

ಕುಂದಗೋಳ: ಕಾರ್ವಿುಕ ಇಲಾಖೆ ಅಧಿಕಾರಿಗಳ ಕಾರ್ಯವೈಖರಿಯಿಂದ ತಾಲೂಕಿನಲ್ಲಿ ಕಟ್ಟಡ ಕಾರ್ವಿುಕರಿಗೆ ಸರಿಯಾದ ಸೌಲಭ್ಯ ದೊರೆಯುತ್ತಿಲ್ಲ. ಸಹಾಯಧನ, ವಿವಿಧ ಯೋಜನೆ ಹಾಗೂ ಕಿಟ್ಗಳಾಗಲಿ ನೈಜ ಫಲಾನುಭವಿಗಳಿಗೆ ದೊರೆಯುತ್ತಿಲ್ಲ. ಕೂಡಲೇ ಕಾರ್ವಿುಕ ಇಲಾಖೆ ಅಧಿಕಾರಿಗೆ ನೋಟಿಸ್ ಜಾರಿಗೊಳಿಸಬೇಕು. ಸಭೆಗೆ ಗೈರಾಗಿರುವ ಅಲ್ಪಸಂಖ್ಯಾತ ಇಲಾಖೆಯ ಅಧಿಕಾರಿಗೂ ನೋಟಿಸ್ ಕೊಡಬೇಕು ಎಂದು ಶಾಸಕ ಎಂ.ಆರ್. ಪಾಟೀಲ ತಾಪಂ ಇಒ ಜಗದೀಶ ಕಮ್ಮಾರಗೆ ಸೂಚಿಸಿದರು.
ಪಟ್ಟಣದ ತಾಪಂ ಸಭಾಭವನದಲ್ಲಿ ಬುಧವಾರ ಜರುಗಿದ ತ್ರೖೆಮಾಸಿಕ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅವರು ಮಾತನಾಡಿದರು. ಕಟ್ಟಡ ಕಾರ್ವಿುಕರು ವಿವಾಹ ನೋಂದಣಿ ಮಾಡಿಸಿ ಸಹಾಯಧನ ಪಡೆಯಲು ಆನ್ಲೈನ್ ಅರ್ಜಿ ಸಲ್ಲಿಸಿರುವುದನ್ನು ಯಾರ ಗಮನಕ್ಕೆ ತರದೆ ತಾವೊಬ್ಬರೇ ಫಲಾನುಭವಿಗಳ ಲಿಸ್ಟ್ ಫೈನಲ್ ಮಾಡಿದ್ದಾರೆ. ಜನಪ್ರತಿನಿಧಿಗಳು ಇರುವುದು ನಿಮಗೆ ತಿಳಿದಿಲ್ಲವೇ? ಎಂದು ಕಾರ್ವಿುಕ ಇಲಾಖೆ ಅಧಿಕಾರಿ ರಜನಿ ಹಿರೇಮಠ ಅವರಿಗೆ ಮೇಲೆ ಶಾಸಕರು ಗುಡುಗಿದರು.
ಆರೋಗ್ಯ ಇಲಾಖೆ ಅಧಿಕಾರಿ ಸೋಫಿಯಾ ದಾಸರಿ ಮಾಹಿತಿ ನೀಡುವಾಗ ವೆಂಕನಗೌಡ ಪಾಟೀಲ ಮಾತನಾಡಿ, ಮೂರು ಕಡೆ ಪ್ರಭಾರಿಯಾಗಿ ಕಾರ್ಯನಿರ್ವಹಿಸುವುದರಿಂದ ತಾಲೂಕಾಸ್ಪತ್ರೆಯಲ್ಲಿ ತೊಂದರೆ ಆಗುತ್ತಿದೆ. ವಾರದಲ್ಲಿ ಎರಡು ದಿನ ಮಾತ್ರ ಬಂದು ಹೋಗುವಂತಾಗಿದೆ. ರೋಗಿಗಳಿಗೆ ತೀವ್ರ ತೊಂದರೆಯಾಗುತ್ತಿದೆ. ಶಾಸಕರು ಇದನ್ನು ಸರಿಪಡಿಸಬೇಕು ಎಂದು ಮನವಿ ಮಾಡಿದರು. ಈ ಕುರಿತು ಡಿಎಚ್ಒ ಜತೆ ಮಾತನಾಡಿ ತೊಂದರೆ ಬಗೆಹರಿಸಲಾಗುವುದು ಎಂದು ಶಾಸಕರು ತಿಳಿಸಿದರು.
ಖಾಸಗಿ ಶಾಲೆಯಂತೆ ಸರ್ಕಾರಿ ಶಾಲೆಗಳಲ್ಲೂ ಗುಣಮಟ್ಟದ ಶಿಕ್ಷಣ ನೀಡಬೇಕು ಎಂದು ಬಿಇಒ ಮಾದೇವಿ ಮಾಡಲಗೇರಿ ಅವರಿಗೆ ಶಾಸಕರು ಸೂಚಿಸಿದರು. ಹೆಸ್ಕಾಂ ಅಧಿಕಾರಿ ಎ.ಎಂ. ಮಠದ ಅವರಿಗೆ ಕೆಲ ಗ್ರಾಮಗಳಲ್ಲಿ ವಿದ್ಯುತ್ ತಂತಿಯ ಸಮಸ್ಯೆಗಳಿದ್ದು, ಅವುಗಳನ್ನು ಸರಿಪಡಿಸಬೇಕು ಎಂದು ಶಾಸಕರು ಸೂಚಿಸಿದರು.
ಕೃಷಿ ಅಧಿಕಾರಿ ಭಾರತಿ ಮೆಣಸಿನಕಾಯಿ ಮಾಹಿತಿ ನೀಡಿ, ತಾಂತ್ರಿಕ ತೊಂದರೆಯಿಂದಾಗಿ ಕೆಲ ರೈತರಿಗೆ ಬೆಳೆ ಹಾನಿ ಪರಿಹಾರ ಹಣ ಇನ್ನೂ ಜಮೆ ಆಗಿಲ್ಲ. ಈ ಕುರಿತು ಪರಿಶೀಲಿಸಿ ಮಾಹಿತಿ ಕಳಿಸಲಾಗುವುದು ಎಂದು ತಿಳಿಸಿದರು. ಪ್ರತಿಕ್ರಿಯಿಸಿದ ಶಾಸಕರು, ಇನ್ಮುಂದೆ ಬೆಳೆ ವಿಮೆ ಪರಿಹಾರ ಹಣ ನೀಡುವಾಗ ಅಣೆವಾರು ಸರಿಯಾಗಬೇಕು ಎಂದರು.
ಲೋಕೋಪಯೋಗಿ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಪಶು ಸಂಗೋಪನಾ ಇಲಾಖೆ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗ ಸೇರಿ ವಿವಿಧ ಇಲಾಖೆಗಳ ಅಧಿಕಾರಿಗಳು ತಮ್ಮ ಇಲಾಖೆಗಳ ಮಾಹಿತಿ ನೀಡಿದರು.
ತಹಸೀಲ್ದಾರ್ ರಾಜು ಮಾವರಕರ, ತಾಪಂ ಇಒ ಜಗದೀಶ ಕಮ್ಮಾರ, ಸಿದ್ದಪ್ಪ ಸಿ., ಎ.ಎ. ನಾಯ್ಕರ, ಮೀನಾಕ್ಷಿ ಗುದಗಿ, ವಿ.ಸಿ. ಕುಲಕರ್ಣಿ, ಮಂಜುನಾಥ ಕರೋಶಿ, ಹನುಮಂತಗೌಡ ಪಾಟೀಲ, ಡಿ.ಬಿ. ದೊಡ್ಡಮನಿ, ಮಲ್ಲೇಶ ಬೆಳವಡಿ, ರಾಘವೇಂದ್ರ ಕುಸುಗಲ್ಲ, ಹುಸೇನ್ ಹುಬ್ಬಳ್ಳಿ, ಈರಮ್ಮ ಬಾರಕೇರ, ಪಿಡಿಒ, ಇತರರಿದ್ದರು.