Published on

ಶಿರಹಟ್ಟಿ: ಈಗಾಗಲೇ ಶಿರಹಟ್ಟಿ ತಾಲೂಕು ಬರಪೀಡಿತ ಪ್ರದೇಶವನ್ನಾಗಿ ಸರ್ಕಾರ ಘೋಷಣೆ ಮಾಡಿದೆ. ಮುಂಬರುವ ದಿನಗಳಲ್ಲಿ ಕಡಿಯುವ ನೀರಿನ ಅಭಾವ, ಜಾನುವಾರುಗಳಿಗೆ ಮೇವಿನ ಸಮಸ್ಯೆಯಾಗದಂತೆ ಎಚ್ಚರಿಕೆ ವಹಿಸುವ ಜತೆಗೆ ಎನ್‌ಆರ್‌ಇಜಿ ಯೋಜನೆಯಡಿ ಹೆಚ್ಚುವರಿ ಕ್ರಿಯಾಯೋಜನೆ ಸಿದ್ಧಪಡಿಸಿ ಪ್ರತಿ ಕುಟುಂಬಕ್ಕೆ 150 ದಿನ ಕೆಲಸ ನೀಡಿ ಎಂದು ಬರ ನಿರ್ವಹಣೆ ಸಮಿತಿ ತಾಲೂಕು ನೋಡಲ್ ಅಧಿಕಾರಿ ಅಮಿತ ಬಿದ್ರಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ತಾಪಂ ಸಾಮರ್ಥ್ಯಸೌಧದ ಸಭಾಭವನದಲ್ಲಿ ಬರ ನಿರ್ವಹಣೆ ಕುರಿತು ಚರ್ಚಿಸಲು ಗುರುವಾರ ಏರ್ಪಡಿಸಿದ್ದ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

ಈಗಾಗಲೇ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದಲ್ಲಿ ಬರಗಾಲ ನಿರ್ವಹಣೆ ಸಂಬಂಧ ಇಲಾಖೆ ಅಧಿಕಾರಿಗಳ ಮಟ್ಟದಲ್ಲಿ ಸಭೆ ನಡೆಸಿ, ಬರ ಪರಿಸ್ಥಿತಿ ನಿರ್ವಹಿಸಲು ಮಾಹಿತಿ ನೀಡಲಾಗಿದೆ. ಸದ್ಯಕ್ಕೆ ತಾಲೂಕಿನಲ್ಲಿ ಕುಡಿಯುವ ನೀರಿನ ಮತ್ತು ಜಾನುವಾರುಗಳಿಗೆ ಮೇವಿನ ಕೊರತೆ ಇಲ್ಲ. ಆದರೆ, ಸಂಭವನೀಯ ಸಮಸ್ಯೆ ಗಮನದಲ್ಲಿಟ್ಟುಕೊಂಡು ರೈತರಿಗೆ ಪ್ರಯೋಜನವಾಗುವ ನಿಟ್ಟಿನಲ್ಲಿ ಹಾಗೂ ಕೂಲಿ ಕಾರ್ಮಿಕರಿಗೆ ಉದ್ಯೋಗ ಒದಗಿಸಲು ಕೃಷಿ, ತೋಟಗಾರಿಕೆ, ಅರಣ್ಯ, ರೇಷ್ಮೆ, ಪಿಆರ್‌ಇಡಿ, ಇಲಾಖೆ ಅಧಿಕಾರಿಗಳು ಆಯಾ ಗ್ರಾಪಂ ಪಿಡಿಒಗಳಿಂದ ಮಾಹಿತಿ ಪಡೆದು ಹೆಚ್ಚುವರಿ ಕ್ರಿಯಾಯೋಜನೆ ಸಿದ್ಧಡಿಸಿ ನಿಗದಿತ ಅವಧಿಯಲ್ಲಿ ಜಿಪಂಗೆ ಪ್ರಸ್ತಾವ ಸಲ್ಲಿಸಿ ಅನುಮೋದನೆ ಪಡೆಯುವ ಮೂಲಕ ಪ್ರತಿ ಕುಟುಂಬಕ್ಕೆ ನೂರು ದಿನಗಳ ಬದಲು 150 ಮಾನವ ದಿನ ಸೃಷ್ಟಿಸಿ ಲೇಬರ್ ಆಧಾರಿತ ಕೂಲಿ ಕೆಲಸ ನೀಡುವ ಮೂಲಕ ಎನ್‌ಆರ್‌ಇಜಿ ಯೋಜನೆಯ ಸಹಾಯಧನ ಪಡೆಯಲು ಮುಂದಾಗಬೇಕು ಎಂದರು.

ತಹಸೀಲ್ದಾರ್ ಅನಿಲ ಬಡಿಗೇರ ಮಾತನಾಡಿ, ರೈತರ ನೆರವಿಗೆ ಬರುವ ನಿಟ್ಟಿನಲ್ಲಿ ಕೃಷಿ, ತೋಟಗಾರಿಕೆ ಇಲಾಖೆ ಅಧಿಕಾರಿಗಳ ಮೂಲಕ ಬೆಳೆಹಾನಿ ಸಮೀಕ್ಷೆ ಶೀಘ್ರದಲ್ಲಿ ಪೂರ್ಣಗೊಳಿಸಿ ಸರ್ಕಾರಕ್ಕೆ ಮಾಹಿತಿ ಸಲ್ಲಿಸಲಾಗುತ್ತಿದೆ. ದನ, ಕರುಗಳಿಗೆ ಮೇವಿನ ಕೊರತೆ ಇಲ್ಲ ಎಂಬುದು ಕಂಡು ಬಂದಿದ್ದು, ಆದಾಗ್ಯೂ ಪರ್ಯಾಯ ವ್ಯವಸ್ಥೆಗೆ ತಾಲೂಕಾಡಳಿತ ಸನ್ನದ್ಧವಾಗಿದ್ದು, ಗ್ರಾಮಾಂತರ ಪ್ರದೇಶಗಳಲ್ಲಿ ಕುಡಿಯುವ ನೀರಿನ ಅಭಾವ ತಲೆದೋರದಂತೆ ಹಾಗೂ ಉದ್ಯೋಗಕ್ಕಾಗಿ ಗುಳೆ ಹೋಗದಂತೆ ಎಚ್ಚರಿಕೆ ವಹಿಸಲು ಗ್ರಾಮ ಲೆಕ್ಕಾಧಿಕಾರಿ, ಪಿಡಿಒಗಳಿಗೆ ಸೂಚನೆ ನೀಡಲಾಗಿದೆ ಎಂದರು.

ತೋಟಗಾರಿಕೆ ಸಹಾಯಕ ನಿರ್ದೇಶಕ ಸುರೇಶ ಕುಂಬಾರ, ಕೃಷಿ ಅಧಿಕಾರಿ ರೇವಣೆಪ್ಪ ಮನಗೂಳಿ ಮಾತನಾಡಿದರು. ತಾಪಂ ಇಒ ಡಾ.ಎನ್.ಎಚ್. ಓಲೇಕಾರ ಹಾಗೂ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net